ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಖರೀದಿಸದ ಅಧಿಕಾರಿಗಳು, ರೈತರಿಗೆ ನಷ್ಟ

ಕೇಂದ್ರ ಆರಂಭಿಸಿದ್ದರೂ ಖರೀದಿ ಇಲ್ಲ, ಬೆಂಬಲ ಬೆಲೆಗೆ ಖೋತ
Last Updated 23 ಫೆಬ್ರುವರಿ 2020, 12:50 IST
ಅಕ್ಷರ ಗಾತ್ರ

ವಿಜಯಪುರ: ‘ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ಆರಂಭಿಸಿ ಒಂದೂವರೆ ತಿಂಗಳು ಕಳೆದಿದ್ದರೂ, ಇದುವರೆಗೂ ಖರೀದಿ ಆರಂಭವಾಗಿಲ್ಲ. ಹಾಗಾಗಿ ರೈತರು ನಷ್ಟ ಅನುಭವಿಸುವಂತಾಗಿದೆ’ ಎಂದು ರೈತ ಮುಖಂಡ ಎಸ್.ಎಂ.ರವಿಪ್ರಕಾಶ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಹುತೇಕ ರೈತರು ಬೆಂಬಲ ಬೆಲೆಯಿಂದ ವಂಚಿತರಾಗಿದ್ದಾರೆ. ಇಂದು ಖರೀದಿಸುತ್ತೇವೆ, ನಾಳೆ ಖರೀದಿಸುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ. ಬಹುಪಾಲು ರೈತರು ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ರಾಗಿ ಮಾರಾಟ ಮಾಡಿದ್ದು ಬೆಂಬಲ ಬೆಲೆಯ ಲಾಭ ದೊರೆಯಂತೆ ಆಗಿದೆ’ ಎಂದು ತಿಳಿಸಿದರು.

‘ಸರ್ಕಾರ ಕ್ವಿಂಟಲ್‌ಗೆ ₹ 3,150 ಬೆಂಬಲ ಬೆಲೆ ಘೋಷಿಸಿದೆ. ಖರೀದಿ ಕೇಂದ್ರ ಆರಂಭವಾಗಿದ್ದರೂ ನೋಂದಣಿ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ರೈತರ ಪಹಣಿಗಳಲ್ಲಿ ಬೆಳೆ ವಿವರದ ಬಗ್ಗೆ ನಮೂದಾಗಿರುವ ಮಾಹಿತಿ ತಪ್ಪಾಗಿದ್ದ ಹಿನ್ನೆಲೆಯಲ್ಲಿ ರೈತರು ಅದನ್ನು ಸರಿಪಡಿಸಿಕೊಳ್ಳಲು ಅಲೆದಾಡಬೇಕಾದ ಸ್ಥಿತಿ ಎದುರಾಗಿತ್ತು. ಇದುವರೆಗೂ 1,700 ಮಂದಿ ರೈತರು ರಾಗಿ ಮಾರಾಟ ಮಾಡಲು ನೋಂದಣಿ ಮಾಡಿದ್ದಾರೆ.‌ ನೋಂದಣಿ ಮಾಡಿರುವವರು ಸಹ ಕಳೆದ ಒಂದು ತಿಂಗಳಿಂದ ಮಾರಾಟಕ್ಕಾಗಿ ಕಾದು ಕಾದು ಸುಸ್ತಾಗಿದ್ದಾರೆ. ಬಹುತೇಕರು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಹನುಮಂತರಾಯಪ್ಪ ಮಾತನಾಡಿ, ‘ರೈತರು ತಮ್ಮ ಸಾಲ ತೀರಿಸಲು ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿದ ಮೇಲೆ ಸರ್ಕಾರ ಖರೀದಿ ಪ್ರಕ್ರಿಯೆ ಆರಂಭಿಸುತ್ತದೆ. ದಲ್ಲಾಳಿಗಳು ಅದೇ ರಾಗಿಯನ್ನು ಬೇರೆಯವರ ಹೆಸರಿನಲ್ಲಿ ₹ 3,150ಕ್ಕೆ ಮಾರಾಟ ಮಾಡುತ್ತಾರೆ. ಪರೋಕ್ಷವಾಗಿ ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ತಡವಾಗಿ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಬೆಳೆ ಮಾಹಿತಿಯ ತಿದ್ದುಪಡಿಗೆ ಮೊಬೈಲ್ ಆ್ಯಪ್ ಮೂಲಕ ಅಪ್ಲೋಡ್ ಮಾಡಿ ಎಂದು ಅಧಿಕಾರಿಗಳು ಹೇಳುತ್ತಾರೆ. ಬಹುತೇಕ ರೈತರಿಗೆ ಮೊಬೈಲ್‌ನಿಂದ ಕರೆ ಮಾಡುವುದು ಮಾತ್ರ ಗೊತ್ತು. ಬೇರೆ ಮಾಹಿತಿ ಅಥವಾ ಅಪ್ಲೋಡ್ ಮಾಡುವುದು ಗೊತ್ತಿರುವುದಿಲ್ಲ. ಈ ಬಾರಿ ರೈತರು ರಾಗಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗಿಲ್ಲ’ ಎಂದು ರೈತ ನಾರಾಯಣಸ್ವಾಮಿ ದೂರಿದರು.

ಆಹಾರ ನಿಗಮದ ರಾಗಿ ಕೇಂದ್ರದ ಅಧಿಕಾರಿ ಚಿಕ್ಕಬಸಯ್ಯ ಅವರನ್ನು ಈ ಕುರಿತು ಕೇಳಿದರೆ, ‘ನೋಂದಣಿ ಮಾಡಿಕೊಳ್ಳುತ್ತಿದ್ದೇವೆ. ಶಾಸಕರಿಂದ ದಿನಾಂಕ ನಿಗದಿ ಮಾಡಿ, ಪೂಜೆ ಮುಗಿಸಿ ಖರೀದಿ ಮಾಡುತ್ತೇವೆ. 1 ಎಕರೆಗೆ 10 ಕ್ವಿಂಟಾಲ್ ಮಾತ್ರ ಖರೀದಿ ಮಾಡಲು ಅವಕಾಶವಿದೆ. ಇನ್ನೂ ಟೆಂಡರ್ ಆಗಿಲ್ಲ. ಕಾರ್ಮಿಕರ ಕೊರತೆಯೂ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT