ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ನರೇಗಾ ಯೋಜನೆ ಅಡಿ ಉದ್ಯಾನ ನಿರ್ಮಾಣ

ಜನರ ಆರೋಗ್ಯದ ಕಡೆಗೆ ಗ್ರಾಮ ಪಂಚಾಯಿತಿ ಚಿಂತನೆ
Last Updated 7 ಅಕ್ಟೋಬರ್ 2020, 2:13 IST
ಅಕ್ಷರ ಗಾತ್ರ

ವಿಜಯಪುರ: ‘ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರೈತರ ಜಮೀನುಗಳ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ, ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೇ ಜನರ ಆರೋಗ್ಯ ರಕ್ಷಣೆ ಮಾಡುವ ನಿಟ್ಟಿನಲ್ಲಿಯೂ ಕೂಡಾ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬಹುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬುಳ್ಳಹಳ್ಳಿ ರಾಜಪ್ಪ ತಿಳಿಸಿದರು.

‘ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಭೂಮಿಯನ್ನು ಬಳಕೆ ಮಾಡಿಕೊಂಡು 100x100 ಅಳತೆಯ ಜಾಗದಲ್ಲಿ 6.5 ಲಕ್ಷ ವೆಚ್ಚದಲ್ಲಿ ನರೇಗಾ ಯೋಜನೆಯಡಿ ಉದ್ಯಾನ ನಿರ್ಗುತ್ತಿದೆ. ಇದರಿಂದ ಗ್ರಾಮಸ್ಥರ ಆರೋಗ್ಯದ ವೃದ್ಧಿಗೂ ಸಹಕಾರಿಯಾಗಲಿದ್ದು, ಪ್ರತಿಯೊಂದು ಪಂಚಾಯಿತಿಗಳಲ್ಲೂ ಸರ್ಕಾರಿ ಭೂಮಿಗಳಲ್ಲಿ ಇಂತಹ ಉದ್ಯಾನ ಅಭಿವೃದ್ಧಿ ಮಾಡಿಕೊಳ್ಳಬಹುದಾಗಿದೆ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಮುನಿರಾಜು ಮಾತನಾಡಿ, ‘ನಮ್ಮ ಗ್ರಾಮದ ಜನರು, ಪ್ರತಿನಿತ್ಯ ವಾಯುವಿಹಾರಕ್ಕಾಗಿ ಮುಖ್ಯರಸ್ತೆಗೆ ಹೋಗುತ್ತಾರೆ. ಈ ರಸ್ತೆಯಲ್ಲಿ ವಾಹನಗಳ ದಟ್ಟಣೆಯೂ ಹೆಚ್ಚಾಗಿರುವ ಕಾರಣ ಅಪಘಾತಗಳಿಗೆ ಒಳಗಾಗುತ್ತಿರುವ ಕಾರಣದಿಂದಾಗಿ ನಮ್ಮೂರಿನಲ್ಲಿದ್ದ ಸರ್ಕಾರಿ ಖಾಲಿ ಜಾಗದಲ್ಲಿ ಉದ್ಯಾನವನ ನಿರ್ಮಾಣ ಮಾಡಲಿಕ್ಕೆ ಮುಂದಾಗಿದ್ದೇವೆ’ ಎಂದರು.

‘ನರೇಗಾ ಯೋಜನೆಯಡಿ ನಿರ್ಮಾಣ ಮಾಡುತ್ತಿರುವ ಉದ್ಯಾನದ ಸುತ್ತಲೂ ಮೆಶ್ ಅಳವಡಿಕೆ, ಪಾದಚಾರಿ ಮಾರ್ಗ ನಿರ್ಮಾಣ, ಆಯುರ್ವೇದ ಸಸ್ಯ ನೆಡುವುದಕ್ಕಾಗಿ ಯೋಜನೆ ಮಾಡಿಕೊಂಡಿದ್ದೇವೆ. ಗಿಡಗಳಿಗೆ ಪಂಚಾಯಿತಿಯ ಪೈಪ್‌ಲೈನ್‌ ಮೂಲಕವೇ ನೀರು ಹಾಯಿಸಲು ಅನುಕೂಲ ಮಾಡಿಕೊಂಡಿದ್ದೇವೆ. ಮಕ್ಕಳಿಗೆ ಆಟವಾಡಲು ದಾನಿಗಳ ಸಹಾಯದಿಂದ ಆಟೋಪಕರಣಗಳನ್ನು ಅಳವಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ಸ್ಥಳೀಯ ಜನರು, ಮಹಿಳೆಯರು, ವೃದ್ಧರು ಇಲ್ಲೇ ವಾಯುವಿಹಾರ ಮಾಡಿಕೊಂಡು ಸ್ವಚ್ಛತೆ ಕಾಪಾಡಿಕೊಳ್ಳಲು ಅನುಕೂಲವಾಗಲಿದೆ. ಸಮೀಪದಲ್ಲೆ ಅಂಗನವಾಡಿ ಕೇಂದ್ರಗಳಿದ್ದು, ಇಲ್ಲಿನ ಮಕ್ಕಳಿಗೆ ಆಟವಾಡಲಿಕ್ಕೂ ಉದ್ಯಾನವನದಲ್ಲಿ ಅನುಕೂಲವಾಗಬೇಕು ಎಂದು ಯೋಜನೆ ರೂಪಿಸುತ್ತಿದ್ದೇವೆ. ಗ್ರೀನ್ ಜಿಮ್, ಉಯ್ಯಾಲೆ, ಜಾರುವ ಬಂಡಿ, ಯೋಗ ಉಪಕರಣಗಳನ್ನು ಅಳವಡಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ದಾನಿಗಳೂ ಕೂಡಾ ಇಂತಹ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದರೆ ಮತ್ತಷ್ಟು ಅಭಿವೃದ್ಧಿ ಮಾಡಿಕೊಳ್ಳಲಿಕ್ಕೆ ಸಹಕಾರಿ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಮ್ಮ, ಸದಸ್ಯರಾದ ವರಲಕ್ಷ್ಮಮ್ಮ, ಮಾಲ, ಸುಬ್ರಮಣಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT