ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಪರ್ಯಾಯ ಕೃಷಿಗೆ ನೂರೆಂಟು ಮಾರ್ಗ

ಜಿಲ್ಲೆಯಲ್ಲಿ ನೀಲಗಿರಿ ಮರಗಳ ತೆರವು ಅಭಿಯಾನ ಮತ್ತೆ ಆರಂಭವಾಗಲಿ: ರೈತರ ಒತ್ತಾಯ
Last Updated 5 ಮೇ 2020, 10:00 IST
ಅಕ್ಷರ ಗಾತ್ರ

ದೇವನಹಳ್ಳಿ: ವಾರ್ಷಿಕ ಮುಂಗಾರು ಮತ್ತು ಹಿಂಗಾರು ಮಳೆ ಸಕಾಲದಲ್ಲಿ ಸುರಿಯುತ್ತಿಲ್ಲ. ಕೃಷಿಯನ್ನೇ ಅವಲಂಬಿಸದೆ ಪರ್ಯಾಯ ಅರಣ್ಯ ಕೃಷಿಗೆ ಸಕಾಲ ಎಂದು ಕೆಲ ರೈತರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಹತ್ತು ವರ್ಷಗಳ ಮುಂಗಾರು ಮಳೆ ಸರಾಸರಿ ಅವಲೋಕಿಸಿದಾಗ 2011 ಮತ್ತು 2012 ಹಾಗೂ 2019 ಸಾಲಿನಲ್ಲಿ ಸಾಧಾರಣ ಮಳೆ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಸತತ ಏಳು ವರ್ಷಗಳಿಂದ ಭೀಕರ ಬರಗಾಲ ಆವರಿಸಿದೆ. ರೈತರು ಮತ್ತೆ ಮತ್ತೆ ಕೃಷಿ ಚಟುವಟಿಕೆಯಿಂದ ನಷ್ಟ ಅನುಭವಿಸುತ್ತಲೇ ಇದ್ದಾರೆ.

ಮೂಲ ಕೃಷಿಯಿಂದ ಹೊರಬಂದು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಳ್ಳಲು ವಿಫಲತೆ ಒಂದೆಡೆಯಾದರೆ ಸಮಗ್ರ ಕೃಷಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ವಿವಿಧ ಪ್ರೋತ್ಸಾಹದಾಯಕ ಯೋಜನೆ ಸದುಪಯೋಗಪಡಿಸಿಕೊಳ್ಳುವಲ್ಲಿ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂಬುದು ಕೆಲವರ ಆರೋಪ.

ರೈತರು ಕೃಷಿ ಜತೆಗೆ ಕೋಳಿ, ಮೊಲ, ಕುರಿ, ಪಶುಪಾಲನೆ, ಹಂದಿಸಾಗಣೆ ಮಾಡಬಹುದು. ಪಶು ವೈದ್ಯಕೀಯ ಇಲಾಖೆ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಪ್ರೋತ್ಸಾಹ ನೀಡಲಾಗುತ್ತದೆ. ಇದರ ಜತೆಗೆ ಅರಣ್ಯ ಇಲಾಖೆ ನರೇಗಾ ಯೋಜನೆಯಡಿ ಜಮೀನು ಬದು ಮತ್ತು ಜಮೀನುಗಳಲ್ಲಿ ತೇಗ, ಬೀಟೆ, ಸಾಗುವಾನಿ, ಬೇವು, ಸಿಲ್ವರ್ ಓಕ್ ಮತ್ತು ಹೆಬ್ಬೇವು ಸೇರಿದಂತೆ ವಿವಿಧ ಜಾತಿ ಸಸಿಗಳನ್ನು ಉಚಿತವಾಗಿ ನೀಡಿ ಸಸಿಗಳ ಬೆಳವಣಿಗೆಗೆ ಮೂರು ವರ್ಷದವರೆಗೆ ಪ್ರೋತ್ಸಾಹ ಧನ ನೀಡುತ್ತದೆ. ರೈತರು ತಮ್ಮ ಜಮೀನುಗಳಲ್ಲಿ ನೀಲಗಿರಿ ಮರಗಳನ್ನು ಬುಡ ಸಮೇತ ತೆರವುಗೊಳಿಸಿ ಆರ್ಥಿಕ ಚೇತರಿಕೆಗೆ ವರದಾನವಾಗುವ ಮೌಲ್ಯಯುತ ಸಸಿಗಳನ್ನು ಯಾಕೆ ಬೆಳೆಸಬಾರದು ಎನ್ನುತ್ತಾರೆ ಪ್ರಗತಿಪರ ರೈತ ಭೈರದೇವನಹಳ್ಳಿ ಜಯರಾಮಪ್ಪ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ನಂತರ ರೈತರ ಫಲವತ್ತಾದ ಭೂಮಿ ರಿಯಲ್ ಎಸ್ಟೇಟ್ ಮಾಫಿಯಾಗಳ ಪಾಲಾಗಿದೆ. ಮತ್ತೊಂದಡೆ ಕೆಲ ರೈತರು ಜಮೀನು ಉಳುಮೆಗೆ ಮುಂದಾಗಿಲ್ಲ. ಮತ್ತೆ ಕೆಲವರು ನೀಲಗಿರಿ ಸಸಿ ನಾಟಿ ಮಾಡಿದ್ದಾರೆ. ನೀಲಗಿರಿ ಮರದಿಂದಾಗುತ್ತಿರುವ ಅಂತರ್ಜಲದ ಕೊರತೆ ರೈತರ ಅರಿವಿಗೆ ಇನ್ನೂ ಬಂದಿಲ್ಲ ಎನ್ನುತ್ತಾರೆ ಪ್ರಗತಿಪರ ರೈತರು.

2018ನೇ ಸಾಲಿನಲ್ಲಿ ಆಗಿನ ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲದ ಶೋಚನೀಯ ಪರಿಸ್ಥಿತಿ ಮನಗೊಂಡು ಅರಣ್ಯ, ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕು ವ್ಯಾಪ್ತಿಯಲ್ಲಿನ 96 ಸಾವಿರ ಎಕರೆ ಖಾಸಗಿಯಾಗಿ ಬೆಳೆದ ರೈತರ ನೀಲಗಿರಿ ಮರಗಳನ್ನು ತೆರವುಗೊಳಿಸುವ ಅಭಿಯಾನ ಆರಂಭಿಸಿದ್ದರು.

ಪ್ರಸ್ತುತ 25 ಗುಂಟೆಯಲ್ಲಿ 450 ಹೆಬ್ಬೇವು, 450 ಸಿಲ್ವರ್ ಓಕ್ ಒಟ್ಟು 900 ಸಸಿಗಳನ್ನು ಅರಣ್ಯ ಇಲಾಖೆ ವತಿಯಿಂದ ಉಚಿತವಾಗಿ ತಂದು ನಾಟಿ ಮಾಡಿ ಎರಡು ವರ್ಷ ಕಳೆದಿದೆ. ಸಸಿ ಬೆಳೆವಣಿಗೆಗೆ ವಾರ್ಷಿಕ ₹92 ಸಾವಿರ ನೇರವಾಗಿ ಅರಣ್ಯ ಇಲಾಖೆ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ. ನರೇಗಾ ಯೋಜನೆಯಡಿ 4 ಮತ್ತು 4ಅಡಿ ಅಂತರದಲ್ಲಿ ಗುಂಡಿ ತೋಡಿ ಬೆಳೆಸಿದ್ದೇನೆ. ಎರಡು ವರ್ಷ ಬೇಸಿಗೆಯಲ್ಲಿ ನೀರುಣಿಸಿದ್ದೇನೆ. ಬೆಳೆಯುತ್ತಿರುವ ಸಸಿ 15 ರಿಂದ 18ಅಡಿ ಎತ್ತರಕ್ಕೆ ಬೆಳೆದಿದೆ ಎಂದು ಖುಷಿಯಿಂದ ಹೇಳುತ್ತಾರೆ ಯಂಬ್ರಹಳ್ಳಿ ರೈತ ನರಸಿಂಹಮೂರ್ತಿ.

ಸಸಿನೆಟ್ಟ ನಂತರ ಗಿಡದ ಬುಡದಲ್ಲಿ ಕಳೆ ತೆಗೆಯಬೇಕು. 10ರಿಂದ 12ವರ್ಷ ಬೆಳೆದರೆ ಈಗಿನ ಮಾರುಕಟ್ಟೆ ಮೌಲ್ಯ ₹14 ರಿಂದ 15 ಲಕ್ಷ ಸಿಗಲಿದೆ. ಅರ್ಧ ಎಕರೆ ರಾಗಿ ಬೆಳೆಗೆ 5ಗುಂಟೆ ತೊಗರಿ ಬೆಳೆಗೆ ಮೀಸಲಿಟ್ಟಿದ್ದೇನೆ. ಹೆಬ್ಬೇವು ಮತ್ತು ಸಿಲ್ವರ್ ಒಕ್ ಜಮೀನಿನ ಸುತ್ತಲೂ ಕಬ್ಬಿಣದ ಜಾಲಾರಿ ಅಳವಡಿಸಿ ಮದ್ಯ ಒಂದೆರಡು ಕಡೆ ಗೂಡು ನಿರ್ಮಿಸಿ ನೀರಿನ ವ್ಯವಸ್ಥೆ ಮಾಡಿಕೊಂಡು 200 ನಾಟಿ ಕೋಳಿ ಸಾಕುವ ಸಿದ್ಧತೆ ನಡೆಸಿದ್ದೇನೆ. ಕೋಳಿ ಇದ್ದರೆ ಗಿಡಗಳಿಗೆ ಫಲವತ್ತಾದ ಗೊಬ್ಬರ ಸಿಗಲಿದೆ. ಅಭಿವೃದ್ಧಿಗೆ ನೂರೆಂಟು ಮಾರ್ಗಗಳಿವೆ. ಜಮೀನು ಇದ್ದು ಬಡತನವೆಂದರೆ ಹೇಗೆ ಎನ್ನುತ್ತಾರೆ ರೈತ ನರಸಿಂಹಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT