₹4 ಕೋಟಿ ವೆಚ್ಚದಲ್ಲಿ ಶಾಲಾ ಆಧುನಿಕ ಕಟ್ಟಡ

7
ಭೂಮಿ ಪೂಜೆ ನೆರವೇರಿಸಿದ ಶಾಸಕ ನಿಸರ್ಗ ನಾರಾಯಣಸ್ವಾಮಿ

₹4 ಕೋಟಿ ವೆಚ್ಚದಲ್ಲಿ ಶಾಲಾ ಆಧುನಿಕ ಕಟ್ಟಡ

Published:
Updated:
Deccan Herald

ದೇವನಹಳ್ಳಿ: ಸಾಮಾಜಿಕ ಹೊಣೆಗಾರಿಕೆ ನಿಧಿ ಯೋಜನೆಯಡಿ ₹4 ಕೋಟಿ ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಕೊರಚರಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣಾ ಖಾಸಗಿ ಸಂಸ್ಥೆ ವತಿಯಿಂದ ಅಡುಗೆ ಮನೆ, ಆಹಾರ ದಾಸ್ತಾನು ಕೊಠಡಿ, ಊಟದ ಹಾಲ್, ವಿದ್ಯುತ್ ನಿಯಂತ್ರಣ ಕೊಠಡಿ, ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ ನಿರ್ಮಾಣವಾಗಲಿದೆ. ಜತೆಗೆ, ಮುಖ್ಯಶಿಕ್ಷಕರ ಮತ್ತು ಸಹಶಿಕ್ಷಕರ ಪ್ರತ್ಯೇಕ ಕೊಠಡಿ, ನಲಿಕಲಿ ಸಭಾಂಗಣ, ರಂಗಮಂದಿರ ಹೊರತು ಪಡಿಸಿ ಎಂಟು ತರಗತಿ ಕೊಠಡಿ ನಿರ್ಮಾಣ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕಟ್ಟಡದ ಸುತ್ತ ಕಾಂಪೌಂಡ್‌ ನಿರ್ಮಾಣ, ಇದೊಂದು ಹೈಟೆಕ್ ವ್ಯವಸ್ಥೆಯಡಿ ಕಟ್ಟಡ ರೂಪ ಪಡೆಯಲಿದೆ. ಎಂದರು.

ವಾಚನಾಲಯ, ಕಂಪ್ಯೂಟರ್ ಕೊಠಡಿ, ಮಕ್ಕಳಿಗೆ ಡೆಸ್ಕ್, ಬೋಧಕ ಸಿಬ್ಬಂದಿಗೆ ಪೀಠೋಪಕರಣದ ವ್ಯವಸ್ಥೆ ಇರಲಿದೆ. 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬೆಂಗಳೂರು ನಗರಕ್ಕೆ ತಾಲ್ಲೂಕು ಹೊಂದಿಕೊಂಡಿರುವುದರಿಂದ ಅನೇಕ ಖಾಸಗಿ ಕಂಪನಿಗಳು ಸ್ಥಳೀಯ ರೈತರ ಜಾಗವನ್ನು ಕಡಿಮೆದರದಲ್ಲಿ ಪಡೆದು ಬಂಡವಾಳ ಹೂಡಿ ಕೋಟ್ಯಂತರ ಲಾಭ ಪಡೆದುಕೊಳ್ಳುತ್ತಿವೆ. ಪಡೆದ ಲಾಭಾಂಶದಲ್ಲಿ ಶೇ 2 ರಷ್ಟು ಮಾತ್ರ ಸಾಮಾಜಿಕ ಸೇವೆಯಲ್ಲಿ ಖರ್ಚು ಮಾಡಲಾಗುತ್ತಿದೆ. ಖಾಸಗಿ ಕಂಪನಿಗಳು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳತ್ತ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿ, ತಾಲ್ಲೂಕಿನಲ್ಲಿ ಈಗಾಗಲೇ 6 ಸರ್ಕಾರಿ ಶಾಲೆಗಳು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿಯಲ್ಲಿ ನಿರ್ಮಾಣಗೊಂಡಿವೆ. ಮತ್ತೂ 6 ಶಾಲೆಗಳ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ ಎಂದರು.

ಪುರಸಭೆ ಅಧ್ಯಕ್ಷ ಎಂ.ಮೂರ್ತಿ, ಉಪಾಧ್ಯಕ್ಷೆ ಆಶಾರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಸದಸ್ಯರಾದ ರವೀಂದ್ರ, ಎಂ.ಕುಮಾರ್, ಎಂ.ನಾರಾಯಣಸ್ವಾಮಿ, ರತ್ನಮ್ಮ, ವಿ.ಗೋಪಾಲ್, ಗಾಯಿತ್ರಿ, ನರಸಿಂಹಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಜೆಡಿಎಸ್‌ ತಾಲ್ಲೂಕು ಘಟಕ ಅಧ್ಯಕ್ಷ ಆರ್.ಮುನೇಗೌಡ, ಜೆಡಿಎಸ್‌ ಎಸ್ಸಿ ಘಟಕ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಮುನಿನಂಜಪ್ಪ, ಮುಖಂಡ ಲಕ್ಷ್ಮಿನಾರಾಯಣಪ್ಪ, ಮುಖ್ಯಶಿಕ್ಷಕಿ ಕಮಲಮ್ಮ , ದೈಹಿಕ ಶಿಕ್ಷಣ ಶಿಕ್ಷಕ ಪುಟ್ಟಸ್ವಾಮಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !