ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಕನಿಕರಕಿಂತಲೂ ಪ್ರೋತ್ಸಾಹ ಮುಖ್ಯ

ವಿಶ್ವ ಅಂಗವಿಕಲರ ದಿನಾಚರಣೆ ವಿಶೇಷ
Last Updated 3 ಡಿಸೆಂಬರ್ 2020, 14:24 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಅಪ್ಪ, ಅಮ್ಮ ಬೆನ್ನ ಮೇಲೆ ಕೂಸುಮರಿ ಹೊತ್ತುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುತ್ತಿದ್ದರು. ಶಾಲಾ ದಿನಗಳಿಂದಲೂ ಚಿತ್ರಕಲೆಯ ಬಗ್ಗೆ ಹೆಚ್ಚಿನ ಒಲವು ಇತ್ತು. ಇದನ್ನು ಗಮನಿಸಿದ್ದ ತಮಿಳುನಾಡಿನ ಅಪ್ಪನ ಸಂಬಂಧಿಕರೊಬ್ಬರು ನನ್ನನ್ನು ತಂಜಾವೂರಿನಲ್ಲಿ ಆರು ತಿಂಗಳ ಕಾಲ ಚಿತ್ರಕಲಾ ಶಾಲೆಗೆ ಸೇರಿಸಿದರು. ಹೀಗಾಗಿ ನಾನು ತಂಜಾವೂರು ಶೈಲಿಯ ಚಿತ್ರಕಲೆಯಲ್ಲೇ ಜೀವನ ರೂಪಿಸಿಕೊಳ್ಳುವ ಹಾದಿಯಲ್ಲಿ ಇದ್ದೇನೆ...’

ಇದು ನಗರದ ಅಂಚಿನಲ್ಲಿರುವ ದರ್ಗಾಜೋಗಹಳ್ಳಿ ನಿವಾಸಿ ಡಿ.ಆನಂದ್‌ಕುಮಾರ್‌ ಅವರ ಮಾತುಗಳು.

‘ನನಗೆ ಹುಟ್ಟಿನಿಂದಲೇ ಎರಡೂ ಕಾಲುಗಳು ಇಲ್ಲದಿದ್ದರು ಅಮ್ಮ, ಅಪ್ಪ ಮಗನಿಗೆ ಒಂದಿಷ್ಟು ವಿದ್ಯೆ ಇರಲಿ ಎಂಬ ಉದ್ದೇಶದಿಂದ ತಮ್ಮ ಕೆಲಸದ ನಡುವೆಯೂ ಯಾರಾದರು ಒಬ್ಬರು ಬಿಡುವು ಮಾಡಿಕೊಂಡು ಶಾಲೆಗೆ ಬಿಟ್ಟು ಬರುತ್ತಿದ್ದರು. ಎಸ್‌ಎಸ್‌ಎಲ್‌ಸಿವರೆಗೆ ಶಾಲೆಗೆ ಹೋಗಿ ಕಲಿತೆ. ದೂರ ಶಿಕ್ಷಣದ ಮೂಲಕ ಪಿಯುಸಿ ಓದಿ ಉತ್ತೀರ್ಣನಾದೆ. ಅಮ್ಮ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋಗುತ್ತಾರೆ. ಅಪ್ಪ ಮಗ್ಗದ ಕೆಲಸ. ನನ್ನ ಬಳಿ ಮೂರು ಚಕ್ರದ ಬೈಕ್‌ ಇದೆ. ಅಮ್ಮನನ್ನು ಬಸ್‌ ನಿಲ್ದಾಣಕ್ಕೆ ಬಿಟ್ಟು ಬರುವುದು, ಕರೆತರುವ ಕೆಲಸ ಪ್ರತಿನಿತ್ಯ. ಇದರೊಂದಿಗೆ ಅಮ್ಮನಿಗೆ ಅಡುಗೆ ಕೆಲಸದಲ್ಲಿ ಒಂದಿಷ್ಟು ಸಹಾಯ ಮಾಡುತ್ತ, ಓದುತ್ತ ದಿನ ಕಳೆಯುತ್ತೇನೆ’ ಎಂದು ಆನಂದ್‌ಕುಮಾರ್‌ ತಮ್ಮ ನಿತ್ಯದ ದಿನಚರಿಯನ್ನು ಬಿಚ್ಚಿಟ್ಟರು.

ಪ್ರೋತ್ಸಾಹದ ನಿರೀಕ್ಷೆ: ‘ಅಂಗವಿಕಲತೆಯನ್ನು ಮೀರಿ ಸಾಧನೆ ಮಾಡುವವರಿಗೆ ಕನಿಕರಕಿಂತಲು ಪ್ರೋತ್ಸಾಹ, ಅವಕಾಶ ಮುಖ್ಯವಾಗಿರುತ್ತದೆ. ಮಣ್ಣಿನಲ್ಲಿ ಮೂರ್ತಿಗಳನ್ನು ಮಾಡುವುದನ್ನು ನೋಡಿದ್ದ ದೊಡ್ಡಬಳ್ಳಾಪುರದ ಸುಚೇತನ ಎಜುಕೇಷನ್‌ ಮತ್ತು ಚಾರಿಟಬಲ್‌ ಟ್ರಸ್ಟ್‌ನ ಸದಸ್ಯರು ಆಗಸ್ಟ್‌ನಲ್ಲಿ ವೆಬಿನಾರ್‌ ಮೂಲಕ ಅರಿಶಿಣದಲ್ಲಿ ಗಣೇಶಮೂರ್ತಿ ತಯಾರಿಸುವ ಕಾರ್ಯಾಗಾರ ಏರ್ಪಡಿಸಿದ್ದರು. ಈ ಕಾರ್ಯಾಗಾರದಲ್ಲಿ ಸರಳವಾಗಿ ಗಣೇಶಮೂರ್ತಿ ತಯಾರಿಕೆ ಕುರಿತಂತೆ ಹೇಳಿಕೊಟ್ಟೆ. ಆನ್‌ಲೈನ್‌ಮೂಲಕ ನೋಡಿದ ಸ್ನೇಹಿತರು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರು. ಇದು ತುಂಬಾ ಖುಷಿಕೊಟ್ಟ ಸಂಗತಿ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಸಹ ಈ ಕಾರ್ಯಾಗಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಸಂತಸ ತಂದಿತ್ತು’ ಎಂದರು ಆನಂದ್‌ಕುಮಾರ್‌.

‘ತಮಿಳುನಾಡಿನ ನಮ್ಮ ಸ್ನೇಹಿತರೊಬ್ಬರು ಬೆಂಗಳೂರಿನಲ್ಲಿ ತಂಜಾವೂರು ಶೈಲಿ ಸೇರಿದಂತೆ ವಿವಿಧ ಬಗೆಯ ಚಿತ್ರಗಳನ್ನು ಬರೆದು ಮಾರಾಟ ಮಾಡುವ ಅಂಗಡಿಯಿಟ್ಟಿದ್ದರು. ಇಂತಹದ್ದೇ ಮಾದರಿಯ ಚಿತ್ರ ಬೇಕು ಎಂದು ವಾಟ್ಸ್‌ ಆಪ್‌ನಲ್ಲಿ ಕಳುಹಿಸುತ್ತಿದ್ದರು. ಐದಾರು ದಿನಗಳಲ್ಲಿ ಚಿತ್ರ ಬರೆದು ಕುಳುಹಿಸುತ್ತಿದ್ದೆ. ಒಂದಿಷ್ಟು ಹಣ ಕಳುಹಿಸುತ್ತಿದ್ದರು. ಲಾಕ್‌ಡೌನ್‌ ನಂತರ ಅಂಗಡಿ ಬಂದ್‌ ಆಯಿತು. ಬೆಂಗಳೂರಿನಲ್ಲಿ ಇದ್ದ ಸ್ನೇಹಿತರು ತಮಿಳುನಾಡಿಗೆ ಹೊರಟು ಹೋದರು’ ಎಂದರು ಆನಂದ್‌ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT