ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಪ್ರಮಾಣ ಕುಸಿತಕ್ಕೆ ವಿಷಾದ: ಅರವಿಂದ ಸಾಯಿಬಣ್ಣ ಹಾಗರಗಿ

Last Updated 26 ಜನವರಿ 2023, 5:09 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ತಾವು ಮತದಾನ ಮಾಡುವುದರೊಂದಿಗೆ ಕುಟುಂಬದವರನ್ನು ಸಹ ಮತದಾನ ಮಾಡಲು ಯುವ ಮತದಾರರು ಪ್ರೇರೇಪಿಸಬೇಕಿದೆ’ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಅರವಿಂದ ಸಾಯಿಬಣ್ಣ ಹಾಗರಗಿ ಹೇಳಿದರು.

ಭಾರತ ಚುನಾವಣಾ ಆಯೋಗ, ತಾಲ್ಲೂಕು ಆಡಳಿತದ ಸಹಯೋಗದಡಿ ನಗರದ ಡಾ.ರಾಜ್‍ಕುಮಾರ್ ಕಲಾ ಮಂದಿರದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಡೀ ಜಗತ್ತಿನಲ್ಲಿ 18ನೇ ವರ್ಷಕ್ಕೆ ಮತದಾನದ ಹಕ್ಕು ನೀಡಿದ ಏಕೈಕ ದೇಶ ನಮ್ಮದಾಗಿದೆ. ಅಂತೆಯೇ ಹೆಣ್ಣು ಮಕ್ಕಳು, ಅಂಗವಿಕಲರು ಸೇರಿದಂತೆ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಮತದಾನದ ಹಕ್ಕು ನೀಡಿದ ದೇಶ ನಮ್ಮದು ಎಂದರು.

ಮತದಾನದ ಮಹತ್ವ ಹಾಗೂ ಭಾರತ ಚುನಾವಣಾ ಆಯೋಗ ಸ್ಥಾಪಿಸಿದ ನೆನಪಿಗಾಗಿ 2011ರಿಂದ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದೆ. ಮತದಾನದ ಮಹತ್ವ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.

90 ವರ್ಷ ಮೀರಿದ ಹಿರಿಯರು ಮತದಾನ ಮಾಡುತ್ತಿದ್ದು, ಕಿರಿಯರು ಮತದಾನ ಮಾಡದೆ ಮತದಾನದ ದಿನ ಪ್ರವಾಸಕ್ಕೆ ಹೋಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆಯಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಆರಂಭಿಕ ಹಂತವೇ ಚುನಾವಣಾ ಪ್ರಕ್ರಿಯೆಯಾಗಿದೆ. ಯುವ ಮತದಾರರು ಪ್ರತಿ ಚುನಾವಣೆಯಲ್ಲೂ ಕಡ್ಡಾಯವಾಗಿ ಮತದಾನ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಜನರಿಗೆ ಮತದಾನದ ಬೆಲೆ ತಿಳಿಯುತ್ತಿಲ್ಲ. ಮತದಾನ ಸಂವಿಧಾನದ ಮೂಲಭೂತ ಕರ್ತವ್ಯವಾಗಿದೆ. ಈ ಅವಕಾಶ ನಾವು ಸದುಪಯೋಗಪಡಿಸಿಕೊಳ್ಳಬೇಕು. ಈ ದಿಸೆಯಲ್ಲಿ ನಾನು ಖಚಿತವಾಗಿ ಮತದಾನ ಮಾಡುವೆ ಎನ್ನುವ ಪ್ರತಿಜ್ಞೆಯನ್ನು ಸ್ವೀಕರಿಸಬೇಕಿದೆ ಎಂದರು.

ತಹಶೀಲ್ದಾರ್ ಮೋಹನಕುಮಾರಿ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಮತದಾರರ ಜಾಗೃತಿಗಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ನೀಡಲಾಯಿತು. ನೂತನವಾಗಿ ನೋಂದಾಯಿಸಿದ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್‌. ಶ್ರೀನಾಥಗೌಡ, ಡಿವೈಎಸ್‍ಪಿ ನಾಗರಾಜ್, ಚುನಾವಣಾ ಶಿರಸ್ತೇದಾರ್ ಕೆ. ಕಿರಣ್‌ಕುಮಾರ್, ಬಿಇಒ ಆರ್.ರಂಗಪ್ಪ, ಸಿಡಿಪಿಒ ಅನಿತಾಲಕ್ಷ್ಮೀ, ಅಕ್ಷರ ದಾಸೋಹ ತಾಲ್ಲೂಕು ಸಹಾಯಕ ನಿರ್ದೇಶಕಿ ದ್ರಾಕ್ಷಾಯಣಿ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ಅಧ್ಯಕ್ಷ ಹುಲಿಕಲ್‌ ನಟರಾಜ್‌, ಪರಿಸರವಾದಿ ಕೆ. ಗುರುದೇವ್, ಕೊಂಗಾಡಿಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಿ.ಎನ್. ಬಾಬು, ಪ್ರಾಂಶುಪಾಲ ಆನಂದಮೂರ್ತಿ, ಉಪ ತಹಶೀಲ್ದಾರ್ ಕರಿಯಾ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT