ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ

Last Updated 13 ಆಗಸ್ಟ್ 2019, 14:16 IST
ಅಕ್ಷರ ಗಾತ್ರ

ದೇವನಹಳ್ಳಿ: 2011ರ ಭೂಸ್ವಾಧೀನ ಕಾಯ್ದೆಯನ್ನು ತಿದ್ದುಪಡಿ ಮಾಡಿರುವ ಕ್ರಮ ಸಮ್ಮಿಶ್ರ ಸರ್ಕಾರದ ಪಾಪದ ಕೂಸು ಎಂದು ರೈತಸಂಘ ರಾಜ್ಯ ಘಟಕ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಆರೋಪಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ರೈತಸಂಘ ತಾಲ್ಲೂಕು ಮತ್ತು ಜಿಲ್ಲಾ ಸಂಘ ಪುನರ್ ರಚನೆ ಮತ್ತು ಜಿಲ್ಲಾಮಟ್ಟದ ರೈತರ ಸಮಾವೇಶ ಕುರಿತು ನಡೆದ ಜಿಲ್ಲಾಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

‘ಸ್ವಾಧೀನಪಡಿಸಿಕೊಂಡ ರೈತರ ಭೂಮಿಗೆ ಈ ಹಿಂದಿನ ಕಾಯ್ದೆಯಂತೆ ನಾಲ್ಕು ಪಟ್ಟು ಪರಿಹಾರ ನೀಡಲು ಅವಕಾಶವಿತ್ತು. ತಿದ್ದುಪಡಿ ಕಾಯ್ದೆಯಿಂದಾಗಿ ಕೇವಲ ಒಂದು ಪಟ್ಟು ಪರಿಹಾರ ಮಾತ್ರ ಸಿಗಲಿದೆ. ಇದು ರೈತರಿಗೆ ಮರಣಶಾಸನವಾಗಲಿದೆ. ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಈಗಾಗಲೇ ಸಂಘದ ವತಿಯಿಂದ ರಾಜ್ಯಪಾಲರಿಗೆ ಮನವಿ ನೀಡಲಾಗಿದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರ ರೈತರಿಗೆ ಸಾಲ ಮನ್ನ ಯೋಜನೆ ಸಕಾಲದಲ್ಲಿ ಸಮರ್ಪಕವಾಗಿ ನಿರ್ವಹಿಸಿಲ್ಲ. ಕಳೆದ ವರ್ಷದ ಮುಂಗಾರು ಬೆಳೆ ನಷ್ಟದ ಪರಿಹಾರ ರೈತರಿಗೆ ಈವರೆಗೆ ಸಿಕ್ಕಿಲ್ಲ. ಇತ್ತೀಚೆಗೆ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ರೈತರ ಸಾಲ ಮನ್ನದ ಬಗ್ಗೆ ಚಕಾರ ಎತ್ತಿಲ್ಲ. ರಾಜ್ಯದಲ್ಲಿ ನೆರೆಗೆ ತತ್ತರಿಸುತ್ತಿರುವ ಜಿಲ್ಲೆಗಳಲ್ಲಿನ ರೈತರು ಚೇತರಿಕೆ ಕಾಣಲು ಕನಿಷ್ಠ ಐದಾರು ವರ್ಷಗಳು ಬೇಕು. ಅಲ್ಲಿ ನೆರೆ ಸಂಕಷ್ಟ, ಇಲ್ಲಿ ಬರದ ಸಂಕಟ ಸತತ ನಾಲ್ಕು ವರ್ಷವು ಬರದತ್ತ ಹೆಜ್ಜೆ ಇಟ್ಟಿದ್ದೇವೆ. ರೈತರ ಸಮಸ್ಯೆಗಳಿಗೆ ಸ್ಪಂಧಿಸುವವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈವರೆಗೆ ರೈತರ ಸಭೆ ಕರೆದಿಲ್ಲ. ಕೆರೆಗಳಲ್ಲಿನ ಹೂಳು ಎತ್ತಿಸುವುದು, ರಾಜ ಕಾಲುವೆ ಮುಚ್ಚಿಸುವುದು ಮಾಡುತ್ತಿದ್ದಾರೆ. ಕಳೆದ ವರ್ಷ ಬೆಳೆ ವಿಮೆ ಪರಿಹಾರ ಸಿಕ್ಕಿಲ್ಲ, ಸರ್ಕಾರದಲ್ಲಿ ಬಿಗಿ ಆಡಳಿತವಿಲ್ಲ. ಸಾಗುವಳಿ ಹಕ್ಕುಪತ್ರಗಳು ಹಣ ನೀಡಿದವರಿಗೆ ಬಿಕರಿಯಾಗುತ್ತಿವೆ. ಹೇಳೋರಿಲ್ಲ ಕೇಳೋರಿಲ್ಲ. ಜಿಲ್ಲಾಡಳಿತ ಸಂಪೂರ್ಣ ಸತ್ತುಹೋಗಿದೆ ಎಂದು ಆರೋಪಿಸಿದರು.

ರೈತಸಂಘದ ಜಿಲ್ಲಾಘಟಕ ಅಧ್ಯಕ್ಷ ಕೆಂಚೇಗೌಡ ಮಾತನಾಡಿ, ‘ಭೂಕಾಯ್ದೆ ತಿದ್ದುಪಡಿ ವಿರುದ್ಧ ನಮ್ಮ ಹೋರಾಟ ನಿರಂತರವಾಗಲಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೊಂಡುತನಕ್ಕೆ ಶರಣಾಗಿದ್ದಾರೆ. ಬಿಸಿಮುಟ್ಟಿಸುವ ಕೆಲಸ ರೈತ ಸಂಘ ಶೀಘ್ರವೇ ಮಾಡಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಜಿಲ್ಲಾಧಿಕಾರಿ ನೀಲಗಿರಿ ತೆರವು ಅಭಿಯಾನ ಆರಂಭಿಸಿದ್ದಾರೆ. ಇದೊಂದು ಉತ್ತಮ ಬೆಳವಣಿಗೆಯಾದರೂ ರೈತನ ಒಂದು ಎಕರೆಯಲ್ಲಿನ ನೀಲಗಿರಿ ಮರ ತೆರವುಗೊಳಿಸಲು ಪ್ರತಿ ತಾಸಿಗೆ ₹ 800 ಜೆಸಿಬಿಗೆ ನೀಡಬೇಕು. ಒಂದು ಎಕರೆಗೆ ಕನಿಷ್ಠ ₹ 25 ಸಾವಿರ ವೆಚ್ಚವಾಗಲಿದೆ. ಬರದ ಸ್ಥಿತಿಯಲ್ಲಿ ರೈತರಿಗೆ ಎಲ್ಲಿಂದ ಹಣ ಬರುತ್ತೆ ಸರ್ಕಾರ ರೈತರಿಗೆ ಹಣ ನೀಡಲಿ. ಇಲ್ಲವೆ ಸರ್ಕಾರದ ವತಿಯಿಂದ ತೆರವುಗೊಳಿಸಲಿ ಅಥವಾ ನರೇಗಾ ಯೋಜನೆಯಡಿ ತೆರವು ಮಾಡಲಿ. ತೆರವುಗೊಳಿಸಿದ ನಂತರ ಸರ್ಕಾರವೇ ಗಿಡ ಮರ ಬೆಳೆಸಲಿ ಎಂದು ಒತ್ತಾಯಿಸಿದರು.

ಹಸಿರು ಸೇನೆ ವಿಭಾಗೀಯ ಅಧ್ಯಕ್ಷ ಕೆ.ಎಸ್ ಹರೀಶ್ ಮಾತನಾಡಿ, ‘ನದಿಮೂಲಗಳನ್ನು ಹೊಂದಿರುವ ಜಿಲ್ಲೆಯಲ್ಲಿ ನದಿ ಪಾತ್ರಗಳ ಜಾಗವನ್ನು ಒಂದು ಕಿ.ಮೀ. ನಿಂದ 500 ಮೀಟರ್‌ಗೆ ಕಡಿತ ಮಾಡಿ ನದಿ ಪಾತ್ರಗಳಲ್ಲಿ ರೆಸಾರ್ಟ್, ಐಷರಾಮಿ ಕಟ್ಟಡ, ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಡಿತಗೊಳಿಸಿದೆ. ಗಣಿಗಾರಿಕೆಗೆ ಅನುಮತಿ ನೀಡಲು ಪರೋಕ್ಷವಾಗಿ ಕಾರಣವಾಗುತ್ತಿದೆ’ ಎಂದು ದೂರಿದರು.

ನೀಲಗಿರಿ ಬೆಳೆಸಲು ರೈತರಿಗೆ ಕಡಿಮೆ ದರದಲ್ಲಿ ಸಸಿ ನೀಡಿದ್ದು, ಕೆರೆಯಂಗಲದಲ್ಲಿ ಜಾಲಿ ಮರ ಬೆಳೆಸಿದ್ದು ಸರ್ಕಾರ, ಅಂತರ್ಜಲ ಕಡಿಮೆಯಾಗಲು ಸರ್ಕಾರ ತಪ್ಪು ನಿರ್ಧಾರಗಳು ಕಾರಣವಾಗಿದೆ. ನದಿ ಮೂಲಗಳ ಪಾತ್ರವನ್ನು ಕಡಿಮೆ ಮಾಡಿರುವುದರಿಂದ ಭವಿಷ್ಯದಲ್ಲಿ ಗ್ರಾಮಾಂತರ ಜಿಲ್ಲೆ ಬಾರಿ ಗಂಡಾಂತರವನ್ನು ಎದುರಿಸಬೇಕಾಗಿದೆ. ಇದನ್ನು ತಪ್ಪಿಸಲು ರೈತ ಸಂಘ ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು.

ರೈತ ಸಂಘ ಕಾನೂನು ಸಲಹೆಗಾರ ಸಿದ್ಧಾರ್ಥ ಹಾಗೂ ರೈತ ಸಂಘ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT