ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಆಗ್ರಹಿಸಿ ಜನರ ಮುತ್ತಿಗೆ

ಪುರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ
Last Updated 2 ನವೆಂಬರ್ 2019, 12:38 IST
ಅಕ್ಷರ ಗಾತ್ರ

ವಿಜಯಪುರ: ‘ಪುರಸಭೆಗೆ ಆಯ್ಕೆಯಾದ ಸದಸ್ಯರು ಊರನ್ನು ಅಭಿವೃದ್ಧಿ ಮಾಡುವ ಬದಲಿಗೆ ಅವರೇ ಅಭಿವೃದ್ಧಿಯಾಗಿದ್ದಾರೆ. ಪುರಸಭೆಗೆ ಹೊಸ ಅಧಿಕಾರಿ ಬಂದಾಗ ಒಂದೊಂದು ರೀತಿಯ ಕಾನೂನು ಮಾಡ್ತೀರಿ, ಇದೇನು ಜನರಿಗೆ ಅನುಕೂಲ ಮಾಡುವ ಕಚೇರಿನಾ ಅಥವಾ ಜನರಿಂದ ವಸೂಲಿ ಮಾಡಲು ಇರುವ ಕಚೇರಿನಾ’ ಎಂದು ಮಹಿಳೆಯರು ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಪುರಸಭೆಗೆ ಶನಿವಾರ ಮುತ್ತಿಗೆ ಹಾಕಿದ 8 ಮತ್ತು 10 ನೇ ವಾರ್ಡಿನ ಮಹಿಳೆಯರು, ‘ಹದಿನೈದು ದಿನಗಳಿಗೊಮ್ಮೆ ನೀರು ಬಿಡ್ತೀರಿ, ಅರ್ಧ ಗಂಟೆ ಮಾತ್ರ ನೀರು ಬಿಡಿಸ್ತೀರಿ, ಒಂದೊಂದು ಮನೆಗೆ ಐದರಿಂದ ಆರು ಬಿಂದಿಗೆ ನೀರು ಸಿಕ್ತಿವೆ. ಕೆಲವೊಮ್ಮೆ ಕರೆಂಟಿಲ್ಲ ಎನ್ನುವ ಕಾರಣ ನೀರು ಬಿಡಲ್ಲ. ಪೈಪ್ ಒಡೆದು ಹೋಗಿದೆ; ರಿಪೇರಿ ಮಾಡಬೇಕು ಎಂದು ಮೂರು ದಿನಗಳಾದರೂ ನೀರು ಬಿಡುತ್ತಿಲ್ಲ’ ಎಂದು ಟೀಕಿಸಿದರು.

‘ಸಾರ್ವಜನಿಕ ಕೊಳಾಯಿಗಳಿಗೆ ಹಣ ಕಟ್ಟಿ ಎಂದು ಒಂದೊಂದು ಮನೆಗೆ ₹5 ಸಾವಿರ ಬಿಲ್ ಕಳುಹಿಸುತ್ತೀರಿ. ಕೂಲಿ ಮಾಡಿಕೊಂಡು, ರೇಷ್ಮೆ ಬಿಚ್ಚಾಣಿಕೆ ಕೆಲಸ ಮಾಡಿಕೊಂಡು ವಾರಕ್ಕೆ ₹500 ಸಂಪಾದನೆ ಮಾಡಿಕೊಂಡು ಕುಟುಂಬ ಪೋಷಣೆ ಮಾಡಿಕೊಳ್ಳುವುದೇ ಕಷ್ಟ. ಅಂತಹದ್ದರಲ್ಲಿ ಹಣ ಕಟ್ಟದಿದ್ದರೆ ನೀರು ಬಿಡಲ್ಲ ಎಂದು ಬೆದರಿಸುತ್ತೀರಾ. ನಮ್ಮಿಂದ ಇಷ್ಟೊಂದು ಹಣ ವಸೂಲಿ ಮಾಡಿಕೊಂಡು ಆಡಳಿತ ಮಾಡಿ ಎಂದು ನಿಮಗೆ ಅಧಿಕಾರ ಕೊಟ್ಟವರು ಯಾರು. ಪುರಸಭೆ ಯಾರ ಸ್ವತ್ತು’ ಎಂದು ತರಾಟೆಗೆ ತೆಗೆದುಕೊಂಡರು.

ಸ್ಥಳೀಯ ನಿವಾಸಿ ಆಜಾದ್ ಮಾತನಾಡಿ, ವಾರ್ಡ್‌ಗಳಲ್ಲಿ ಬೀದಿದೀಪಗಳಿಲ್ಲ, ಸರಿಯಾಗಿ ಚರಂಡಿಗಳು ಸ್ವಚ್ಛ ಮಾಡಲ್ಲ, ಎಲ್ಲೆಂದರಲ್ಲಿ ಕಸ ಕೊಳೆಯುತ್ತಿದೆ. ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದೆ. ಪುರಸಭೆಗೆ ಬಂದು ಕೇಳೋಣವೆಂದರೆ ಅಧಿಕಾರಿಗಳು ಇರಲ್ಲ; ವಾರ್ಡಿನಲ್ಲಿ ಸದಸ್ಯರಿಲ್ಲ, ನಮ್ಮ ಕಷ್ಟ ಯಾರಿಗೆ ಹೇಳಬೇಕು. ನಿಮಗೆ ಇಷ್ಟ ಬಂದ ಹಾಗೆ ಕಂದಾಯ ವಸೂಲಿ ಮಾಡಲಿಕ್ಕೆ ತೀರ್ಮಾನ ಮಾಡಿಬಿಟ್ಟರೆ, ಜನ ಎಲ್ಲಿಂದ ಅಷ್ಟೊಂದು ಹಣ ತರಬೇಕು’ ಎಂದು ಆಕ್ರೋಶ ವ್ಯಕ್ತಿಪಡಿಸಿದರು.

ಎಂಜಿನಿಯರ್ ಗಜೇಂದ್ರ ಮಾತನಾಡಿ, ‘ಪ್ರತಿಯೊಂದು ಮನೆಗೂ ವೈಯಕ್ತಿಕ ಕೊಳಾಯಿ ಅಳವಡಿಸಿಕೊಡುತ್ತೇವೆ. ಒಂದು ಸಂಪರ್ಕಕ್ಕೆ ₹5 ಸಾವಿರ ಕಟ್ಟುವಂತೆ ತಿಳಿಸಿದ್ದೇವೆ ಅಷ್ಟೇ ಹೊರತು ಸಾರ್ವಜನಿಕ ಕೊಳಾಯಿಗಳಿಗೆ ಅಲ್ಲ’ ಎಂದು ಸಮಾಧಾನ ಪಡಿಸಲು ಯತ್ನಿಸಿದರು.

ಆದರೆ, ತೃಪ್ತಿಯಾಗದ ‘ಜನರು, ನಾವು ವೈಯಕ್ತಿಕ ಕೊಳಾಯಿ ಹಾಕಿಸಿಕೊಳ್ಳುವಷ್ಟು ಶಕ್ತಿವಂತರಾಗಿಲ್ಲ. ನಾವು ಬೀದಿಯಲ್ಲೇ ಹಿಡಿಯುತ್ತೇವೆ. ಸರಿಯಾಗಿ ನೀರು ಪೂರೈಕೆ ಮಾಡಿಕೊಡಿ’ ಎಂದು ಒತ್ತಾಯಿಸಿದರು.

ಕಂದಾಯ ನಿರೀಕ್ಷಕ ಜಯಕಿರಣ್, ಮುಖಂಡರಾದ ಕನಕರಾಜು, ಮುನಿರಾಜಪ್ಪ, ಬಾಲಪ್ಪ, ಮಂಜುನಾಥ್, ನಾಗೇಶ್, ನಲ್ಲೂರಮ್ಮ, ಅರುಣ, ಪಾರ್ವತಮ್ಮ, ಪುಟ್ಟಮ್ಮ, ಮಂಗಳಮ್ಮ, ವೆಂಕಟಮ್ಮ, ಮಂಜಮ್ಮ, ಮುನಿಲಕ್ಷ್ಮಮ್ಮ, ನಾರಾಯಣಮ್ಮ, ಭಾಗ್ಯಮ್ಮ, ಲಕ್ಷ್ಮಮ್ಮ ಇದ್ದರು.

ಅಧಿಕಾರಿಗಳು ಸ್ಪಂದಿಸುತ್ತಿಲ್ಲ
ಪುರಸಭೆಯ ಅಧಿಕಾರಿಗಳಿಗೆ ಸ್ಥಳೀಯ ಸಮಸ್ಯೆಗಳು ಹೇಳಿದರೂ ಜನರ ಸಮಸ್ಯೆಗಳು ಬಗೆಹರಿಸುವಷ್ಟು ಪುರುಸೊತ್ತಿಲ್ಲದಂತೆ ವರ್ತನೆ ಮಾಡುತ್ತಿದ್ದಾರೆ. ನಮ್ಮ ವಾರ್ಡಿಗೆ 20 ದಿನಗಳಾಗಿದೆ ನೀರು ಬಂದು ಇದುವರೆಗೂ ಗಮನಹರಿಸಿಲ್ಲ. ಅಧಿಕಾರಿಗಳು ಇದೇ ವರ್ತನೆ ಮಾಡಿದರೆ ಕಾನೂನು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ವಕೀಲ ಎಸ್.ಎಂ. ಅಮರನಾಥ್ ತಿಳಿಸಿದ್ದಾರೆ.

ಅನಧಿಕೃತ ಕೊಳಾಯಿಗಳಿಗೆ ನೀರುಕೊಡಲು ಸಾಧ್ಯವಿಲ್ಲ- ಮುಖ್ಯಾಧಿಕಾರಿ
ಅನಧಿಕೃತ ಕೊಳಾಯಿಗಳಿಗೆ ನೀರು ಕೊಡಲಿಕ್ಕೆ ಸಾಧ್ಯವಾಗಲ್ಲ, ಸಾರ್ವಜನಿಕ ಕೊಳಾಯಿಗಳು ಶ್ರೀಮಂತರ ಮನೆಗಳ ಮುಂದೆಯೂ ಇವೆ. ಪುರಸಭೆಯ ನಿರ್ವಹಣೆಗೂ ಆದಾಯ ಬೇಕಾಗಿರುವುದರಿಂದ ಪ್ರತಿಯೊಂದು ಮನೆಗೂ ವೈಯಕ್ತಿಕ ಸಂಪರ್ಕ ಪಡೆದುಕೊಳ್ಳುವಂತೆ ಹೇಳಿದ್ದೇವೆ. ಬಡವರಿದ್ದರೆ ಸಮಯ ಕೊಟ್ಟಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿಎ.ಬಿ.ಪ್ರದೀಪ್‌ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT