ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿಸಂಹಿತೆ ಪಾಲನೆಯಲ್ಲಿ ನಿರ್ಲಕ್ಷ್ಯ ಆರೋಪ

Last Updated 13 ಮಾರ್ಚ್ 2019, 14:05 IST
ಅಕ್ಷರ ಗಾತ್ರ

ದೇವನಹಳ್ಳಿ: ಲೋಕಸಭೆ ಚುನಾವಣೆಗೆ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗಿ ಮೂರು ದಿನ ಕಳೆದರೂ ತಾಲ್ಲೂಕಿನಲ್ಲಿ ಚುನಾವಣಾಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಮಾದರಿ ಚುನಾವಣಾ ನೀತಿ ಸಂಹಿತೆ ಕಳೆದ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಕಟ್ಟುನಿಟ್ಟಾಗಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ, ಬೇರೆ ಜಿಲ್ಲೆಗಳಲ್ಲಿ ಜ್ಯೋತಿಷಿಗಳಿಗೂ ನೀತಿ ಸಂಹಿತೆ ಬಿಸಿ ತಟ್ಟಿದೆ. ಅನೇಕ ಕಡೆ ಫ್ಲೆಕ್ಸ್ ಬ್ಯಾನರ್ ತೆರವುಗೊಳಿಸಲಾಗಿದೆ. ದೇವನಹಳ್ಳಿಯಲ್ಲಿ ಮಾತ್ರ ನೀತಿಸಂಹಿತೆ ಅನ್ವಯವಾಗುವುದಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ ಆಗಿದೆ.

ನಗರದ ಅಮರಾವತಿ ಹೋಟಲ್ ಮುಂಭಾಗ ಬಿಎಸ್‌ಪಿ ಚಿಹ್ನೆಯಾದ ಸಿಮೆಂಟ್‌ನಿಂದ ಮಾಡಲಾಗಿರುವ ಎರಡು ಆನೆ ಪ್ರತಿರೂಪ ಇದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಎಡವಟ್ಟು ಮಾಡಿಕೊಂಡಿದ್ದ ಅಧಿಕಾರಿಗಳು ನಂತರ ಬಂದು ತೆರವುಗೊಳಿಸಿದ್ದರು. ಪುರಸಭೆ ವ್ಯಾಪ್ತಿಯ ನಂದಿ ರಸ್ತೆ ರೈಲ್ವೆ ನಿಲ್ದಾಣದಲ್ಲಿ ಬಿಎಸ್‌ಪಿ ನಾಯಕಿ ಮಾಯಾವತಿ ಭಾವಚಿತ್ರವಿರುವ ಫ್ಲೆಕ್ಸ್ ಇದೆ. ಅದನ್ನೂ ತೆರವುಗೊಳಿಸಿಲ್ಲ. ನಗರದ ಅನೇಕ ಬಡಾವಣೆಗಳಲ್ಲಿ ಗೋಡೆಗಳ ಮೇಲೆ ರಾಜಕೀಯ ಪಕ್ಷಗಳ ಮತಯಾಚನೆ ಬರಹ ಮತ್ತು ಪಕ್ಷಗಳ ಚಿಹ್ನೆಗಳಿವೆ ಎಂದು ದೂರು ಕೇಳಿಸಿದೆ.

ಚುನಾವಣೆ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ಮಾತ್ರ ಶೇಕಡ 100ರಷ್ಟು ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ನಗರದ ಹಳೆ ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ಕಟ್ಟಡದ ಗೋಡೆ ಮೇಲೆ ಇಂದಿರಾಗಾಂಧಿ ಅವರ ಭಾವಚಿತ್ರವಿದೆ. ಮಾದರಿ ನೀತಿ ಸಂಹಿತೆ ಪ್ರಕಾರವಾಗಿ ಭಾವಚಿತ್ರ ಮುಚ್ಚಬೇಕು. ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸದಿದ್ದರೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಸ್ಥಳೀಯರಾದ ಆಶೋಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT