ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನಪದ ಕಲೆಗಳ ಪುನಶ್ಚೇತನ ಅಗತ್ಯ’

Last Updated 8 ನವೆಂಬರ್ 2019, 14:03 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಇಂದಿನ ಆಧುನಿಕ ಅಬ್ಬರಕ್ಕೆ ಸಿಲುಕಿ ನೂರಾರು ಜಾನಪದ ಪ್ರಕಾರಗಳು ಕಣ್ಮರೆಯಾಗುತ್ತಿದ್ದು, ಅವುಗಳ ಪುನಶ್ಚೇತನಕ್ಕೆ ಎಲ್ಲರೂ ಮುಂದಾಗಬೇಕು’ ಎಂದು ಸುಳ್ಳೇರಿ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಆರ್.ರಮೇಶ್ ಅಭಿಪ್ರಾಯಪಟ್ಟರು.

ಇಲ್ಲಿನ ಸುಳ್ಳೇರಿ ಗ್ರಾಮದಲ್ಲಿ ಜನನಿ ಜಾನಪದ ಸಾಂಸ್ಕೃತಿಕ ಕಲಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಗುರುವಾರ ನಡೆದ ರಾಜ್ಯಮಟ್ಟದ ಜಾನಪದ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮೂಲ ಸಂಸ್ಕೃತಿ ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು. ಜಾನಪದ ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೊಂಡಿಯಾಗಿ ನಡೆದುಕೊಳ್ಳಬೇಕು. ಜನಪದರು ಹಾಡಿದಂತೆ ಬದುಕಿದರು, ಬದುಕಿದಂತೆ ಹಾಡಿದರು ಎನ್ನುವ ಮಾತನ್ನು ಎಲ್ಲರಿಗೂ ತಿಳಿಸಿಕೊಟ್ಟು ಜನಪದರ ಜೀವನವನ್ನು ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಗ್ರಾಮದ ಹಿರಿಯ ಮುಖಂಡ ಕೃಷ್ಣೇಗೌಡ ಮಾತನಾಡಿ, ‘ಜಾನಪದ ಕಲಾಪ್ರಕಾರಗಳು ಮನರಂಜನೆ ನೀಡುವ ಜೊತೆಗೆ ಸಾಮಾಜಿಕ ಬಾಂಧವ್ಯ ಬೆಸೆಯುವ ಶಕ್ತಿ ಹೊಂದಿವೆ. ಇಂತಹ ಕಲೆಗಳನ್ನು ಯುವಜನಾಂಗಕ್ಕೆ ಕಲಿಸಿಕೊಡುವ ಜವಾಬ್ದಾರಿಯನ್ನು ಹಿರಿಯ ಕಲಾವಿದರು ವಹಿಸಿಕೊಳ್ಳಬೇಕು’ ಎಂದರು.

ಸುಳ್ಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ತೇಜಾವತಿ, ಮುಖಂಡರಾದ ಚಕ್ಕಲೂರು ಮಾದಣ್ಣ, ರೇಖಾ, ಬೈರಾಜು ಸುಳ್ಳೇರಿ, ಮಹದೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಮುತ್ತುರಾಜು, ಕಲಾವಿದ ಶಿವಕುಮಾರ್ ಇದ್ದರು.

ಕಾರ್ಯಕ್ರಮದಲ್ಲಿ ಗೀತಗಾಯನ, ಭರತನಾಟ್ಯ ಪ್ರದರ್ಶನ, ತಮಟೆ ವಾದನ, ಪೂಜಾಕುಣಿತ, ವೀರಗಾಸೆ, ಗೊರವರ ಕುಣಿತ ಪ್ರದರ್ಶನ ನಡೆಯಿತು. ಟ್ರಸ್ಟ್ ಕಾರ್ಯದರ್ಶಿ ಕೃಷ್ಣಾಪುರ ಕೆ.ಪಿ.ಸಿದ್ದಯ್ಯ ಸ್ವಾಗತಿಸಿದರು. ಗಾಯಕ ಅಪ್ಪಗೆರೆ ಮಹೇಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT