ಗುರುವಾರ , ಸೆಪ್ಟೆಂಬರ್ 19, 2019
22 °C

ಯೋಜನಾ ಪ್ರಾಧಿಕಾರದ ಕಚೇರಿ ಉದ್ಘಾಟನೆ

Published:
Updated:
Prajavani

ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್‌ ರಸ್ತೆಯ ಪೊಲೀಸ್‌ ಠಾಣೆ ಸಮೀಪ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ನೂತನ ಕಚೇರಿಯನ್ನು ಗುರುವಾರ ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ‘ಮೂರು ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿದ್ದ ಡಿಪಿಎ (ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ) ಬೆಂಗಳೂರಿನ ಚಾಲುಕ್ಯ ರಸ್ತೆಯಲ್ಲಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತಿತ್ತು. ನಗರ ಹಾಗೂ ತಾಲ್ಲೂಕಿನ ಪ್ರತಿಯೊಂದು ಕಟ್ಟಡ ನಕ್ಷೆ ಹಾಗೂ ಲೇಔಟ್ ನಿರ್ಮಾಣ ಮಂಜೂರಾತಿ ಪಡೆಯಲು ಬೆಂಗಳೂರಿಗೆ ಹೋಗುವಂತಾಗಿತ್ತು. ಸತತ ಪ್ರಯತ್ನದಿಂದಾಗಿ ಕಚೇರಿ ದೊಡ್ಡಬಳ್ಳಾಪುರಕ್ಕೆ ವರ್ಗಾವಣೆಯಾಗಿದೆ. ತಾಲ್ಲೂಕಿನ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಬೇಕಿದೆ’ ಎಂದು ಹೇಳಿದರು.

‘ನಗರೋತ್ಥಾನ ಯೋಜನೆಗೆ ನೀಡಲಾಗಿದ್ದ ಅನುದಾನವನ್ನು ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಡೆ ಹಿಡಿದಿರುವುದು ಬೇಸರದ ವಿಷಯ. ಪಕ್ಷದ ಹಿರಿಯರು ಈ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಬೇಕಿದೆ. ಯಾವುದೇ ಕಾಮಗಾರಿ ಬೇಕಿದ್ದರೆ ಸಲಹೆ ಸೂಚನೆಗಳನ್ನು ನೀಡಬೇಕು. ಆದರೆ ಕೆಲಸವನ್ನೂ ನಿಲ್ಲಿಸುವುದು ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ’ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎನ್‌.ಹನುಮಂತೇಗೌಡ, ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷೆ ಕೋಮಲ, ಮುಖಂಡ ಬಿ.ಮುನಿರಾಜ್, ಯೋಜನಾ ಪ್ರಾಧಿಕಾರ ಜಂಟಿ ನಿರ್ದೇಶಕ ಲಕ್ಷ್ಮೀಪತಿ, ಸಹಾಯಕ ನಿರ್ದೇಶಕ ಶಿವಪ್ರಸಾದ್, ನಗರ ಯೋಜಕ ಶ್ರೀನಿವಾಸ್ ಇದ್ದರು.

Post Comments (+)