ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ

Last Updated 4 ಮಾರ್ಚ್ 2020, 14:21 IST
ಅಕ್ಷರ ಗಾತ್ರ

ಆನೇಕಲ್ : ಪಟ್ಟಣದ ತಿಮ್ಮರಾಯಸ್ವಾಮಿ ದೇವಾಲಯದ ಸಮೀಪದ ನವನಾಗ ಸಮೇತ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ನೂತನ ದೇವಾಲಯದ ಉದ್ಘಾಟನೆ ನೆರವೇರಿತು.

ಹಾಸನದ ದೊಡ್ಡಾಪುರದ ಸಮರ್ಥ ರಾಮಶ್ರಮದ ರಾಮಾವಧೂತರು ಸಾನ್ನಿಧ್ಯ ವಹಿಸಿ ಮಾತನಾಡಿ, ‘ತಪೋಭೂಮಿಯಾದ ಈ ಕ್ಷೇತ್ರದಲ್ಲಿ ನವನಾಗ ಸಮೇತ ಲಕ್ಷ್ಮೀನರಸಿಂಹ ಸ್ವಾಮಿಯ ದೇವಾಲಯ ಸ್ಥಾಪನೆ ಮಾಡಿರುವುದು ಈ ಭಾಗದ ಜನರಿಗೆ ವರದಾನವಾಗಿದೆ. ಸ್ವಾಮಿಯು ಜನರ ಇಷ್ಠಾರ್ಥಗಳನ್ನು ಈಡೇರಿಸಲಿ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮೌಲ್ಯಗಳ ಕುಸಿತ ಉಂಟಾಗುತ್ತಿದೆ. ಹಾಗಾಗಿ ಧ್ಯಾನ, ಪ್ರಾರ್ಥನೆ, ಸತ್ಸಂಗಗಳು ಜನರಲ್ಲಿನ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಗಳು ಬೆಳೆಯುವಂತಹ ವಾತಾವರಣ ನಿರ್ಮಿಸಲು ದೇವಾಲಯಗಳು, ಆಶ್ರಮಗಳು ಪ್ರಮುಖ ತಾಣಗಳಾಗಿವೆ. ತಮ್ಮ ಹಿರಿಯರ ಆಶಯವನ್ನು ಈಡೇರಿಸಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಈ ದೇವಾಲಯದ ಸ್ಥಾಪಕರಾದ ಆರ್‌.ನಾಗೇಂದ್ರ ಅವರಲ್ಲಿ ಸಾರ್ಥಕತೆಯನ್ನು ಉಂಟು ಮಾಡಿದೆ. ಪ್ರತಿಯೊಬ್ಬರು ದಾನ, ಧರ್ಮಗಳಲ್ಲಿ ತೊಡಗಿಸಿಕೊಂಡಾಗ ಸಮಾಜದಲ್ಲಿ ಶಾಂತಿ, ನೆಮ್ಮದಿ ಉಂಟಾಗುತ್ತದೆ. ಹಾಗಾಗಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು’ ಎಂದರು.

ನೂತನ ದೇವಾಲಯದ ಉದ್ಘಾಟನೆ ಅಂಗವಾಗಿ ಮಹಾಕುಂಭ, ಉಪಕುಂಭ ಆರಾಧನೆ, ಪ್ರಾಣ ಪ್ರತಿಷ್ಠೆ ಹೋಮ, ಶಾಂತಿ ಹೋಮ ನಡೆಯಿತು. ನೂರಾರು ಭಕ್ತರು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಗಳಾಗಿದ್ದರು.

ದೇವಾಲಯದ ಹಿನ್ನೆಲೆ: ಆನೇಕಲ್‌ ಪಾಳೇಪಟ್ಟಿನಲ್ಲಿ ಆಡಳಿತ ನಡೆಸುತ್ತಿದ್ದ ಪಾಳೇಗಾರರಿಗೆ ಸಲಹೆಗಾರರಾಗಿದ್ದ ದಿ.ರಾಮಸ್ವಾಮಿ ಅಯ್ಯಂಗಾರ್‌ ಸುಮಾರು 200 ವರ್ಷಗಳ ಹಿಂದೆ ಇಲ್ಲಿ ದೇವಾಲಯವನ್ನು ಕಟ್ಟಿಸಬೇಕೆಂದು ಸಂಕಲ್ಪ ಮಾಡಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಅವರ ಕುಟುಂಬದ ಆರ್‌.ನಾಗೇಂದ್ರ ದಂಪತಿ ತಮ್ಮ ಸ್ವಂತ ಜಮೀನಿನಲ್ಲಿ ನವನಾಗ ಸಮೇತ ಲಕ್ಷ್ಮೀನರಸಿಂಹಮೂರ್ತಿ ದೇವಾಲಯ ನಿರ್ಮಿಸಿದ್ದು ತಿಮ್ಮರಾಯಸ್ವಾಮಿ ದೇವಾಲಯವು ಸೇರಿದಂತೆ ಈ ಭಾಗವು ತಪಸ್ಸುಗಳ ತಪೋಭೂಮಿಯಾಗಿತ್ತು ಎಂಬ ಪ್ರತೀತಿಯಿದೆ. ದೇವಾಲಯದ ಬಲಭಾಗದಲ್ಲಿ ಸೂರ್ಯ, ಚಂದ್ರ ಮತ್ತು ಲಿಂಗದ ಚಿಹ್ನೆಯಿರುವ ಪುರಾತನ ಶಿಲೆಯಿದ್ದು ಇದು ನಾಗಲೋಕದ ಸಪ್ತದ್ವಾರಗಳಲ್ಲಿ ಒಂದು ದ್ವಾರ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT