ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ 600ಟನ್ ತರಕಾರಿ ಖರೀದಿ

ಆನೇಕಲ್ ತಾಲ್ಲೂಕಿನ ರೈತರಿಗೆ ನೆರವಾದ ಜನಪ್ರತಿನಿಧಿಗಳು
Last Updated 18 ಏಪ್ರಿಲ್ 2020, 14:47 IST
ಅಕ್ಷರ ಗಾತ್ರ

ಆನೇಕಲ್: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನೂರಾರು ಎಕರೆಯಲ್ಲಿ ಬೆಳೆದಿದ್ದ ತರಕಾರಿ ಬೆಳೆಗಳೀಗೆ ಮಾರುಕಟ್ಟೆಯಿಲ್ಲದೇ ರೈತರ ಬದುಕು ಅತಂತ್ರ ಆಗುವ ಪರಿಸ್ಥಿತಿ ಆನೇಕಲ್‌ ತಾಲ್ಲೂಕಿನಲ್ಲಿ ನಿರ್ಮಾಣವಾಗಿತ್ತು. ಆದರೆ ಹಲವು ಮುಖಂಡರು ರೈತರ ನೆರವಿಗೆ ಧಾವಿಸಿ, ಅವರು ಬೆಳೆದಿದ್ದ ತರಕಾರಿಗಳನ್ನು ಖರೀದಿಸಿದ್ದಾರೆ.

ಬಮೂಲ್‌ ಮಾಜಿ ಅಧ್ಯಕ್ಷ ಆರ್‌.ಕೆ.ರಮೇಶ್‌ ಅವರು ತಾಲ್ಲೂಕಿನ ವಿವಿಧ ಗ್ರಾಮಗಳ ರೈತರಿಂದ ಸುಮಾರು 550ರಿಂದ 600ಟನ್‌ ತರಕಾರಿ ಖರೀದಿಸಿದ್ದಾರೆ. ಇವನ್ನು ವಿವಿಧ ಗ್ರಾಮಗಳ ಸುಮಾರು 50-60 ಸಾವಿರ ಕುಟುಂಬಗಳಿಗೆ ತಲಾ 10 ಕೆ.ಜಿ.ಯಂತೆ ವಿತರಿಸುತ್ತಿದ್ದಾರೆ.

100 ಟನ್‌ ಟೊಮೆಟೊ, 100 ಟನ್‌ ಕ್ಯಾರೇಟ್‌, 50 ಟನ್‌ ಆಲೂಗಡ್ಡೆ, 50 ಟನ್‌ ಕ್ಯಾಪ್ಸಿಕಮ್‌, 100 ಟನ್‌ ಕೋಸು, 50 ಟನ್‌ ಬೀಟ್ರೂಟ್‌, 100 ಟನ್‌ ಈರುಳ್ಳಿ ಖರೀದಿಸಲಾಗಿದೆ. ಆನೇಕಲ್‌ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ವಿವಿಧ ಗ್ರಾಮಗಳ ಕುಟುಂಬಗಳಿಗೆ ನೀಡಲು ಸಿದ್ಧತೆ ನಡೆಸಲಾಗಿದೆ.

ಆನೇಕಲ್‌ ತಾಲ್ಲೂಕಿನ ಹಿನ್ನಕ್ಕಿ, ಮಾರನಾಯಕನಹಳ್ಳಿ, ತಿಂಡ್ಲು, ಅತ್ತಿಬೆಲೆ, ಮಾಯಸಂದ್ರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರಿಂದ ನೇರವಾಗಿ ತರಕಾರಿ ಖರೀದಿಸಲಾಗಿದೆ. ಆರ್‌.ಕೆ.ರಮೇಶ್ ಮತ್ತು ಅವರ ಸಹೋದರ ಆರ್.ಕೆ.ಕೇಶವರೆಡ್ಡಿ ತಂಡ ಸುಮಾರು 100 ಯುವಕರೊಂದಿಗೆ ವಿವಿಧ ಭಾಗಗಳ ಮುಖಂಡರ ಸಹಕಾರದೊಂದಿಗೆ ತರಕಾರಿ ವಿತರಿಸುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಮಾರನಾಯಕನಹಳ್ಳಿಯ ಮಲ್ಲೇಶ್ ಅವರ ತೋಟದಲ್ಲಿ ಬೆಳೆಯಲಾಗಿದ್ದ ಕೋಸನ್ನು ಕೊಳ್ಳಲಾಗಿದೆ.

‘ಮಾರುಕಟ್ಟೆಯಿಲ್ಲದೇ ಕೋಸನ್ನು ತೋಟದಲ್ಲಿಯೇ ಬಿಡಲಾಗಿತ್ತು. ಆದರೆ. ಕೆ.ಜಿಗೆ ₹ 4ನಂತೆ ಕೊಂಡುಕೊಂಡಿದ್ದಾರೆ. ಇಲ್ಲವಾದಲ್ಲಿ ಬೆಳೆದ ಬೆಳೆ ಮಣ್ಣುಪಾಲಾಗುತ್ತಿತ್ತು’ ಎಂದು ಮಲ್ಲೇಶ್‌ ತಿಳಿಸಿದರು.

ಬಮೂಲ್‌ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್ ಮಾತನಾಡಿ, ಬೇಸಿಗೆ ಕಾಲದಲ್ಲಿ ರೈತರು ನೀರಿನ ಸಮಸ್ಯೆ ನಡುವೆಯೂ ಉತ್ತಮ ಬೆಳೆ ಬೆಳೆದಿದ್ದರು. ಆದರೆ, ಮಾರುಕಟ್ಟೆಯಿಲ್ಲದೇ ಬೆಳೆಗಳನ್ನು ತೋಟದಲ್ಲಿಯೇ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ₹ 60ರಿಂದ 70 ಲಕ್ಷ ವೆಚ್ಚ ಮಾಡಿ ರೈತರಿಗೆ ಕೈಲಾದ ಸಹಾಯ ಮಾಡಲಾಗುತ್ತಿದೆ ಎಂದರು.

ರಾಗಿ ಕಣಜವೆಂದೇ ಹೆಸರಾಗಿದ್ದ ಆನೇಕಲ್‌ ತಾಲ್ಲೂಕು ಇತ್ತೀಚಿನ ದಿನಗಳಲ್ಲಿ ಪುಷ್ಪೋದ್ಯಮ ಮತ್ತು ತರಕಾರಿ ಬೆಳೆಗೆ ಹೊರಳಿದೆ. ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚಿನ ಬೆಳೆಗಳನ್ನು ಬೆಳೆಯುವಲ್ಲಿ ಇಲ್ಲಿನ ರೈತರು ಯಶಸ್ವಿಯಾಗಿದ್ದರು. ಆದರೆ, ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾರುಕಟ್ಟೆಯಿಲ್ಲದೇ ರೈತರು ಪರದಾಡುವಂತಾಗಿತ್ತು. ರೈತರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಹಲವು ಮುಖಂಡರು ಮುಂದೆ ಬಂದಿರುವುದು ರೈತರು ನಿಟ್ಟಿಸಿರು ಬಿಡುವಂತಾಗಿದೆ.

ಶಾಸಕ ಬಿ.ಶಿವಣ್ಣ, ಎಪಿಎಂಸಿ ಅಧ್ಯಕ್ಷ ನರೇಂದ್ರಬಾಬು, ಮುಖಂಡರಾದ ದೊಡ್ಡಹಾಗಡೆ ಹರೀಶ್‌, ಜಿ.ಗೋಪಾಲ್‌, ಜಿಗಣಿ ಪುನೀತ್‌, ಶ್ರೀಧರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT