ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಬವ್ವ ಪಡೆಗೆ ಕಾನೂನು ಬಲ, ನಾಗರಿಕರ ಪೊಲೀಸ್ ಗಸ್ತುಪಡೆ, ನಾಗರಿಕರ ಬಂದೂಕು ತರಬೇತಿ

Last Updated 18 ಜನವರಿ 2020, 12:59 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಶಾಲಾ ಕಾಲೇಜುಗಳ ಹಾಗೂ ಹಾಸ್ಟೆಲ್‌ಗಳ ಸಮೀಪ ಆಗುತ್ತಿರುವ ಕಿರುಕುಳಗಳ ಬಗ್ಗೆ ಹೆಣ್ಣು ಮಕ್ಕಳು ಎಲ್ಲೂ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಇಂತಹವರ ರಕ್ಷಣೆಗಾಗಿಯೇ ಓಬವ್ವ ಪಡೆಯನ್ನು ರಚಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚಣ್ಣನವರ್‌ ಹೇಳಿದರು.

ಅವರು ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ನಾಗರಿಕರ ಪೊಲೀಸ್ ಗಸ್ತುಪಡೆ, ನಾಗರಿಕರ ಬಂದೂಕು ತರಬೇತಿ ಹಾಗೂ ಓಬವ್ವ ಪಡೆ ಉದ್ಘಾಟನಾ ಸಮಾರಭದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಓಬವ್ವ ಪಡೆ ರಚಿಸಿ ಯಶಸ್ವಿಯಾಗಿದೆ. ಇದನ್ನು ಇಡೀ ರಾಜ್ಯದಲ್ಲಿ ಜಾರಿಗೆ ತರಲು ಹಾಗೂ ಒಬವ್ವ ಪಡೆಗೆ ಅಗತ್ಯ ಕಾನೂನು ಬಲ ತುಂಬುವ ಸಲುವಾಗಿಯೇ ಆದೇಶವನ್ನು ನೀಡಿ, ಇದಕ್ಕಾಗಿ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಹೀಗಾಗಿ ಈ ಪಡೆ ಗಸ್ತಿನಲ್ಲಿ ಇರುವವರು ದೂರುಗಳನ್ನು ದಾಖಲಿಸಿ ದಂಡ ವಿಧಿಸುವ ಅಧಿಕಾರವನ್ನು ಹೊಂದಿದ್ದಾರೆ ಎಂದರು.

ಪ್ರತಿ ತಿಂಗಳು ಒಬವ್ವ ಪಡೆ ಕಾರ್ಯವೈಖರಿ ಕುರಿತಂತೆ ಪರಾಮರ್ಶೆ ನಡೆಸಲಾಗುವುದು. ಶಾಲಾ ಕಾಲೇಜುಗಳ ಸಮೀಪ ಧೂಮಪಾನ ಸೇವನೆ, ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಮತ್ತಿತರೆ ಕಿರುಕುಳಗಳ ಕುರಿತಂತೆ ಸ್ಥಳದಲ್ಲೇ ದಂಡ ವಸೂಲಿ ಮಾಡಲಿದ್ದಾರೆ. ಕನಿಷ್ಠ ಒಂದು ತಿಂಗಳಿಗೆ 40 ರಿಂದ 50 ದೂರುಗಳನ್ನು ದಾಖಲು ಮಾಡಬೇಕು ಎಂದರು.

ಪಾಶ್ಚಿಮಾತ್ಯ ದೇಶಗಳಲ್ಲಿ ಇರುವಂತೆ ನಮ್ಮಲ್ಲೂ ನಾಗರಿಕರಿಗೆ ಮಿಲಿಟರಿ ತರಬೇತಿಗಳ ಅಗತ್ಯವಿದೆ. ಇದರಿಂದ ಶಿಸ್ತಿನ ಜೀವನ ಮೂಡುತ್ತದೆ. ಪೊಲೀಸ್‌ ಇಲಾಖೆಯಿಂದ ನಾಗರಿಕ ಗಸ್ತು ಪಡೆಗೆ ಸೇರಿರುವ ನಾಗರೀಕರಿಗೆ ಪೊಲೀಸರಿಗೆ ನೀಡಲಾಗುವ ಬಹುತೇಕ ತರಬೇತಿಗಳನ್ನು ನೀಡಲಾಗುತ್ತದೆ ಎಂದರು.

ಪೊಲೀಸರೊಂದಿಗೆ ಕೆಲಸ ಮಾಡಲು ಬಯಸುವ ನಾಗರಿಕರು ಪೊಲೀಸ್‌ ತರಬೇತಿ ಪಡೆಯುವುದು ಕಡ್ಡಾಯವಾಗಿದೆ. ಇದರಿಂದ ವೈಯಕ್ತಿವಾಗಿಯು ಅನುಕೂಲವಾಗಲಿದೆ. ನಾಗರೀಕ ಗಸ್ತು ಪಡೆ ತರಬೇತಿ ಹೊಂದಿರುವವರು ಪೊಲೀಸರೊಂದಿಗೆ ರಾಯಭಾರಿಗಳಂತೆ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಿವೈಎಸ್‌ಪಿ ಟಿ.ರಂಗಪ್ಪ ಮಾತನಾಡಿ, ನಾಗರಿಕರಿಗೆ ಬಂದೂಕು ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯಲ್ಲಿ ಹಲವಾರು ಮಾದರಿಯ ಬಂದೂಕುಗಳ ಬಳಕೆ ಕುರಿತಂತೆ ತರಬೇತಿಯನ್ನು ನೀಡಲಾಗುವುದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಸಂದರ್ಭದಲ್ಲೂ ಮೋಸಕ್ಕೆ ಒಳಗಾಗುತ್ತಿದ್ದಾರೆ. ಇವುಗಳ ಬಗ್ಗೆಯೂ ಒಬವ್ವ ಪಡೆ ಸದಸ್ಯರಿಗೆ ತರಬೇತಿ ನೀಡಲಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಸಾಧನೆಯ ಕುರಿತಂತೆ ಎರ್ರೆಪ್ಪಗೌಡ ಚಾನಾಳ್‌ ಅವರು ಬರೆದಿರುವ ‘ನಮ್ಮೊಳಗೊಬ್ಬ ರವಿ ಡಿ.ಚನ್ನಣ್ಣನವರ್‌’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ಡಿವೈಎಸ್‌ಪಿ ಬಸವರಾಜು, ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಘವ ಎಸ್‌.ಗೌಡ, ಡಾ.ಮಲ್ಲಿಕಾರ್ಜುನ, ಸೋಮಶೇಖರ್‌, ಕೃಷ್ಣಮೂರ್ತಿ, ಸಬ್‌ ಇನ್‌ಸ್ಪೆಕ್ಟರ್‌ ಕೆ.ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT