ಭಾನುವಾರ, ಮಾರ್ಚ್ 26, 2023
23 °C
ಚನ್ನಾದೇವಿ ಅಗ್ರಹಾರ ಗ್ರಾ. ಪಂ: ಗುಂಡುತೋಪಿನಲ್ಲಿ ಅರಳಿದ ಉದ್ಯಾನ

ನರೇಗಾ: ಗೋಕಟ್ಟೆ ಅಭಿವೃದ್ಧಿ

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಉದ್ಯೋಗ ಖಾತರಿ ಯೋಜನೆಯಲ್ಲಿ ಅವಕಾಶ ಇರುವ ಎಲ್ಲಾ ರೀತಿಯ ಯೋಜನೆಗಳನ್ನು ಬಳಸಿಕೊಂಡಿರುವ ಚನ್ನಾದೇವಿಅಗ್ರಹಾರ ಗ್ರಾಮ ಪಂಚಾಯಿತಿ ಸರ್ಕಾರಿ ಗುಂಡು ತೋಪಿನಲ್ಲಿ ಸುಂದರ ಉದ್ಯಾನ, ಗೋ ಕಟ್ಟೆಗಳನ್ನು ಅಭಿವೃದ್ಧಿಪಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದಕುಮಾರ್‌, ‘ಪ್ರತಿ ವರ್ಷವು ಕೆರೆಯಲ್ಲಿ ಕನಿಷ್ಠ ಪ್ರಮಾಣದಲ್ಲಾದರೂ ನೀರು ಇರುವ ತಾಲ್ಲೂಕಿನ ಕೆಲವೇ ಕೆಲವು ಕೆರೆಗಳ ಪೈಕಿ ಮಧುರೆ ಹೋಬಳಿಯ ಕನಸವಾಡಿ ಕೆರೆಯು ಒಂದಾಗಿದೆ. ಈ ಕೆರೆಯ ಅಂಚಿನಲ್ಲೇ ಗಾರುಡಿಗರಪಾಳ್ಯ ಗ್ರಾಮಸ್ಥರು ದಶಕಗಳಷ್ಟು ಹಿಂದೆಯೆ ಗುಂಡುತೋಪಿನಲ್ಲಿ ಮರಗಳನ್ನು ಬೆಳೆಸಿದ್ದರು. ಇದೇ ಸ್ಥಳ, ಇಲ್ಲಿನ ಮರಗಳನ್ನು ಒಳಗೊಂಡಂತೆಯೇ ಉದ್ಯೋಗ ಖಾತರಿ ಯೋಜನೆಯಡಿ ₹9.95 ಲಕ್ಷ ವೆಚ್ಚದಲ್ಲಿ ಸುಂದರವಾದ ಉದ್ಯಾನ ನಿರ್ಮಾಣ ಮಾಡಲಾಗಿದೆ. ನೇರಳೆ ಸೇರಿದಂತೆ ವಿವಿಧ ಜಾತಿಯ ಮತ್ತಷ್ಟು ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ವಾಯು ವಿಹಾರಕ್ಕೆ ಕಿರುರಸ್ತೆ, ಉದ್ಯಾನದಲ್ಲಿ ಕುಳಿತು ವಿಶ್ರಾಂತಿ ಪಡೆಯಲು ಬೆಂಚು ಕಲ್ಲುಗಳು, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ’ ಎಂದರು.

ಗೋ ಕಟ್ಟೆ: ಒಂದು ಕಾಲಕ್ಕೆ ಇಡೀ ಬಂಡಯ್ಯನಪಾಳ್ಯ ಗ್ರಾಮದಲ್ಲಿನ ಹಸು, ಕುರಿ, ಮೇಕೆ, ಎಮ್ಮೆಗಳಿಗೆ ಬೇಸಿಗೆ, ಮಳೆಗಾಲದಲ್ಲಿ ಕುಡಿಯುವ ನೀರಿನ ಆಸರೆಯಾಗಿದ್ದ ಗೋ ಕಟ್ಟೆಯಲ್ಲಿ ಹೂಳು ತುಂಬಿಕೊಂಡು ನೀರು ನಿಲ್ಲುವ ಪ್ರಮಾಣ ತೀರ ಕಡಿಮೆಯಾಗಿತ್ತು. ಈ ಗೋ ಕಟ್ಟೆಯನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ₹10 ಲಕ್ಷ ವೆಚ್ಚದಲ್ಲಿ ಹೂಳು ತೆಗೆದು ಗೋ ಕಟ್ಟೆಯ ಸುತ್ತಲು ಕಲ್ಲು ಕಟ್ಟಡವನ್ನು ನಿರ್ಮಿಸಲಾಗಿದೆ. ಗೋ ಕಟ್ಟೆಗೆ ಮಳೆ ನೀರು ಹರಿದು ಬರುವ ಕಾಲುವೆಯನ್ನು ಸ್ವಚ್ಛಗೊಳಿಸಲಾಗಿದೆ. ಅಲ್ಪಸ್ವಲ್ಪ ಮಳೆಯಾದರೂ ಈ ವರ್ಷ ಗೋ ಕಟ್ಟೆಯಲ್ಲಿ ಇಡೀ ವರ್ಷಕ್ಕೆ ಸಾಕಾಗುವಷ್ಟು ಮಳೆ ನೀರು ಸಂಗ್ರಹವಾಗಲಿದೆ ಎನ್ನುತ್ತಾರೆ ಗ್ರಾಮದ ರೈತರು.

ಕೃಷಿ ಹೊಂಡ, ಬದು ನಿರ್ಮಾಣ, ಚೆಕ್‌ ಡ್ಯಾಂ, ದನದ ಕೊಟ್ಟಿಗೆ ಸೇರಿದಂತೆ ಉದ್ಯೋಗ ಖಾತರಿ ಯೋಜನೆಯಲ್ಲಿ ₹40 ಲಕ್ಷಗಳ ಕಾಮಗಾರಿಯನ್ನು 2019-20ನೇ ಸಾಲಿನಲ್ಲಿ ಮಾಡಿಸಲಾಗಿದೆ ಎನ್ನುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದಕುಮಾರ್‌, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ 8 ಗ್ರಾಮಗಳಲ್ಲೂ ಸಹ ಯಾವುದೇ ಅನುದಾನ ಇಲ್ಲದೆ ಗ್ರಾಮ ಪಂಚಾಯಿತಿ ಹಣದಿಂದಲ್ಲೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ ₹ 5ಗಳಿಗೆ 20 ಲೀಟರ್‌ ನೀರು ಕೊಡಲಾಗುತ್ತಿದೆ ಎಂದರು.

ಗ್ರಾಮ ಪಂಚಾಯಿತಿ ಕೆಲಸಗಳನ್ನು ಗುರುತಿಸಿ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತ್‌ ರಾಜ್‌ ಇಲಾಖೆ ಗಾಂಧಿ ಗ್ರಾಮ ಪುರಸ್ಕಾರ, ಕೋವಿಡ್‌-19 ನಿಯಂತ್ರಿಸುವಲ್ಲಿ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣೆಗೆ ಜಿಲ್ಲಾಡಳಿತ ಪ್ರಶಸ್ತಿ ನೀಡಿ ಗೌರವಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು