ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪರಾಧ ತಡೆಗಟ್ಟಲು ಸಹಕರಿಸಿ’

ವಿಜಯನಗರದ ವಿವಿಧ ಕಡೆಗಳಲ್ಲಿ ಪೊಲೀಸರಿಂದ ಜನರಿಗೆ ಕರಪತ್ರ ವಿತರಣೆ
Last Updated 23 ಡಿಸೆಂಬರ್ 2018, 15:57 IST
ಅಕ್ಷರ ಗಾತ್ರ

ವಿಜಯಪುರ: ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಇಲ್ಲಿನ ಪೊಲೀಸ್ ಸಿಬ್ಬಂದಿ ನಾಗರಿಕರಿಗೆ ಕರಪತ್ರಗಳನ್ನು ವಿತರಣೆ ಮಾಡಿ ಜಾಗೃತಿ ಮೂಡಿಸಿದರು.

ಇಲ್ಲಿನ ಗಾಂಧಿಚೌಕ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಅಪರಾಧಗಳನ್ನು ತಡೆಗಟ್ಟಲು ಸಹಕರಿಸುವ ಬಗ್ಗೆ ಕರಪತ್ರ ವಿತರಣೆ ಮಾಡಿದರು.

ಸಾರ್ವಜನಿಕರು ಕೈಗೊಳ್ಳಬೇಕಾದ ಸುರಕ್ಷತಾ ನಿಯಮಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ತಿಳಿವಳಿಕೆ ನೀಡುತ್ತಿದ್ದರೂ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಕಾರಣದಿಂದಾಗಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಪೊಲೀಸ್ ಸಿಬ್ಬಂದಿ ಹೇಳಿದರು.

ನಗರದಲ್ಲಿ ಮಾದಕ ದ್ರವ್ಯ ಮಾರಾಟದಂತಹ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಜನರಲ್ಲಿ ಚರ್ಚೆಗಳಾಗುತ್ತಲೇ ಇವೆ. ದ್ವಿಚಕ್ರ ವಾಹನಗಳ ಕಳವು ನಡೆಯುತ್ತಿರುವ ಸಂಶಯವಿದೆ. ಸರಣಿ ಕಳವು ಪ್ರಕರಣಗಳು ನಡೆದಿದೆ ಎಂದರು.

‘ಅಪರಾಧ ಪ್ರಕರಣಗಳು ನಡೆದರೂ ದೂರು ಕೊಟ್ಟವರನ್ನೇ ಪದೇ ಪದೇ ಠಾಣೆಗಳಿಗೆ ಕರೆಯಿಸಿಕೊಳ್ತೀರಿ, ಅವರನ್ನು ಮುಖ್ಯ ಸಾಕ್ಷಿದಾರರನ್ನಾಗಿ ಮಾಡ್ತೀರಿ, ಆದ್ದರಿಂದ ಸಾರ್ವಜನಿಕರು ನಮಗ್ಯಾಕೆ ಬೇಕು ಎಂದು ತಮ್ಮ ಪಾಡಿಗೆ ಇರುತ್ತಾರೆ’ ಎಂದು ಕೆಲವರು ಪೊಲೀಸ್ ಸಿಬ್ಬಂದಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬಸ್ ನಿಲ್ದಾಣ, ಹಳೇ ಕೆನರಾ ಬ್ಯಾಂಕ್ ರಸ್ತೆ, ಸೇರಿದಂತೆ ಹಲವಾರು ಕಡೆಗಳಲ್ಲಿ ನಾಗರಿಕರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಜೂನಿಯರ್ ಕಾಲೇಜಿನ ಬಳಿಯಿರುವ ಕ್ರೀಡಾ ಮೈದಾನ ರಾತ್ರಿಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬಸ್ ನಿಲ್ದಾಣದಲ್ಲಿ ಒಬ್ಬ ಪೇದೆ ಹೊರತು ಪಡಿಸಿದರೆ, ನಗರದಲ್ಲಿ ಯಾರೂ ಗಸ್ತು ತಿರುಗುವುದಿಲ್ಲ. ಇದರಿಂದ ಅಪರಾಧಗಳು ಮಾಡುವವರಿಗೆ ಸುಲಭವಾಗುತ್ತಿದೆ. ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಕೆಲ ನಾಗರಿಕರು ಒತ್ತಾಯಿಸಿದರು.

ವ್ಯಾಪಾರಸ್ಥರು ಅಂಗಡಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಭದ್ರತೆ ದೃಷ್ಟಿಯಿಂದ ಒಳ ಹಾಗೂ ಹೊರಗಿನ ದೃಶ್ಯಗಳನ್ನು ಸೆರೆ ಹಿಡಿಯುವಂತೆ ವ್ಯವಸ್ಥೆ ಮಾಡಬೇಕು. ಬ್ಯಾಂಕ್‌ಗಳಿಗೆ ಹಣ ಪಾವತಿಸುವಾಗ ಹಾಗೂ ಹಣ ಪಡೆಯುವ ಸಂದರ್ಭದಲ್ಲಿ ಎಚ್ಚರ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ, ಮನೆಗಳ ಬಳಿ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳಾಗಲೀ, ವಾಹನಗಳಾಗಲಿ ಸಂಚರಿಸುತ್ತಿರುವುದು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಬೇಕು ಎಂದು ತಿಳಿಸಿದರು.

ಪುರಸಭಾ ನಿವೃತ್ತ ಮುಖ್ಯಾಧಿಕಾರಿ ಶಿವಕುಮಾರ್, ವಿ.ವಿಶ್ವನಾಥ್, ಕೆಂಚೇಗೌಡ, ಚಂದ್ರಪ್ಪ, ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT