ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಬಗ್ಗೆ ಭಯ ಬೇಡ: ಎಂಟಿಬಿ ನಾಗರಾಜ್

Last Updated 23 ಜುಲೈ 2020, 14:50 IST
ಅಕ್ಷರ ಗಾತ್ರ

ಸೂಲಿಬೆಲೆ: ಕೋವಿಡ್-19 ರೋಗ, ಸಾವು ಬದುಕಿನ ಜತೆಯ ಹೋರಾಟ. ಜನರ ಮನಸ್ಸಿನಲ್ಲಿರುವ ಭಯವನ್ನು ಹೋಗಲಾಡಿಸಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಪರಸ್ಪರ ಅಂತರ ಕಾಪಾಡಿಕೊಂಡು ವ್ಯವಹರಿಸುವಂತೆ ಹಾಗೂ ಗ್ರಾಮಗಳಲ್ಲಿ ಶುಚಿತ್ವವನ್ನು ಕಾಪಾಡಲು ಕ್ರಮಕೈಗೊಳ್ಳುವುದು ಅಧಿಕಾರಿಗಳ ಜವಾಬ್ದಾರಿ ಎಂದು ವಿಧಾನ ಪರಿಷತ್ ಸದಸ್ಯ ಎನ್.ನಾಗರಾಜ್ (ಎಂಟಿಬಿ) ಹೇಳಿದರು.

ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಗುರುವಾರ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಆಶಾ ಕಾರ್ಯಕರ್ತೆಯರು, ಪಂಚಾಯಿತಿ, ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿಯವರಿಗೆ ಆಹಾರದ ಕಿಟ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿ ಅವರು ಮಾತನಾಡಿದರು.

‘ಸಾಮಾನ್ಯ ಜನರು ಸರ್ಕಾರಿ ಆಸ್ಪತ್ರೆಗಳನ್ನು ನಂಬಿಕೊಂಡು ಬರುತ್ತಾರೆ. ಆ ಬಡ ಜನರಿಗೆ ಉತ್ತಮವಾದ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ’ ಎಂದರು.

‘ಸೂಲಿಬೆಲೆ ಪಟ್ಟಣದಲ್ಲಿ ಕೋವಿಡ್-19 ಪ್ರಕರಣಗಳು ದೃಢಪಟ್ಟಿರುವ ಸ್ಥಳಗಳನ್ನು ‘ಸಿಲ್ ಡೌನ್’ ಮಾಡಲಾಗಿಲ್ಲ. ಆ ಕುಟುಂಬಗಳ ಸದಸ್ಯರಿಗೆ ಹೋಮ್ ಕ್ವಾರಂಟೈನ್ ಮಾಡದ ಕಾರಣ ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ದೂರುಗಳು ಬರುತ್ತಿವೆ. ಈ ಕೂಡಲೇ ಸರ್ಕಾರ ಸೂಚಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಕ್ರಮ ಕೈಗೊಳ್ಳುವಂತೆ, ಸೂಲಿಬೆಲೆ ಗ್ರಾಮ ಪಂಚಾಯಿತಿ ಪಿಡಿಒ ಚೈತ್ರಾ ಅವರಿಗೆ ಸೂಚಿಸಿದ ನಾಗರಾಜ್‌ ಆರೋಗ್ಯ ಕೇಂದ್ರಕ್ಕೆ ನೀರಿನ ವ್ಯವಸ್ಥೆ ತುರ್ತಾಗಿ ಕಲ್ಪಿಸಬೇಕು’ ಎಂದರು.

ಆರೋಗ್ಯ ಕೇಂದ್ರದಲ್ಲಿ ಸೋಲಾರ್ ಸಿಸ್ಟಮ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಹಾಗೂ ಪ್ರಯೋಗಾಲಯಕ್ಕೆ ಹವಾನಿಯಂತ್ರಕದ ಅವಶ್ಯಕತೆಯಿದೆ ಎಂದು ಡಾ.ಶಶಿಕಲಾ ಮನವಿ ಮಾಡಿದರು.

ಸಮುದಾಯ ಆರೋಗ್ಯ ಕೇಂದ್ರಕ್ಕೆ ಮನವಿ: ಸೂಲಿಬೆಲೆ ಹೋಬಳಿ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅವಶ್ಯಕತೆಯಿದೆ. ಹೋಬಳಿ ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆರಿಸಿ ಸಮುದಾಯ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಿಸಿಕೊಡಬೇಕು ಎಂದು ಹೋಬಳಿಯ ಮುಖಂಡರು ಮನವಿ ಮಾಡಿದರು.

ಮುಖಂಡರಾದ ಅರಸನಹಳ್ಳಿ ನಾರಾಯಣಸ್ವಾಮಿ, ಮರವೆ ಕೃಷ್ಣಪ್ಪ, ಚಾಂದ್ ಪಾಷ, ರಘುವೀರ್, ಸುಗಟೂರು ರಮೇಶ್, ರಾಘವೇಂದ್ರ, ಮಹೇಶ್, ರವಿಕುಮಾರ್, ಎಂ.ಆರ್.ಉಮೇಶ್, ರಾಜಕುಮಾರ್, ಸಬ್ ಇನ್ಸಪೆಕ್ಟರ್ ಮದುಸೂದನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT