ಸೋಮವಾರ, ಅಕ್ಟೋಬರ್ 21, 2019
21 °C

ಕೃಷಿ ಭೂಮಿಯಲ್ಲಿ ರಸ್ತೆ ನಿರ್ಮಾಣಕ್ಕೆ ಆಕ್ಷೇಪ

Published:
Updated:
Prajavani

ದೇವನಹಳ್ಳಿ: ನಗರದ ಕೋಡಿಮಂಚೇನಹಳ್ಳಿ ಬಳಿ ಸಾಗುವಳಿ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ರೈತರಾದ ಮುನಿನಂಜಪ್ಪ ಬಿನ್ ಪುಟ್ಟಮಲ್ಲಪ್ಪ ಮತ್ತು ಮುನಿನಂಜಪ್ಪ ಬಿನ್ ಲಕ್ಷ್ಮಯ್ಯ, ‘ಕೋಡಿಮಂಚೇನಹಳ್ಳಿ ಸರ್ವೇ ನಂಬರ್‌ 5/ ಪಿ 5 ರಲ್ಲಿ 1.38 ಎಕರೆ, ಸ.ನಂ.5/ಪಿ 6ರಲ್ಲಿ 2.34 ಎಕರೆ ಜಮೀನು 45 ವರ್ಷಗಳ ಹಿಂದೆ ಸಾಗುವಳಿ ಹಕ್ಕುಪತ್ರ ನೀಡಲಾಗಿದೆ. ಅಂದಿನಿಂದ ಈವರೆಗೆ ಪಹಣಿ ಇದೆ. ಮ್ಯುಟೇಷನ್‌ ಇದೆ, ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದೇವೆ. ಕಂದಾಯ ಇಲಾಖೆ ಏಕಾಏಕಿ ಸಾಗುವಳಿ ಜಮೀನಿನಲ್ಲಿ ರಸ್ತೆಗೆ ಅನುಮತಿ ನೀಡಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಇದರಿಂದ ನಮ್ಮ ಸಾಗುವಳಿಯ ಒಟ್ಟು ಜಮೀನಿನಲ್ಲಿ 14 ರಿಂದ 16 ಗುಂಟೆ ಜಮೀನು ರಸ್ತೆಗೆ ಬಳಕೆಯಾಗಲಿದೆ. ಯಾವುದೇ ಕಾರಣಕ್ಕೂ ರಸ್ತೆ ನಿರ್ಮಾಣ ಮಾಡಬಾರದು’ ಎಂದು ಒತ್ತಾಯಿಸಿದರು.

‘ಸ.ನಂ.5 ರಲ್ಲಿ ನಮಗೆ ಸಾಗುವಳಿ ನೀಡಿರುವ ಜಮೀನು ಹೊರತುಪಡಿಸಿ 35 ಎಕರೆ ಗೋಮಾಳ ಜಮೀನಿದೆ. ಈ ಪೈಕಿ 7 ಎಕರೆ ಪೊಲೀಸ್ ಇಲಾಖೆಗೆ ವಸತಿ ಕಟ್ಟಡ ನಿರ್ಮಿಸಲಾಗಿದೆ. ಇದೇ ಸರ್ವೇ ನಂಬರ್‌ನಲ್ಲಿ ಖಾಸಗಿಯಾಗಿ 4.20 ಎಕರೆ ಖಾಸಗಿ ವ್ಯಕ್ತಿಗಳಿಗೆ ಸರ್ಕಾರ ಮಂಜೂರು ಮಾಡಿದ್ದು ಖಾಸಗಿ ವ್ಯಕ್ತಿಗಳ ಜಮೀನಿಗೆ ಅನುಕೂಲವಾಗಲು ರಸ್ತೆ ನಿರ್ಮಿಸಲಾಗುತ್ತಿದೆ’ ಎಂದು ದೂರಿದರು.

‘ನಮಗೆ ಸಾಗುವಳಿ ನೀಡಿರುವ ಜಮೀನಿಗೆ ದುರಸ್ತಿ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದೇವೆ. ಈ ಸ.ನಂ ನ ಯಾವುದೇ ದಾಖಲೆ ಇಲಾಖೆಯಲ್ಲಿ ಇಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ನಮ್ಮ ಜಮೀನು ಪಕ್ಕದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಯ ಜಮೀನಿನಲ್ಲಿ ನೀಲಗಿರಿ ತೋಪು ಇದೆ. ರಸ್ತೆ ನಿರ್ಮಾಣ ಆ ತೋಪಿನ ಪಕ್ಕದಲ್ಲಿ ಮಾಡಲು ಅಭ್ಯಂತರವಿಲ್ಲ. ಈ ಜಮೀನನ್ನೇ ನಂಬಿಕೊಂಡಿರುವ ನಮಗೆ ಯಾರದೋ ಮರ್ಜಿಗೆ ಒಳಗಾಗಿ ಅನ್ಯಾಯ ಮಾಡಿದರೆ ಹೇಗೆ’ ಎಂದು ನೋವು ತೋಡಿಕೊಂಡರು.

ಈ ಕುರಿತು ಸ್ಪಷ್ಟನೆ ಪಡೆಯಲು ತಹಶೀಲ್ದಾರ್‌ ಅಜಿತ್‌ಕುಮಾರ್ ರೈ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

Post Comments (+)