ಗುರುವಾರ , ಡಿಸೆಂಬರ್ 5, 2019
21 °C
ಗಂಗಾಪುರ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆ

ಅನರ್ಹ ರಾಜಕಾರಣಿ ಬೇಕೇ: ಶರತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಕಳೆದ ಬಾರಿ ಚುನಾವಣೆಯಲ್ಲಿ ಹೊಸಕೋಟೆ ತಾಲ್ಲೂಕಿನ ಮತದಾರರು ಬಹುಮತ ಕೊಟ್ಟು ಶಾಸಕರಾಗಿ ಆಯ್ಕೆಯಾದವರು ಜನರ ತೀರ್ಪನ್ನು ಧಿಕ್ಕರಿಸಿ, ಹೊಸಕೋಟೆ ತಾಲ್ಲೂಕಿನ ಜನರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ಎಂಟಿಬಿ ನಾಗರಾಜ್ ಕುರಿತು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆರೋಪಿಸಿದರು.

ನಂದಗುಡಿ ಹೋಬಳಿಯ ಗಂಗಾಪುರ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳಲ್ಲಿ ಹೊಸಕೋಟೆ ತಾಲ್ಲೂಕಿನ ಹೊರಗಿನವರಿಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಸ್ಥಳಿಯರಿಗೆ ಅವಕಾಶ ನೀಡಿಲ್ಲ. ಸ್ಥಳೀಯರಲ್ಲಿ ಅವರಿಗೆ ಯಾರು ಅಭ್ಯರ್ಥಿಗಳು ಸಿಗಲಿಲ್ಲವೇ ಎಂದು ಪ್ರಶ್ನಿಸಿದರು.

ತಾಲ್ಲೂಕಿಗೆ ಅರ್ಹತೆ ಇರುವ ರಾಜಕಾರಣೆ ಬೇಕಾ ಅಥವಾ ಅನರ್ಹ ರಾಜಕಾರಣೆ ಬೇಕಾ, ಪಕ್ಷಕ್ಕೆ ನಿಷ್ಠರಾಗಿದ್ದವರು ಬೇಕಾ, ದ್ರೋಹ ಮಾಡಿದವರು ಬೇಕಾ ಎಂಬುವುದನ್ನು ತಾಲ್ಲೂಕಿನ ಸ್ವಾಭಿಮಾನಿ ಜನರು ಈಗ ನಿರ್ಧರಿಸಲು ಒಳ್ಳೆಯ ಕಾಲ ಬಂದಿದೆ ಎಂದರು.

ಮೂರು ನಾಲ್ಕು ವರ್ಷದಿಂದ ಕೆ.ಸಿ.ವ್ಯಾಲಿ ಪೈಪ್ ಲೈನ್ ತಾಲ್ಲೂಕನ್ನು ಹಾದು ಹೋಗಿದ್ದರೂ ಇಲ್ಲಿಯವರೆಗೆ ತಾಲ್ಲೂಕಿನ ನೀರಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವವರು ಈಗ ಚುನಾವಣೆಯ ಸಂಧರ್ಭದಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಮಾತಾನಾಡುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್ ವಿರುದ್ಧ ಆರೋಪಿಸಿದರು.

ಮೈತ್ರಿ ಸರ್ಕಾರದ ಸಂದರ್ಭದಲ್ಲಿ 12 ಶಾಸಕರು ಪಕ್ಷಾಂತರ ಆಗುತ್ತಿದ್ದಾರೆ, ಸರ್ಕಾರ ಬದಲಾಗುತ್ತದೆ. ಸರ್ಕಾರ ಬದಲಾದರೆ, ಐಟಿ ಮತ್ತು ಇಡಿ ಇಲಾಖೆಯವರು ಕಾಡುತ್ತಾರೆ ಎಂಬ ಭಯಕ್ಕೆ ಮುಂಬೈಗೆ ಓಡಿ ಹೋದರು ಎಂದು ಟೀಕಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ‘ನಂದಗುಡಿ ಹೋಬಳಿಯ ಗ್ರಾಮಗಳಲ್ಲಿ ಬೆಳಿಗ್ಗೆಯಿಂದ ಪ್ರಚಾರ ನಡೆಸಲಾಗುತ್ತಿದ್ದು, ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಬಚ್ಚೇಗೌಡರು ಬಿಜೆಪಿ ಪಕ್ಷದ ಸಂಸದರಾಗಿರುವುದರಿಂದ ಅವರು ಪ್ರಚಾರಕ್ಕೆ ನಮ್ಮ ಜತೆ ಬರುವುದಿಲ್ಲ, ಆದರೂ ಅವರು ಕೊಟ್ಟಿರುವ ಜನರ ಆಶೀರ್ವಾದ ಹಾಗೂ ದೇವರ ಆಶೀರ್ವಾದ ಸದಾ ನಮ್ಮ ಜತೆಯಲ್ಲಿ ಇದೆ’ ಎಂದರು.

ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತಾಲ್ಲೂಕಿನ ಗಡಿ ಭಾಗದಲ್ಲಿರುವ ಗೇರಹಳ್ಳಿ ಗ್ರಾಮದಲ್ಲಿ ಸುಮಾರು 20-25 ಕುಟುಂಬಗಳಿದ್ದು ಊರಿಗೆ ಸಂಪರ್ಕ ಕಲ್ಪಿಸುವ ಸರಿಯಾದ ರಸ್ತೆಯಿಲ್ಲ ಎಂದು ಗ್ರಾಮಸ್ಥರು ದೂರಿದರು.

ಪ್ರಚಾರ ಕಾರ್ಯಕ್ರಮದಲ್ಲಿ ಹೊಸಕೋಟೆ ಟಿಎಪಿಸಿಎಮೆಸ್ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಸ್.ಎಂ. ಮಂಜು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಜಶೇಖರಗೌಡ, ಟಿ.ಎಸ್.ರಾಜಶೇಖರ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್ ಮುಖಂಡರಾದ ಭುವನಹಳ್ಳಿ ಗೋಪಾಲಪ್ಪ, ನಡುವಿನಪುರ ಮಂಜುನಾಥ್, ನಂದಗುಡಿಯ ಧರ್ಮೇಶ್, ಚನ್ನಕೃಷ್ಣ, ಗುರುಬಸಪ್ಪ ಹಾಗೂ ಮುಖಂಡರು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು