ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cauvery Water Dispute: ಬಾಕಿ 12 ಟಿಎಂಸಿ ಅಡಿ ನೀರು ಬಿಡಲು ಸಲಹೆ

Published 27 ಸೆಪ್ಟೆಂಬರ್ 2023, 23:42 IST
Last Updated 27 ಸೆಪ್ಟೆಂಬರ್ 2023, 23:42 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಸುಧಾರಿಸಿದರೆ ತಮಿಳುನಾಡಿಗೆ 12.165 ಟಿಎಂಸಿ ಅಡಿಯಷ್ಟು ಬಾಕಿ (ಬ್ಯಾಕ್‌ಲಾಗ್‌) ನೀರನ್ನು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ಕರ್ನಾಟಕಕ್ಕೆ ಹೇಳಿದೆ. 

ಮಂಗಳವಾರ ನಡೆದ ಸಮಿತಿಯ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಜಲಾಶಯಗಳ ನೀರಿನ ಮಟ್ಟ, ಮಳೆ ಪ್ರಮಾಣ ಮತ್ತಿತರ ಅಂಶಗಳ ಕುರಿತು ಪರಾಮರ್ಶೆ ನಡೆಸಲಾ ಯಿತು. ಬಳಿಕ ಸಮಿತಿಯು ರಾಜ್ಯಕ್ಕೆ ಈ ಸಲಹೆ ನೀಡಿತು. ಜಲ-ಹವಾಮಾನ ಸ್ಥಿತಿ ಸುಧಾರಿಸಿದಾಗ, ನಂತರದ ಅವಧಿಯಲ್ಲಿ ಕರ್ನಾಟಕ ರಾಜ್ಯವು ಈ ಕೊರತೆಯನ್ನು ಉತ್ತಮಗೊಳಿಸಬಹುದು ಎಂದು ಸಮಿತಿ ಹೇಳಿದೆ.  ಈ ಸಲಹೆಗೆ ಕರ್ನಾಟಕದ ತಂಡ ಆಕ್ಷೇಪ ವ್ಯಕ್ತಪಡಿಸಿದೆ. 

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಸಾಮಾನ್ಯ ವರ್ಷಗಳಲ್ಲಿ ಕರ್ನಾಟಕವು ತಮಿಳುನಾಡಿಗೆ ಪ್ರತಿವರ್ಷ 177 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಬೇಕು. ಜೂನ್‌ನಿಂದ ಸೆಪ್ಟೆಂಬರ್‌ 25ರ ವರೆಗೆ 117 ಟಿಎಂಸಿ ಬಿಡುಗಡೆ ಮಾಡಬೇಕಿತ್ತು. ಆದರೆ, 43 ಟಿಎಂಸಿ ಅಡಿಯಷ್ಟು ನೀರು ಬಿಟ್ಟಿದೆ. ಅಂದರೆ ನಿಗದಿಪಡಿಸಿದ್ದಕ್ಕಿಂತ 74 ಟಿಎಂಸಿ ಅಡಿಗಳಷ್ಟು ಕಡಿಮೆ ನೀರನ್ನು ಹರಿಸಿದೆ ಎಂಬುದನ್ನು ಸಮಿತಿಯು ಗಮನಿಸಿತು. 

ಕರ್ನಾಟಕವು ಪ್ರತಿದಿನ 5 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ಸಮಿತಿಯು ಸೆ. 13ರಂದು ಶಿಫಾರಸು ಮಾಡಿತ್ತು. 13ರಿಂದ 25ರ ವರೆಗೆ 56,700 ಕ್ಯೂಸೆಕ್‌ (4.91 ಟಿಎಂಸಿ ಅಡಿ) ನೀರನ್ನು ಕರ್ನಾಟಕವು ಬಿಟ್ಟಿದೆ. ಈ ಅವಧಿಯಲ್ಲಿ 0.71 ಟಿಎಂಸಿ ಅಡಿಯಷ್ಟು ಕಡಿಮೆ ನೀರನ್ನು ಬಿಟ್ಟಿದೆ. ಮುಂದಿನ ದಿನಗಳಲ್ಲಿ ಈ ನೀರನ್ನು ಬಿಡುಗಡೆ ಮಾಡಬೇಕು ಎಂದು ಸಮಿತಿ ಹೇಳಿತು. 

ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಈಗ 49.65 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಈ ವರ್ಷದ ಮುಂಗಾರಿನಲ್ಲಿ ಹಾರಂಗಿಗೆ 21.91 ಟಿಎಂಸಿ ಅಡಿ, ಹೇಮಾವತಿಗೆ 26 ಟಿಎಂಸಿ ಅಡಿ, ಕೆಆರ್‌ಎಸ್‌ಗೆ 51.34 ಟಿಎಂಸಿ ಅಡಿ ಹಾಗೂ ಕಬಿನಿಗೆ 40 ಟಿಎಂಸಿ ಅಡಿ ನೀರು ಬಂದಿದೆ. ಈ ಅವಧಿಯಲ್ಲಿ ಕೆಆರ್‌ಎಸ್‌ ಜಲಾಶಯದಿಂದ 28.38 ಟಿಎಂಸಿ ಅಡಿ ಹಾಗೂ ಕಬಿನಿಯಿಂದ 22.70 ಟಿಎಂಸಿ ಅಡಿ ನೀರನ್ನು ನದಿಗೆ ಬಿಡಲಾಗಿದೆ. ಇನ್ನೊಂದೆಡೆ, ಮುಂಗಾರಿನಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿ ಈ ನಾಲ್ಕು ಜಲಾಶಯಗಳ ಸರಾಸರಿ ಒಳಹರಿವಿನ ಪ್ರಮಾಣ 247 ಟಿಎಂಸಿ ಅಡಿಯಷ್ಟು ಇದೆ. ಈ ವರ್ಷ ಒಳಹರಿವಿನ ಪ್ರಮಾಣ ಶೇ 53ರಷ್ಟು ಕಡಿಮೆ ಆಗಿದೆ ಎಂಬುದನ್ನು ಸಮಿತಿ ಗಮನಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT