ಹೆಣ್ಣು ಮಕ್ಕಳ ರಕ್ಷಣೆ ಕೋರಿ ಬೀದಿಗಿಳಿದ ಸಂಸ್ಥೆಗಳು

7
ಕೀರ್ತನಾ ಕೊಲೆ ಪ್ರಕರಣಕ್ಕೆ ಖಂಡನೆ * ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ * ಜಿಲ್ಲಾಧಿಕಾರಿಗೆ ಮನವಿ

ಹೆಣ್ಣು ಮಕ್ಕಳ ರಕ್ಷಣೆ ಕೋರಿ ಬೀದಿಗಿಳಿದ ಸಂಸ್ಥೆಗಳು

Published:
Updated:
Deccan Herald

ದೊಡ್ಡಬಳ್ಳಾಪುರ: ಹೆಣ್ಣು ಮಕ್ಕಳು ಮತ್ತು ಮಹಿಳೆಯರ ರಕ್ಷಣೆ ಒತ್ತಾಯ ಹಾಗೂ ನವೆಂಬರ್ 28 ರಂದು ನಡೆದಿದ್ದ 10ನೇ ತರಗತಿ ವಿದ್ಯಾರ್ಥಿನಿ ಕೀರ್ತನಾ ಕೊಲೆ ಖಂಡಿಸಿ ಮಹಿಳಾ ಮತ್ತು ಮಕ್ಕಳ ಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಶುಕ್ರವಾರ ನಡೆದ ಜಾಥಾದಲ್ಲಿ ನಗರದ ವಿವಿಧ ಶಾಲಾ ಕಾಲೇಜುಗಳ ಸಾವಿರಾರು ಜನ ವಿದ್ಯಾರ್ಥಿಗಳು, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಬೆಳಿಗ್ಗೆ 10ಕ್ಕೆ ನೆಲದಾಂಜನೇಯಸ್ವಾಮಿ ದೇವಾಲಯದಿಂದ ಪ್ರಾರಂಭವಾದ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದು ತಾಲ್ಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಧಿಕಾರಿ ಕರೀಗೌಡ ಅವರಿಗೆ ಮನವಿ ಸಲ್ಲಿಸಿತು. ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವುದು ಸೇರಿದಂತೆ ಆರು ಹಕ್ಕೋತ್ತಾಯಗಳ ಪಟ್ಟಿಯನ್ನು ನೀಡಿತು.

ಸಭೆಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಅಮಲಿ ನಾಯ್ಕ್, ಕೆ.ಎಸ್.ಪ್ರಭಾ, ಪ್ರಮೀಳಾ ಮಹಾದೇವ್, ಎಲ್.ಸಿ.ದೇವಕಿ, ವತ್ಸಲಾ, ಎನ್.ಸಿ.ಲಕ್ಷ್ಮೀ, ಹೆಣ್ಣು ಮಕ್ಕಳ ಕೊಲೆ ಗರ್ಭಪಾತದಿಂದಲೇ ಪ್ರಾರಂಭವಾಗಿದೆ. ಇಂತಹ ಸ್ಥಿತಿಯಲ್ಲಿ ಬದುಕುಳಿದ ಹೆಣ್ಣು ಮಕ್ಕಳು ಶಾಲಾ ಕಾಲೇಜುಗಳಲ್ಲಿ ಕಲಿಯಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗಿರುವುದು ಖಂಡನೀಯ. ಬೆಳಿಗ್ಗೆ ಶಾಲೆಗೆ ಹೊರಟಿದ್ದ ವಿದ್ಯಾರ್ಥಿನಿ ಕೀರ್ತನಾಳನ್ನು ಕೊಚ್ಚಿ ಕೊಲೆ ಮಾಡಿರುವ ಪ್ರಕರಣದಿಂದಾಗಿ ಪೋಷಕರು ಹೆಣ್ಣು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಭಯಪಡುವಂತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲೇ ಪೊಲೀಸರಿಗೆ ದೂರು ನೀಡಿದರೂ ಎಚ್ಚೆತ್ತುಕೊಳ್ಳಲಿಲ್ಲ. ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದರೆ ಕೊಲೆ ತಪ್ಪಿಸಬಹುದಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಾದ್ಯಂತ ಶಾಲೆ – ಕಾಲೇಜು ಹೆಣ್ಣು ಮಕ್ಕಳ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪಹರಣ ಮತ್ತು ಕೊಲೆಯಂತಹ ವಿಕೃತ ಘಟನೆಗಳು ಅತಿಹೆಚ್ಚಾಗಿ ನಡೆಯುತ್ತಿವೆ. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಪ್ರತಿ ದಿನ ನಗರದ ಶಾಲಾ, ಕಾಲೇಜುಗಳಿಗೆ ಓಡಾಡಬೇಕಾಗಿರುವುದರಿಂದ ಸುರಕ್ಷಿತ ವಾತಾವರಣ ಇಲ್ಲದಾಗಿದೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಕೊಡಲು ಸರ್ಕಾರ ಸಂಬಂಧಿಸಿದ ಇಲಾಖೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಮಾತನಾಡಿ, ಪೋಷಕರು ಕೆಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮಕ್ಕಳ ಮೇಲೆ ನಿಗಾ ಇಡಬೇಕು. ಅವರ ಚಲನವಲನ ಗಮನಿಸಬೇಕು. ಅವರಿಗೆ ಸರಿದಾರಿಯಲ್ಲಿ ನಡೆಯುವಂತೆ ಮನವರಿಕೆ ಮಾಡಿಕೊಡಬೇಕು. ಅನಾಹುತದ ನಂತರ ಎಷ್ಟೇ ಶೋಕ ವ್ಯಕ್ತಪಡಿಸಿರೂ ಪ್ರಯೋಜನವಿಲ್ಲ. ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗಾಗಲಿ, ಪರಿಚಿತರೊಂದಿಗಾಗಲಿ ಸಲುಗೆ ಬೆಳಸಬಾರದು. ಯಾರಾದರೂ ಕೆಟ್ಟದಾಗಿ ಪೋಸ್ಟ್ ಗಳನ್ನು ಹಾಕಿದರೆ, ಪ್ರಚೋದನಕಾರಿ ಸಂದೇಶ ರವಾನಿಸುತ್ತಿದ್ದರೆ ಪೋಷಕರಿಗೆ, ಶಾಲಾ ಮುಖ್ಯಸ್ಥರಿಗೆ ತಿಳಿಸಬೇಕು ಎಂದು ಕಿವಿಮಾತು ಹೇಳಿದರು.

ಕೊಲೆಗೀಡಾದ ಕೀರ್ತನಾ ತಾಯಿ ಲಲಿತಾ ಮಾತನಾಡಿ, ‘ನನ್ನ ಮಗಳಿಗೆ ಆಗಿರುವ ಅನ್ಯಾಯ ಬೇರೆ ಯಾವುದೇ ತಾಯಿ ಮಕ್ಕಳಿಗೂ ಆಗಬಾರದು. ಇವತ್ತಿನ ಪ್ರತಿಭಟನೆ ಹೆಣ್ಣು ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಧೈರ್ಯ ತುಂಬಲಿದೆ’ ಎಂದರು.

ಪ್ರತಿಭಟನೆಯಲ್ಲಿ ಮಹಿಳಾ ಸಮಾಜದ ಉಪಾಧ್ಯಕ್ಷೆ ಕವಿತಾ, ಖಜಾಂಚಿ ಯಶೋಧ, ನಿರ್ದೇಶಕಿ ವರಲಕ್ಷ್ಮೀ, ನಿರ್ಮಲ, ಗಿರಿಜಾ, ಸಲಹ ಸಮಿತಿಯ ಸುಜಾತ, ಮಹಿಳಾ ಮತ್ತು ಮಕ್ಕಳಪರ ಸಂಘಟನೆಗಳ ಒಕ್ಕೂಟದ ವಸುಂಧರೆಡ್ಡಿ, ಎಚ್.ಎಸ್.ರೇವತಿ, ವಿಮಲಮ್ಮ, ತಿಮ್ಮಕ್ಕ, ಗೌರಮ್ಮ, ಕೆ.ಗುರುದೇವ್, ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆಯ ನಿರ್ದೇಶಕಿ ರಾಜಲಕ್ಷ್ಮಿ, ಕರವೇ (ಪ್ರವೀಣ್ ಶೆಟ್ಟಿಬಣ) ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ, ರಾಜ್ಯ ರೈತ ಸಂಘದ ಬೈರೇಗೌಡ, ಉಮಾದೇವಿ, ನವೋದಯ ಟ್ರಸ್ಟ್, ನೇಕಾರರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !