ಭಾನುವಾರ, ಆಗಸ್ಟ್ 25, 2019
25 °C
ಪ್ರಜಾವಾಣಿ ವಾರ್ತೆ

ರಸ್ತೆಯಲ್ಲೇ ವಾಹನ ನಿಲುಗಡೆ: ಆಕ್ರೋಶ

Published:
Updated:
Prajavani

ವಿಜಯಪುರ: ಇಲ್ಲಿನ ಹಳೆ ಕೆನರಾ ಬ್ಯಾಂಕ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಸವಾರರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪೊಲೀಸ್ ಇಲಾಖೆಯವರು ಗಮನಹರಿಸಬೇಕು ಎಂದು ಸ್ಥಳೀಯ ನಿವಾಸಿ ಗೋಪಾಲಕೃಷ್ಣ ಒತ್ತಾಯಿಸಿದರು.

ರಸ್ತೆಯ ಮಧ್ಯದಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುವ ವಾಹನ ಸವಾರರಿಂದಾಗಿ ಬೇರೆ ವಾಹನಗಳು ಸಂಚರಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಮಧ್ಯಾಹ್ನದ ವೇಳೆಯಂತೂ ಮುಕ್ಕಾಲು ರಸ್ತೆಗೆ ವಾಹನಗಳನ್ನು ಸಲ್ಲಿಸಿರುತ್ತಾರೆ. ಒಂದು ವಾಹನ ಸಂಚರಿಸುವಷ್ಟು ರಸ್ತೆ ಮಾತ್ರ ಇರುತ್ತದೆ. ವಾಹನ ಸವಾರರನ್ನು ಪ್ರಶ್ನಿಸಿದರೆ ಗಲಾಟೆಗೆ ಬರುತ್ತಾರೆ. ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ಒಂದಷ್ಟು ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ ಎಂದರು.

ಸ್ಥಳೀಯ ವ್ಯಾಪಾರಿಯೊಬ್ಬರು ಮಾತನಾಡಿ, ‘ನಾವು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಅಂಗಡಿಗಳನ್ನು ಮಾಡಿಕೊಂಡಿದ್ದೇವೆ. ಅಂಗಡಿಗಳ ಮುಂದೆ ವಾಹನಗಳನ್ನು ಬೆಳಿಗ್ಗೆ ನಿಲ್ಲಿಸಿ ಹೋದರೆ ಸಂಜೆಯಾದರೂ ತೆಗೆಯುವುದಿಲ್ಲ. ಇದರಿಂದ ಅಂಗಡಿಗಳಿಗೆ ಬರುವ ಗ್ರಾಹಕರು ವಾಹನಗಳು ಅಡ್ಡ ಇವೆ ಎಂದು ಮುಂದೆ ಹೋಗುತ್ತಾರೆ. ನಮಗೆ ತುಂಬಾ ನಷ್ಟವಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ವಾಹನ ಸವಾರರಿಗೆ ಹೇಳಿದರೂ ಪ್ರಯೋಜನವಾಗುತ್ತಿಲ್ಲ’ ಎಂದರು.

‘ವಾಹನಗಳನ್ನು ನಿಲ್ಲಿಸಿ ಇಲ್ಲಿರುವ ಟೀ ಅಂಗಡಿಯ ಬಳಿಯಲ್ಲಿ ಕುಳಿತರೆ ಕೂಡಲೇ ವಾಹನಗಳನ್ನು ತೆರವು ಮಾಡಿಕೊಂಡು ಹೋಗಲ್ಲ. ನಮಗೆ ಮಾತ್ರವಲ್ಲ, ಈ ರಸ್ತೆಯಲ್ಲಿ ಸಂಚರಿಸುವಂತಹ ಪ್ರತಿಯೊಬ್ಬ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ’ ಎಂದು ಆರೋಪಿಸಿದರು.

ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ನರೇಶ್ ನಾಯಕ್ ಮಾತನಾಡಿ, ‘ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿ ಪಡಿಸುವ ರೀತಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡುವವರು, ರಸ್ತೆಗಳಿಗೆ ಬಂಡಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ಮಾಡುವವರಿಗೆ ಈಗಾಗಲೇ ಎಚ್ಚರಿಕೆ ನೀಡಿ ಅಂಗಡಿಗಳನ್ನು ಹಿಂದಕ್ಕೆ ಹಾಕಿಸಿದ್ದೇವೆ’ ಎಂದು ತಿಳಿಸಿದರು.

‘ವಾಹನಗಳನ್ನು ಪದೇ ಪದೇ ರಸ್ತೆಗಳಿಗೆ ನಿಲ್ಲಿಸಿ ಹೋಗುತ್ತಿದ್ದರೆ, ಅಂತಹ ವಾಹನಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ಸಾರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ವಾಹನಗಳನ್ನು ಒಪ್ಪಿಸಲಾಗುತ್ತದೆ’ ಎಂದರು.

Post Comments (+)