ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮಾಜಿಕ ನ್ಯಾಯ ಕೊಡುವ ಪಕ್ಷ ಕಾಂಗ್ರೆಸ್’

ವೀರಪ್ಪ ಮೊಯಿಲಿ ಅವರ ಪರವಾಗಿ ಗ್ರಾಮಗಳಲ್ಲಿ ಮತಯಾಚನೆ
Last Updated 9 ಏಪ್ರಿಲ್ 2019, 13:29 IST
ಅಕ್ಷರ ಗಾತ್ರ

ವಿಜಯಪುರ: ‘ಎಲ್ಲ ವರ್ಗದ ಜಾತಿ ಜನಾಂಗದವರಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಡುವಂತಹ ಏಕೈಕ ಪಕ್ಷ ಕಾಂಗ್ರೆಸ್, ನಮ್ಮ ಅಭ್ಯರ್ಥಿಯನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿಕೊಳ್ಳುವ ಮೂಲಕ ಈ ಭಾಗದಲ್ಲಿನ ನೀರಾವರಿ ಯೋಜನೆಗಳ ಸಾಕಾರಕ್ಕಾಗಿ ಹೆಚ್ಚಿನ ಸಹಕಾರ ನೀಡಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಗೋಪಸಂದ್ರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ಐದು ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ಕೇವಲ ಕೈಗಾರಿಕೋದ್ಯಮಿಗಳನ್ನು ಅಭಿವೃದ್ಧಿಪಡಿಸಲಿಕ್ಕಾಗಿ ಶ್ರಮಿಸಿದೆ. ರೈತರು, ಕೈಗಾರಿಕೋದ್ಯಮಿಗಳನ್ನು ಅಭಿವೃದ್ಧಿಪಡಿಸಲಿಕ್ಕಾಗಿ ಯಾವುದೇ ಶಾಶ್ವತವಾದ ಯೋಜನೆಗಳನ್ನು ಜಾರಿಗೆ ತರಲಿಲ್ಲ ಎಂದರು.

ಬಿಜೆಪಿ ಆಡಳಿತಾವಧಿಯಲ್ಲಿ ಜನರು ಭಯಭೀತರಾಗಿ ಬದುಕುವಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಆದ್ದರಿಂದ ಮತ್ತೆ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ಜನರಿಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಕಾಂಗ್ರೆಸ್ ಪ್ರಾಮಾಣಿಕವಾಗಿ ಕೆಲಸ ಮಾಡಿದೆ ಎಂದರು.

ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ₹ 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲಾಗಿತ್ತು. 70 ವರ್ಷಗಳ ಕಾಲ ಕಾಂಗ್ರೆಸ್ ಮಾಡಿರುವ ಸಾಧನೆಯಿಂದಲೇ ಇಂದು ಮೋದಿ ಪ್ರಧಾನಿ ಹುದ್ದೆಯಲ್ಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಐದು ವರ್ಷಗಳಲ್ಲಿ ಹೊಸ ಹೊಸ ತಂತ್ರಜ್ಞಾನ ಕಂಡು ಹಿಡಿದರೆ, ಶತ್ರು ದೇಶಗಳನ್ನು ಎದುರಿಸುವಷ್ಟು ಸಾಮರ್ಥ್ಯವುಳ್ಳ ಶಸ್ತ್ರಾಸ್ತ್ರಗಳನ್ನು ಈ ಅವಧಿಯಲ್ಲಿ ಖರೀದಿ ಮಾಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.

ವೀರಪ್ಪ ಮೊಯಿಲಿ ಏನೂ ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಮುಖಂಡರು, ರಾಜ್ಯದಿಂದ ಆಯ್ಕೆಯಾಗಿ ಹೋಗಿದ್ದವರು ಅವರ ಕ್ಷೇತ್ರಗಳಲ್ಲಿ ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ತೋರಿಸಲಿ ಎಂದರು.

ತ್ವರಿತವಾಗಿ ಎತ್ತಿನಹೊಳೆ ಯೋಜನೆ ಸಾಕಾರಗೊಳ್ಳಲಿದೆ. ವಿರೋಧ ಪಕ್ಷಗಳ ಸುಳ್ಳು ಮಾತುಗಳಿಗೆ ಮಣೆ ಹಾಕದೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದರು.

ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಕಯ್ಯಮ್ಮ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಅವರ ರಕ್ಷಣೆಗಾಗಿ ನಿಲ್ಲುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಯೋಜನೆಗಳೇ ಇಂದಿಗೂ ಜಾರಿಯಲ್ಲಿವೆಯೇ ಹೊರತು ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಯೋಜನೆಗಳನ್ನೇನು ಮಾಡಿಲ್ಲ ಎಂದರು.

ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್‌ನ ಅಧ್ಯಕ್ಷ ಭೈರೇಗೌಡ, ಮುಖಂಡ ಹನುಮೇಗೌಡ ಸೇರಿದಂತೆ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT