ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವ‌ಉದ್ಯೋಗ ಸೃಷ್ಟಿಗೆ ಸಹಕಾರ ಅಗತ್ಯ’

‘ಉದ್ಯಮಶೀಲತೆ ಪ್ರೇರಣೆ’ ಕಾರ್ಯಕ್ರಮಕ್ಕೆ ಚಾಲನೆ
Last Updated 8 ಜೂನ್ 2019, 13:04 IST
ಅಕ್ಷರ ಗಾತ್ರ

ದೇವನಹಳ್ಳಿ: ಸ್ವ ಉದ್ಯೋಗ ಸೃಷ್ಟಿಸಲು ಸರ್ಕಾರದ ಜತೆಗೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಬೆಂಗಳೂರು ವಿಭಾಗೀಯ ಕೌಶಲ ವಿಭಾಗದ, ಉದ್ಯಮಶೀಲ ಅಭಿವೃದ್ಧಿ ಕೇಂದ್ರದ ಜಂಟಿ ನಿರ್ದೇಶಕ ಮಧು ಹೇಳಿದರು.

ಇಲ್ಲಿನ ಕಾರಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ‘ಕರ್ನಾಟಕ ಉದ್ಯಮಶೀಲತಾವೃದ್ಧಿ ಕೇಂದ್ರ’ ಮತ್ತು ‘ಕೌಶಲಾಭಿವೃದ್ಧಿ ಉದ್ಯಮಶೀಲತೆ’ ಮತ್ತು ‘ಜೀವನೋಪಾಯ ಇಲಾಖೆ’ ಸಹಭಾಗಿತ್ವದಲ್ಲಿ ನಡೆದ ‘ಉದ್ಯಮಶೀಲತೆ ಪ್ರೇರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಸರಕಾರದ ವತಿಯಿಂದ ಕೌಶಲಾಭಿವೃದ್ಧಿ ಯೋಜನೆಯಲ್ಲಿ ನೀಡಲಾಗುವ ಸೌಲಭ್ಯಗಳ ಮಾಹಿತಿ ತಿಳಿಸುವುದು, ಅದರ ಸದುಪಯೋಗ ಪಡೆದುಕೊಳ್ಳುವ ಬಗ್ಗೆ ಸ್ವ‌ಇಚ್ಛೆಯುಳ್ಳ ಗ್ರಾಮೀಣ ಭಾಗದ ಯುವಕ ಮತ್ತು ಯುವತಿಯರಿಗೆ ‘ದಿಶಾ - ಐ‌ಇಸಿ ಔಟ್ ರೀಚ್’ ತರಬೇತಿ ಕಾರ್ಯಕ್ರಮದ ಮೂಲಕ ಸ್ವ‌ಉದ್ಯೋಗ ಸೃಷ್ಟಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ’ ಎಂದು ಹೇಳಿದರು.

‘2016 ರಲ್ಲಿ ಕರ್ನಾಟಕ ಸರ್ಕಾರ ಉಧ್ಯಮಶೀಲತೆ ಪ್ರೇರಣೆ ಹಾಗೂ ತರಬೇತಿಯನ್ನು ಆರಂಭಿಸಿದೆ. ಗ್ರಾಮ ಪಂಚಾಯಿತಿ ವತಿಯಿಂದ ಸಿಗುವ ಸರ್ಕಾರದ ಸೌಲಭ್ಯಗಳ ಮಾಹಿತಿ ತಿಳಿಸುವುದೇ ಇದರ ಮುಖ್ಯ ಉದ್ದೇಶ. ಸರ್ಕಾರದ 37 ಇಲಾಖೆಗಳು ಸಾಕಷ್ಟು ಯೋಜನೆಗಳ ಮೂಲಕ ಕಾರ್ಯ ಪ್ರವೃತ್ತವಾಗಿವೆ. ಇದರ ಬಗ್ಗೆ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಮಾಹಿತಿ ಇಲ್ಲ. ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯದಲ್ಲಿ ಮೂರು ಅಂಗಗಳಿವೆ. ಅದರ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಹೇಳಿದರು.

‘ವಿದ್ಯಾಭ್ಯಾಸ, ತಾಂತ್ರಿಕತೆ, ಕೈಗಾರಿಕೆ, ಸಣ್ಣ ಉದ್ದಿಮೆ ಸ್ಥಾಪನೆ ಸೇರಿದಂತೆ ಯೋಜನಾ ವರದಿ ತಯಾರಿಕೆಗೆ ಸರ್ಕಾರದ ಸವಲತ್ತುಗಳು, ರಿಯಾಯಿತಿಗಳು, ಸಹಾಯಧನ, ಲೆಕ್ಕಪತ್ರ ನಿರ್ವಹಣೆ ಹಾಗೂ ಸ್ವಯಂ ಉದ್ಯೋಗಕ್ಕೆ ಬೇಕಾದ ಎಲ್ಲ ರೀತಿಯ ಮಾಹಿತಿಯನ್ನು ನೀಡಲಾಗುತ್ತದೆ. ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಉದ್ಯೋಗ ಸೃಷ್ಟಿಸಲಾಗುವುದು. ಫಲಾನುಭವಿಗಳು ಮುಂದೆ ಬಂದರೆ ಅಂತಹವರಿಗೆ ಮಾರ್ಗದರ್ಶನ ನೀಡಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಉತ್ತೇಜಿಸಲಾಗುತ್ತದೆ’ ಎಂದು ತಿಳಿಸಿದರು.

ವಿ‌ಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆನಂದಮ್ಮ, ದಿಶಾ ಜಿಲ್ಲಾ ವ್ಯವಸ್ಥಾಪಕಿ ರತ್ನ, ಮುಖಂಡ ಕೆ.ಸಿ.ಮುನಿಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT