ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ರವರೆಗೆ ಹಳೆಯ ಬಸ್‌ಪಾಸ್‌ಗೆ ಅವಕಾಶ

Last Updated 17 ಸೆಪ್ಟೆಂಬರ್ 2021, 4:28 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಹಳೆಯ ಬಸ್‌ಪಾಸ್‌ ತೋರಿಸಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೆ. 25ರವರೆಗೂ ಉಚಿತವಾಗಿ ಪ್ರಯಾಣಿಸಲು ಅವಕಾಶ‌ ಕಲ್ಪಿಸಲಾಗಿದೆ ಎಂದು ದೊಡ್ಡಬಳ್ಳಾಪುರ ಕೆಎಸ್‌ಆರ್‌ಟಿಸಿ ಡಿಪೊ ವ್ಯವಸ್ಥಾಪಕ ಆನಂದ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಬಸ್‌ಪಾಸ್‍ ಪಡೆಯಲು ಹೆಚ್ಚಿನ ಕಾಲಾವಕಾಶ ನೀಡುವ ಉದ್ದೇಶದಿಂದ 2020-21ನೇ ಸಾಲಿನಲ್ಲಿ ಪಡೆದ ವಿದ್ಯಾರ್ಥಿ ಬಸ್‌ಪಾಸ್‌ಗಳನ್ನು ಬಳಸಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಕಳೆದ ಸಾಲಿನಲ್ಲಿ ವಿದ್ಯಾರ್ಥಿ ಬಸ್‌ಪಾಸ್‌ಗಳನ್ನು ಪಡೆಯದೇ ಇರುವ ವಿದ್ಯಾರ್ಥಿಗಳು ಹೊಸದಾಗಿ ಶಾಲಾ, ಕಾಲೇಜುಗಳಲ್ಲಿ ಹಣ ಪಾವತಿಸಿರುವ ರಶೀದಿ ಹಾಗೂ ವಿದ್ಯಾಸಂಸ್ಥೆಯ ಗುರುತಿನ ಚೀಟಿಯೊಂದಿಗೆ ನಿಗಮದ ಬಸ್ಸುಗಳಲ್ಲಿ ಸಂಬಂಧಪಟ್ಟ ಮಾರ್ಗದಲ್ಲಿ ಅಥವಾ ಹೊಸ ವಿಳಾಸದಲ್ಲಿರುವ ಶಾಲಾ, ಕಾಲೇಜು ಹಾಗೂ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‍ಗಳಲ್ಲಿ ಸೆ. 25 ರವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಹಲವಾರು ವಿದ್ಯಾರ್ಥಿಗಳು ಸೇವಾ ಸಿಂಧುವಿನ ಮೂಲಕ ಬಸ್ ಪಾಸ್‌ ಪಡೆಯುತ್ತಿದ್ದಾರೆ. ಉಳಿದ ವಿದ್ಯಾರ್ಥಿಗಳು ಸಹ ವಿಳಂಬಕ್ಕೆ ಅವಕಾಶ ನೀಡದೇ ನಿಯಮಾನುಸಾರ ಉಚಿತ, ರಿಯಾಯಿತಿ ಪಾಸ್‍ಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ.

ಉಚಿತ ಆರೋಗ್ಯ ತಪಾಸಣಾ ಶಿಬಿರ

ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೆ. 19ರಂದು ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.

ನವೋದಯ ಚಾರಿಟಬಲ್‌ ಟ್ರಸ್ಟ್‌, ಮಟ್ಟಾ ಮಹಾಲಕ್ಷ್ಮಮ್ಮ ವೆಂಕಟರಮಣಯ್ಯ ಶೆಟ್ಟಿ ಚಾರಿಟಬಲ್‌ ಟ್ರಸ್ಟ್‌, ಆತ್ರೇಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ದೃಷ್ಟಿ ಕಣ್ಣಿನ ಆಸ್ಪತ್ರೆ, ಸುಬ್ರಹ್ಮಣ್ಣೇಶ್ವರ ಮೆಡಿಕಲ್‌ ಸ್ಟೋರ್‌ ಆಶ್ರಯದಲ್ಲಿ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ, ಇಸಿಜಿ, ಕಿಡ್ನಿ ಸಮಸ್ಯೆ ಸೇರಿದಂತೆ ಆರೋಗ್ಯದ ಇತರೆ ತಪಾಸಣೆ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಹೊಲಿಗೆ ಯಂತ್ರ ವಿತರಣೆ

ದೇವನಹಳ್ಳಿ:ಬೆಂಗಳೂರು ಗ್ರಾಮಾಂತರ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಟ್ರಸ್ಟ್ ಅಡಿ 2021-22ನೇ ಸಾಲಿನಲ್ಲಿ ಗಣಿ ಬಾಧಿತ, ಗಣಿ ಬಾಧಿತವಲ್ಲದ ಪ್ರದೇಶದ ಗ್ರಾಮಗಳಲ್ಲಿರುವ ವಿದ್ಯಾವಂತ ನಿರುದ್ಯೋಗಿ ಮಹಿಳೆಯರಿಗೆ ಸ್ವಯಂಉದ್ಯೋಗ ಕೈಗೊಳ್ಳಲು ಉಚಿತ ಹೊಲಿಗೆ ಯಂತ್ರ ನೀಡಲಾಗುತ್ತಿದೆ.

ಈ ಕಾರ್ಯಕ್ರಮದಡಿ ಸೌಲಭ್ಯ ಪಡೆಯಲು ಜಿಲ್ಲೆಯಾದ್ಯಂತ ವಿವಿಧ ಗ್ರಾಮಗಳಿಂದ ಸ್ವೀಕೃತ ಅರ್ಜಿ ಹಾಗೂ ದಾಖಲೆ ಪರಿಶೀಲಿಸಿ, ಆಯ್ಕೆಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಪ್ರಕಟಿಸಲಾಗಿದೆ.

ಆಯ್ಕೆಪಟ್ಟಿ ಕುರಿತು ಯಾವುದೇ ಆಕ್ಷೇಪಣೆ ಇದ್ದಲ್ಲಿ ಲಿಖಿತವಾಗಿ ಸೆ. 22ರೊಳಗೆ ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಠಡಿ ಸಂಖ್ಯೆ 203, ಎರಡನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ –ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ಜನರಿಗೆ ಉಚಿತ ಸೌಲಭ್ಯ

ದೇವನಹಳ್ಳಿ:ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುದಾನದಡಿ ದೊಡ್ಡಬಳ್ಳಾಪುರದ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದಿಂದ ನಡೆಯುತ್ತಿರುವ ಯಾವುದೇ ಸೇವೆ ಹಾಗೂ ಯೋಜನೆಗಳಿಗೆ ಹಣ ನಿಗದಿಪಡಿಸಿರುವುದಿಲ್ಲ. ಎಲ್ಲಾ ಯೋಜನೆಗಳು ಸಂಪೂರ್ಣ ಉಚಿತವಾಗಿವೆ ಎಂದು ಇಲಾಖೆ ತಿಳಿಸಿದೆ.

ಇಲಾಖೆಯ ಹೆಸರು ಹೇಳಿಕೊಂಡು ಯಾವುದೇ ವ್ಯಕ್ತಿ ಇಲಾಖಾ ಯೋಜನೆ ಅಥವಾ ಇತರೆ ವಿಷಯಗಳಿಗೆ ಹಣದ ಬೇಡಿಕೆ ಇಟ್ಟರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು.

ಹೆಚ್ಚಿನ ಮಾಹಿತಿಗೆ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಂಗವಿಕಲರ ಸಹಾಯವಾಣಿ 080–29787441 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಎನ್.ಎಂ.
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT