ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಪತ್ರಿಕಾ ಸೇನಾನಿಗಳಿಗೊಂದು ಸಲಾಂ

Published 4 ಸೆಪ್ಟೆಂಬರ್ 2023, 5:08 IST
Last Updated 4 ಸೆಪ್ಟೆಂಬರ್ 2023, 5:08 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ), ಆನೇಕಲ್‌: ದಿನ ಬೆಳಗುವ ಸೂರ್ಯ ಮೂಡಣದಲ್ಲಿ ಇಣುಕುವ ಮುನ್ನ ಎದ್ದು, ಚಳಿ, ಗಾಳಿ ಮತ್ತು ಮಳೆ ಲೆಕ್ಕಿಸದೆ ಮನೆ ಮನೆಗೆ ಪತ್ರಿಕೆ ತಲುಪಿಸುವ ಏಜೆಂಟರು ಮತ್ತು ಪತ್ರಿಕಾ ವಿತರಕರು ಪತ್ರಿಕೆಗಳ ಜೀವಾಳ.

ಹಲವು ವರ್ಷಗಳಿಂದ ಪತ್ರಿಕೆ ವಿತರಣೆಯನ್ನೇ ವೃತ್ತಿಯಾಗಿಸಿಕೊಂಡವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದ್ದಾರೆ. ವಯಸ್ಸಿನ ಬೇದವಿಲ್ಲದೆ ವೃತ್ತಿಯಲ್ಲಿ ಹಲವರು ತೊಡಗಿಸಿಕೊಂಡಿದ್ದಾರೆ. ಓದಿನ ಜತೆಗೆ ಖರ್ಚಿಗೆ ಹಣ ದುಡಿದುಕೊಳ್ಳುವ ವಿದ್ಯಾರ್ಥಿಗಳು ಇದರ ಭಾಗವಾಗಿದ್ದಾರೆ.

ಕೋವಿಡ್‌ ಸಮಯದಲ್ಲಿ ಜೀವ ಪಣಕ್ಕಿಟ್ಟು ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸಿದ ಕೋವಿಡ್‌ ಯೋಧರು ಇವರು.

ಮನೆ ಮನೆಗೆ ದಿನಪತ್ರಿಕೆ ತಲುಪಿಸಲು ಮಳೆ, ಚಳಿ, ಗಾಳಿ ಬೀದಿನಾಯಿಗಳ ಹಾವಳಿಯ ನಡುವೆಯೂ ದುಡಿಯುತ್ತಾರೆ. ಮಳೆಗೆ ನೆನೆಯದಂತೆ ಪತ್ರಿಕೆಯನ್ನು ಜೋಪಾನ ಮಾಡಿಕೊಂಡು ಓದುಗರಿಗೆ ತಲುಪಿಸು ಹೊಣೆಗಾರಿಕೆ ಇವರದ್ದು.

ಶ್ರಮಜೀವಿಗಳಾದ ಪತ್ರಿಕಾ ಸೇನಾನಿಗಳು ಪತ್ರಿಕಾ ದಿನದ ಅಂಗವಾಗಿ ತಮ್ಮ ಮನದಾಳ ತೆರೆದಿಟ್ಟಿದ್ದಾರೆ.

