ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲ ರಕ್ಷಣೆಗೆ ಸಹಭಾಗಿತ್ವ ಅಗತ್ಯ 

ಜಾಲಿಗೆ ಕೆರೆಯಂಗಳದಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ
Last Updated 16 ಸೆಪ್ಟೆಂಬರ್ 2019, 13:00 IST
ಅಕ್ಷರ ಗಾತ್ರ

ದೇವನಹಳ್ಳಿ: ಗ್ರಾಮಾಂತರ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಶಾಶ್ವತ ಮೂಲವಿಲ್ಲದ ಕಾರಣ ಸ್ಥಳೀಯ ಗ್ರಾಮಗಳ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಸಾರ್ವಜನಿಕರ ಸಹಭಾಗಿತ್ವದ ಅಗತ್ಯವಿದೆ ಎಂದು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ಇಲ್ಲಿನ ಜಾಲಿಗೆ ಕೆರೆಯಂಗಳದಲ್ಲಿ ದಾನಿಗಳಿಂದ ಕೆರೆಯಲ್ಲಿನ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ದಿನೇದಿನೇ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಮಳೆಗಾಲವಿದ್ದರೂ ಕೆರೆಗಳಲ್ಲಿ ಹನಿ ನೀರು ಇಲ್ಲದೆ ಪಶು ಪಕ್ಷಿ ಜೀವ ಸಂಕುಲಗಳು ಕುಡಿಯುವ ನೀರಿಗಾಗಿ ತತ್ತರಿಸುತ್ತಿವೆ ಎಂದರು.

ನೆರೆ ನಿರ್ವಹಣೆಗೆ ಮುಂದಾಗಿರುವ ಸರ್ಕಾರವು ಸಂಕಷ್ಟ ಸ್ಥಿತಿಯಲ್ಲಿದೆ. ಕೆರೆಗಳಲ್ಲಿ ತುಂಬಿರುವ ಹೂಳು ಹೊರತೆಗೆದರೆ ಮಳೆ ನೀರು ಶೇಖರಣೆಗೊಂಡು ಜಲ ಮೂಲ ರಕ್ಷಣೆಯ ಜೊತೆಗೆ ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲೂ ನೀರು ಬರಲಿದೆ ಎಂದು ಹೇಳಿದರು.

ಆರದೇಶನಹಳ್ಳಿ ಸರ್ವೇ ನಂ. 224 ರಲ್ಲಿ 202 ಎಕರೆ ವಿಸ್ತೀರ್ಣವಿದೆ. ನೂರಕ್ಕೂ ಹೆಚ್ಚು ಎಕರೆಯಲ್ಲಿ ಹೊಂಗೆ, ಬಿದಿರು ಇದ್ದು ಅದನ್ನು ಹೊರತು ಪಡಿಸಿ ಹೂಳು ಹೊರಹಾಕುವ ಕಾಮಗಾರಿ ದಾನಿಯಾದ ಚೇತನ್ ಕುಮಾರ್ ಸಹೋದರು ಮತ್ತು ಸ್ನೇಹಿತರು ವಹಿಸಿಕೊಂಡಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡರಂತೆ ಕೆರೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

‘ರೈತರ ತಂಡ ಬಂದು ಭೇಟಿ ಮಾಡಿ ನೀಲಗಿರಿ ತೆರವು ಮಾಡುವಾಗ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ. ನೀಲಗಿರಿ ತೆರವುಗೊಳಿಸಿದ ನಂತರ ರೈತರಿಗೆ ಪರ್ಯಾಯ ವ್ಯವಸ್ಥೆ ಏನು ಮಾಡಬಹುದು, ಯಾವ ರೀತಿ ಆರ್ಥಿಕ ಸಹಾಯ ಮಾಡಬಹುದು ಎಂಬುದರ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಭವಿಷ್ಯದ ದೃಷ್ಠಿಯಿಂದ ಜೀವ ಜಲರಕ್ಷಣೆ ಅನಿವಾರ್ಯವಾಗಿದೆ. ಸರ್ಕಾರದ ಜೊತೆಗೆ ಸ್ಥಳೀಯರು ಅಭಿವೃದ್ಧಿ ಕಾಮಗಾರಿಗೆ ಕೈ ಜೋಡಿಸಬೇಕು ಕೆರೆಗಳ ಅಭಿವೃದ್ಧಿ ಮಾಡಿದಾಕ್ಷಣ ನೀರು ತುಂಬುವುದಿಲ್ಲ. ರಾಜಕಾಲುವೆ, ಪೋಷಕ ಕಾಲುವೆ, ಒತ್ತುವರಿಯಾಗಿರುವ ಕೆರೆಯಂಗಳ ಮೊದಲು ತೆರವುಗೊಳಿಸಬೇಕು ಎಂದು ತಿಳಿಸಿದರು.

ಪ್ರತಿನಿತ್ಯ ದೂರುಗಳು ಬರುತ್ತಲೇ ಇವೆ. ಕಂದಾಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಬೈಯಾಪಾ ವತಿಯಿಂದ ₹30 ಕೋಟಿ, ಸರ್ಕಾರದ ವಿವಿಧ ಯೋಜನೆಗಳ ಅನುದಾನ ಒಟ್ಟು ₹120 ಕೋಟಿ ಮುಖ್ಯಮಂತ್ರಿಯಾಗಿದ್ದ ಕುಮಾರಣ್ಣ ಅವಧಿಯಲ್ಲಿ ಕ್ರಿಯಾಯೋಜನೆ ರೂಪಿಸಿ ಜಾಬ್‌ ಕೋಡ್ ಆಗಿದ್ದು ಅನುದಾನ ಬಿಡುಗಡೆಯಾಗುವುದರಲ್ಲಿತ್ತು. ಬಿಜೆಪಿ ಆಡಳಿತ ಸರ್ಕಾರ ಬಂದ ನಂತರ ತಡೆ ಹಿಡಿಯಲಾಗಿದೆ. ಈ ತಡೆಗೆ ಕಾರಣವೇನು. ಮೀಸಲು ಕ್ಷೇತ್ರದಲ್ಲಿ ಯಾವ ಉದ್ದೇಶದಿಂದ ತಡೆ ಹಿಡಿಯಲಾಗಿದೆ ಎಂಬುದನ್ನು ವಿಧಾನ ಮಂಡಲ ಅಧೀವೇಶನದಲ್ಲಿ ಪ್ರಶ್ನಿಸುತ್ತೇನೆ ಎಂದು ಹೇಳಿದರು.

ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ ಮಾತನಾಡಿದರು. ದಾನಿಯಾದ ಚೇತನ್ ಕುಮಾರ್, ತಹಶೀಲ್ದಾರ್ ಆಜಿತ್ ಕುಮಾರ್ ರೈ, ಸ್ಥಳೀಯ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT