ಮಂಗಳವಾರ, ಮಾರ್ಚ್ 2, 2021
30 °C

ಕೋಳಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಡನೂರು (ದೊಡ್ಡಬಳ್ಳಾಪುರ): ಕಾಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೋಳಿ ಫಾರಂ, ಕೋಳಿ ಅಂಗಡಿಗಳವರು ಎಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಪಡೆಯಿರಿ. ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದಿದ್ದರೆ ತಕ್ಷಣ ಸೂಕ್ತ ಕ್ರಮ ಕೈಗೊಂಡು ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.

ತಾಲ್ಲೂಕಿನ ಕಾಡನೂರು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಕೋಳಿ ಫಾರಂನಿಂದ ಆಗುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

‘ಗ್ರಾಮದ ಸುತ್ತ ಕೋಳಿ ಫಾರಂಗಳು ಹೆಚ್ಚಾಗಿದ್ದು ರೋಗ ಬಂದು ಸಾವನ್ನಪ್ಪುವ ಕೋಳಿ ಹಾಗೂ ತ್ಯಾಜ್ಯವನ್ನು ಕೋಳಿ ಅಂಗಡಿಯವರು ಕೆರೆ ಅಂಗಳ, ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕುರಿ ಸಾಕಿಕೊಂಡು ಹೇಗೋ ಜೀವನ ಮಾಡುತ್ತೇವೆ. ನಾಯಿಗಳಿಂದ ನಮ್ಮ ಕುರಿಗಳನ್ನು ರಕ್ಷಿಸಿಕೊಡಿ’ ಎಂದು ಮನವಿ ಮಾಡಿದರು.

ಕಾಡನೂರು ಗ್ರಾಮದ ನಂದೀಶ್‌, ‘ನನಗೆ ಒಂದು ಕೈ ಸ್ವಾಧೀನ ಇಲ್ಲ. ಆದರು ಸ್ವಾಭಿಮಾನದಿಂದ ಬದುಕಬೇಕು ಎಂದು ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಆದರೆ ಗ್ರಾಮದ ಸುತ್ತಲಿನ ಕೆರೆ ಅಂಗಳ, ರಸ್ತೆ ಬದಿಗಳಲ್ಲಿ ಕೋಳಿ ತ್ಯಾಜ್ಯವನ್ನು ರಾತ್ರಿ ವೇಳೆ ತಂದು ಸುರಿಯುತ್ತಿದ್ದಾರೆ’ ಎಂದು ದೂರಿದರು.

 ‘ತ್ಯಾಜ್ಯ ತಿನ್ನಲು ನೂರಾರು ಸಂಖ್ಯೆಯಲ್ಲಿ ನಾಯಿಗಳು ಬರುತ್ತಿವೆ. ಹೀಗಾಗಿ ಕುರಿಗಳನ್ನು ಬಯಲಿನಲ್ಲಿ ಮೇಯಿಸಲು ಸಾಧ್ಯವೇ ಇಲ್ಲದಾಗಿದೆ. ಯಾವಾಗ ನಾಯಿಗಳು ಬಂದು ಕುರಿಗಳ ಮೇಲೆ ದಾಳಿ ನಡೆಸುತ್ತವೆಯೋ ಎನ್ನುವ ಆತಂಕದಲ್ಲಿಯೇ ಕುರಿಗಳನ್ನು ಕಾಯುವಂತಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.