ಭದ್ರತೆ ಇಲ್ಲ: ‘ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿರುವವರಲ್ಲಿ ಶೇ 90 ರಷ್ಟು ಮಂದಿ ಬಡವರು. ಬಹುತೇಕರು ಬಾಡಿಗೆ ಮನೆಗಳಲ್ಲೆ ವಾಸವಾಗಿದ್ದಾರೆ.  ಒಪ್ಪೊತ್ತಿನ ಊಟಕ್ಕಾಗಿ ಕಷ್ಟಪಡುತ್ತಾರೆ. ಸರ್ಕಾರ, ಪತ್ರಿಕಾ ವಿತರಕರ ಏಳಿಗೆಗೆ ಯಾವುದೇ ಸೌಲಭ್ಯಗಳು ಕೊಡುತ್ತಿಲ್ಲ. ಪತ್ರಿಕಾ ವಿತರಕರ ಕೆಲಸ 2-3 ಗಂಟೆಗಳು ಮಾಡಿದರೂ ಸಾಕಷ್ಟು ಶ್ರಮವಹಿಸಿ ಮಾಡಬೇಕು. ಬೀದಿ ಬೀದಿಗೆ ಗಲ್ಲಿ ಗಲ್ಲಿಗೂ ಸುತ್ತಿ ಪತ್ರಿಕೆ ಹಂಚಬೇಕು. ನಮಗೆ ಯಾವುದೇ ಭದ್ರತೆಯಿಲ್ಲ’ ಎನ್ನುತ್ತಾರೆ ಪತ್ರಿಕಾ ವಿತರಕ ಕೆಂಪೇಗೌಡ.

ಬಿಲ್‌ ಪಾವತಿಸಿ: ‘ಪತ್ರಿಕೆ ತಡವಾಗಿ ತಲುಪಿಸಿದರೆ ಓದುಗರಿಂದ ಬೈಗುಳ ತಪ್ಪಿದ್ದಲ್ಲ. ಮಳೆಗಾಲದಲ್ಲಿ ಪತ್ರಿಕೆ ಒದ್ದೆಯಾಗಿದ್ದರೆ ಅದಕ್ಕೆ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಕೆಲವೊಮ್ಮೆ ಪತ್ರಿಕೆ ಬಿಲ್ ಕೊಡುವುದಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಿತರಣೆಗೆ ಹುಡುಗರ ಸಿಗುತ್ತಿಲ್ಲ: ‘ನಮ್ಮ ತಂದೆ ಪತ್ರಿಕಾ ವಿತರಕರಾಗಿದ್ದರು. ಅವರ ಮೃತಪಟ್ಟ ಬಳಿಕ ನಾನು ಪತ್ರಿಕಾ ವಿತರಕನಾಗಿದ್ದೇನೆ. ಮೊದಲು ಓದುಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪತ್ರಿಕೆ ಹಂಚಲು ಹುಡುಗರು ಸಿಗುತ್ತಿದ್ದರು. ಆದರೆ, ಈಗ ಪತ್ರಿಕೆ ವಿತರಣೆ ಮಾಡಲು ಯಾರೂ ಬರುವುದಿಲ್ಲ. ಇಲ್ಲಿ ಸಿಗುವ ಅಲ್ಪಮೊತ್ತದ ಹಣಕ್ಕೆ ಯಾರೂ ಬರಲ್ಲ’ ಎನ್ನುತ್ತಾರೆ ಪತ್ರಿಕಾ ವಿತರಕ ಮಂಜುನಾಥ್

‘ನಮ್ಮ ತಂದೆಯಿಂದ ಬಂದ ಬಳಿಯ ವೃತ್ತಿ ಎನ್ನುವ ಕಾರಣ ಕಾರಣಕ್ಕೆ ಮುಂದುವರೆಸಿದ್ದೇನೆ. ಕೋವಿಡ್ ಸಮಯದಲ್ಲಂತೂ ನಮ್ಮ ಪ್ರಾಣವನ್ನು ಲೆಕ್ಕಿಸದೇ ಪತ್ರಿಕೆ ವಿತರಣೆ ಮಾಡಿದೆವು. ಕೆಲವರು ಮನೆಗಳ ಹತ್ತಿರಕ್ಕೂ ಬಾರದಂತೆ ನಿರ್ಬಂಧ ಹೇರುತ್ತಿದ್ದರು ಅದೊಂದು ಕಹಿ ಅನುಭವ’ ಎಂದು ಕೋವಿಡ್‌ ಕಾಲಘಟ್ಟದ ಅನುಭವ ನೆನಪಿಸಿಕೊಂಡರು.

ದೊಮ್ಮಸಂದ್ರ ಪತ್ರಿಕಾ ವಿತರಕ ಸಿ.ಮುನಿಯಪ್ಪ
ದೊಮ್ಮಸಂದ್ರ ಪತ್ರಿಕಾ ವಿತರಕ ಸಿ.ಮುನಿಯಪ್ಪ
ಪತ್ರಿಕೆ ವಿತರಣೆಗೆ ಸಜ್ಜಾಗುತ್ತಿರುವ ತಾರಕೇಶ್
ಪತ್ರಿಕೆ ವಿತರಣೆಗೆ ಸಜ್ಜಾಗುತ್ತಿರುವ ತಾರಕೇಶ್
ವಿಜಯಪುರ ಪಟ್ಟಣದಲ್ಲಿ ಪತ್ರಿಕೆ ವಿತರಣೆ ಮಾಡುತ್ತಿರುವ ಎಂ. ವರುಣ್
ವಿಜಯಪುರ ಪಟ್ಟಣದಲ್ಲಿ ಪತ್ರಿಕೆ ವಿತರಣೆ ಮಾಡುತ್ತಿರುವ ಎಂ. ವರುಣ್
ವಿಜಯಪುರ ಹೋಬಳಿ ಕೋರಮಂಗಲ ಗ್ರಾಮದಲ್ಲಿ ಪತ್ರಿಕೆ ವಿತರಣೆ ಮಾಡುತ್ತಿರುವ ವಿತರಕ ಕೆಂಪೇಗೌಡ
ವಿಜಯಪುರ ಹೋಬಳಿ ಕೋರಮಂಗಲ ಗ್ರಾಮದಲ್ಲಿ ಪತ್ರಿಕೆ ವಿತರಣೆ ಮಾಡುತ್ತಿರುವ ವಿತರಕ ಕೆಂಪೇಗೌಡ
ಮಂಜುನಾಥ್‌
ಮಂಜುನಾಥ್‌
ಸರ್ಕಾರ ನಮಗೂ ವಿಮೆ ಆರೋಗ್ಯ ಸೌಲಭ್ಯ ಒದಗಿಸಬೇಕು. ಮನೆ ನಿರ್ಮಾಣಕ್ಕೆ ಒಂದೊಂದು ನಿವೇಶನ ನೀಡಬೇಕು.‌ ನಮ್ಮ ಮಕ್ಕಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಬೇಕು
ಮಂಜುನಾಥ್‌ ಪತ್ರಿಕಾ ವಿತರಕ

ಬ್ಯಾಂಕ್‌ ಉದ್ಯೋಗಿ ಆದರೂ ಪತ್ರಿಕೆ ವಿತರಣೆಯೇ ನನ್ನ ಜೀವನ ಭಾಗ ಕಳೆದ 20 ವರ್ಷಗಳಿಂದ ಪತ್ರಿಕ ವಿತರಕನಾಗಿ ಕೆಲಸ ಮಾಡುತ್ತಿದ್ದೇನೆ. ಪತ್ರಿಕೆಯ ವಿತರಕನಾಗಿ ಕೆಲಸ ಮಾಡಿ ಎಂಬಿಎ ಪದವಿ ಪಡೆದು ಬ್ಯಾಂಕ್‌ವೊಂದರಲ್ಲಿ ಪೂರ್ಣಾವಧಿ ಕೆಲಸ ಮಾಡುತ್ತಿದ್ದೇನೆ. ಆದರೆ ಪತ್ರಿಕಾ ವಿತರಣೆ ನನ್ನ ಜೀವನದ ಭಾಗವಾಗಿದೆ. ಹಬ್ಬ ಹರಿದಿನಗಳಾಗಲಿ ಯಾವುದೇ ಕೆಲಸವಿದ್ದರೂ ಪತ್ರಿಕೆ ವಿತರಣೆಗೆ ಮಾತ್ರ ರಜೆಯಿಲ್ಲ. ಸೈಕಲ್‌ಗಳಲ್ಲಿ ಮನೆಗಳನ್ನು ತಲುಪುವ ಹುಡುಗರು ತಮ್ಮ ವಿದ್ಯಾಭ್ಯಾಸಕ್ಕಾಗಿ ನಾವು ನೀಡುವ ಹಣವನ್ನು ಬಳಸಿಕೊಂಡು ಕೆಲಸ ಮಾಡತ್ತಾರೆ. ಮುಂಜಾನೆ 5ರ ವೇಳೆಗೆ ಕೆಲಸ ಪ್ರಾರಂಭಿಸುತ್ತೇವೆ. ಎಲ್ಲಾ ರೂಟ್‌ಗಳ ಹುಡುಗರು ಹಂಚಿಕೆಗೆ ಬಂದರೆ ಮಾರ್ಗವಾರು ಹಂಚಿ ಕೆಲಸ ಮುಗಿಸಿಕೊಳ್ಳುತ್ತೇವೆ. ಕಾರಣಾಂತರಗಳಿಂದ ಒಂದು ರೂಟಿನ ಹುಡುಗ ತಪ್ಪಿದರೂ ಆ ಮನೆಗಳನ್ನು ಹುಡುಕಿ ತಲುಪಿಸುವುದು ನಮ್ಮ ಜವಬ್ದಾರಿಯಾಗಿದೆ. ತಾರಕೇಶ್ ಪತ್ರಿಕಾ ವಿತರಕರ ಆನೇಕಲ್‌ *** ವಿಮೆ ಸೌಲಭ್ಯ ಕಲ್ಪಿಸಿ ಕಳೆದ ಹತ್ತು ವರ್ಷಗಳಿಂದ ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿರುವ ದೊಮ್ಮಸಂದ್ರದ ಸಿ.ಮುನಿಯಪ್ಪ ಮಾತನಾಡಿ ‘ದೊಮ್ಮಸಂದ್ರಕ್ಕೆ ಬೆಳಗ್ಗೆ 4.30ರ ವೇಳೆಗೆ ಪಾಯಿಂಟ್‌ಗೆ ಬರುತ್ತೇವೆ. ಪತ್ರಿಕೆಗಳನ್ನು ವಿಂಗಡಿಸಿ ಹೆಗ್ಗಂಡಹಳ್ಳಿ ಕೊಮ್ಮಸಂದ್ರ ಇಟ್ಟಂಗೂರು ಚೊಕ್ಕಸಂದ್ರ ಸೂಲಕುಂಟೆ ಸೇರಿದಂತೆ ವಿವಿಧ ಹಳ್ಳಿಗಳಿಗೆ ಪ್ರಜಾವಾಣಿ ತಲುಪಿಸುತ್ತಿದ್ದೇನೆ’ ಎಂದು ತಿಳಿಸಿದರು. ‘ಹಲವು ಸಮಸ್ಯೆಗಳ ನಡುವೆಯೂ ಪತ್ರಿಕಾ ವಿತರಣೆ ನನಗೆ ಖುಷಿ ತಂದಿದೆ. ಪತ್ರಿಕೆ ವಿತರಣೆಯಲ್ಲಿಯೇ ಬದುಕು ಕಟ್ಟಿಕೊಂಡಿದ್ದೇನೆ. ಕೆಲವೊಮ್ಮೆ ನೋವಿನ ಪ್ರಸಂಗಗಳು ನಡೆದರೂ ಅವುಗಳನ್ನು ಮನಸ್ಸಿಗೆ ಹಾಕಿಕೊಳ್ಳದೇ ಮತ್ತೆ ಬೆಳಗ್ಗೆ ಪತ್ರಿಕೆಯೊಂದಿಗೆ ಮನೆ ಮನೆಗೆ ತಲುಪುತ್ತೇವೆ. ಪತ್ರಿಕಾ ವಿತರಕರಿಗೆ ಸರ್ಕಾರ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT