ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವ್ಯಾಸಿ ರಂಗಕಲೆಯಲ್ಲಿ ಸಾಧನೆ ಕಠಿಣವಾದ್ದು

ಕನ್ನಡ ಕಲಾವಿದರ ಕಚೇರಿಯಲ್ಲಿ ’ಕನ್ನಡ ದೀಪ’ ಕಾರ್ಯಕ್ರಮ
Last Updated 2 ಜುಲೈ 2019, 12:17 IST
ಅಕ್ಷರ ಗಾತ್ರ

ವಿಜಯಪುರ: ಸಮಾಜದಲ್ಲಿನ ಎಲ್ಲ ರಂಗಗಳಲ್ಲೂ ಸಾಧನೆ ಮಾಡಬಹುದು, ಆದರೆ ಹವ್ಯಾಸಿ ರಂಗಕಲೆಯಲ್ಲಿ ಸಾಧನೆ ಮಾಡುವುದು ಕಠಿಣವಾದ ಪರಿಶ್ರಮ, ಇದನ್ನು ರೂಢಿಸಿಕೊಂಡಿರುವ ಕಲಾವಿದರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ರಂಗ ಕಲಾವಿದ ಡಾ. ಮೋಹನ್‌ ಬಾಬು ಹೇಳಿದರು.

ಇಲ್ಲಿನ ಕನ್ನಡ ಕಲಾವಿದರ ಕಚೇರಿಯಲ್ಲಿ ಆಯೋಜಿಸಿದ್ದ ’ಕನ್ನಡ ದೀಪ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಂಗಕಲಾವಿದರ ಬದುಕು ತುಂಬಾ ಕಠಿಣವಾಗುತ್ತಿದೆ. ಅವರ ಸಂಕಷ್ಟವನ್ನು ಕೇಳುವರಿಲ್ಲದಂತಾಗಿದೆ. ಸರ್ಕಾರಗಳೂ ರಂಗಕಲಾವಿದರನ್ನು ಮರೆತುಬಿಟ್ಟಿವೆ. ಕಲಾವಿದರಿಗೆ ಸಿಗಬೇಕಾಗಿರುವ ಯಾವುದೇ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿರುವ ಸರ್ಕಾರ, ಕಲಾವಿದರ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಅವರು ವಾಸ ಮಾಡಲಿಕ್ಕೆ ವಸತಿ ಸೌಕರ್ಯ, ಅವರ ಕೊನೆಯ ಬದುಕಿಗೆ ಆಸರೆಯಾಗಲಿಕ್ಕಾಗಿ ಪಿಂಚಣಿ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂದರು.

ರಂಗ ಕಲಾವಿದ ರಬ್ಬನಹಳ್ಳಿ ಕೆಂಪಣ್ಣ ಮಾತನಾಡಿ, ಸಿನಿಮಾ, ಧಾರಾವಾಹಿಗಳ ಪ್ರಭಾವ ಹೆಚ್ಚಾಗಿರುವ ಕಾರಣ ಪೌರಾಣಿಕ ನಾಟಕಗಳಿಗೆ ಬೆಲೆಯಿಲ್ಲದಂತಾಗಿದೆ. ನಾಟಕಗಳು ಆರಂಭವಾಗುವಾಗ ಮಾತ್ರ ಪ್ರೇಕ್ಷಕರು ನೋಡುತ್ತಾರೆ. ಎರಡು ಸೀನು ಮುಗಿಯುವಷ್ಟರಲ್ಲಿ ಜನ ಖಾಲಿಯಾಗುತ್ತಾರೆ. ಮಹಾಭಾರತದಲ್ಲಿನ ಅನೇಕ ಸನ್ನಿವೇಶಗಳಿವೆ. ಅವುಗಳನ್ನು ನಾಟಕಗಳ ರೂಪಕ್ಕೆ ಇಳಿಸಿ ಅಭ್ಯಾಸ ಮಾಡಿ ಪ್ರದರ್ಶನ ಮಾಡುವುದರಿಂದ ಸಮಾಜಕ್ಕೆ ಉತ್ತಮ ಸಂದೇಶ ಕೊಡಲಿಕ್ಕೆ ಸಹಕಾರಿಯಾಗಲಿದೆ.

ಕಲಾ ಪ್ರದರ್ಶನದ ಮೂಲಕ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತಹ ಕಲೆಯನ್ನು ಮೈಗೂಡಿಸಿಕೊಳ್ಳಬೇಕು. ನಾಟಕಗಳಲ್ಲಿ ಪ್ರದರ್ಶನದ ಮೂಲಕ 8 ಗಂಟೆಗಳಲ್ಲಿ ನಾಟಕದ ಸಾರಾಂಶವನ್ನೆಲ್ಲಾ ಮುಗಿಸುವ ಹವ್ಯಾಸಿ ಕಲಾವಿದರಿಗೆ ಪ್ರೋತ್ಸಾಹ ಕಡಿಮೆ, ವರ್ಷ ಪೂರ್ತಿ ಕಲೆಯಲ್ಲಿ ತೊಡಗಿಸಿಕೊಳ್ಳುವಂತಹ ವೃತ್ತಿಪರ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಸಂಭಾವನೆ ಸಿಗುತ್ತಿದೆ ಎಂದರು.

ಸಾಹಿತಿ ಡಾ. ವಿ.ಎನ್. ರಮೇಶ್ ಮಾತನಾಡಿ, ‘ಸಮಾಜದಲ್ಲಿ ಹುಟ್ಟಿರುವ ನಾವು ಅನೇಕ ವಿಭಾಗಗಳಲ್ಲಿ ಬೆಳವಣಿಗೆ ಕಾಣುತ್ತೇವೆ. ಸಮಾಜದಿಂದ ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಏಳಿಗೆಗಾಗಿ ವಿನಿಯೋಗಿಸಿದಾಗ ಬದುಕು ಸಾರ್ಥಕವಾಗುತ್ತದೆ. ಕಲಾವಿದರ ಬದುಕು ಬವಣೆಗಳು ಸರ್ಕಾರಕ್ಕೆ ಅರ್ಥವಾಗಬೇಕಾದರೆ, ಕಲಾವಿದರನ್ನು ಒಟ್ಟುಗೂಡಿಸಿ ಕಲೋತ್ಸವ ಕಾರ್ಯಕ್ರಮ ಆಯೋಜನೆಯಾಗಬೇಕು’ ಎಂದು ಸಲಹೆ ನೀಡಿದರು.

ಹೋರಾಟಗಾರ ಬಿ.ಕೆ.ಶಿವಪ್ಪ ಮಾತನಾಡಿ, ಕಲೆಯೆಂಬುದು ಯಾರೊಬ್ಬರ ಸ್ವತ್ತಲ್ಲ, ಯಾರು ಅದನ್ನು ಆರಾಧಿಸುತ್ತಾರೊ ಅವರಿಗೆ ಅದು ಒಲಿಯುತ್ತದೆ. ಜೀವನದಲ್ಲಿ ಜನರನ್ನು ರಂಜಿಸುವ ಎಷ್ಟೋ ಕಲಾವಿದರ ಬದುಕಿನ ಹಿಂದೆ ಕಣ್ಣೀರಿನ ಕಥೆ ಇರುತ್ತದೆ. ಅದನ್ನೆಲ್ಲಾ ಮರೆತು ಜನರ ಸಂತೋಷಕ್ಕಾಗಿ ಅಭಿನಯಿಸುತ್ತಿರುತ್ತಾರೆ. ಇಂತಹ ನೈಜ ಕಲಾವಿದರ ಬದುಕಿಗೆ ಆಸರೆಯನ್ನು ನೀಡುವ ಕಾರ್ಯ ತ್ವರಿತವಾಗಿ ಆಗಬೇಕಾಗಿದೆ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಜಗೋಪಾಲ್ ಮಾತನಾಡಿ, ಸದಾ ಸಮಾಜವನ್ನು ರಂಜಿಸುವಂತಹ ಕಾಯಕದಲ್ಲಿ ತೊಡಗಿಸಿಕೊಳ್ಳುವಂತಹ ರಂಗಕಲಾವಿದರು 60 ವರ್ಷದ ನಂತರ ಉಳಿಯುವುದು ಕಷ್ಟಕರವಾದ ಸಂಗತಿ. ಹವ್ಯಾಸಿ ಕಲಾವಿದರಿಗೆ ಕನಿಷ್ಠ ಮಾಸಿಕ ₹ 5 ಸಾವಿರ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ಹವ್ಯಾಸಿ ಕಲಾವಿದರಿಗೆ 50 ವರ್ಷಕ್ಕೆ ಪಿಂಚಣಿ ಕೊಡುವ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ರಂಗಕಲಾವಿದರಾದ ರಬ್ಬನಹಳ್ಳಿ ಡಾ.ಕೆಂಪಣ್ಣ, ಹಾಗೂ ಮುದುಗುರ್ಕಿ ಡಾ. ಮೋಹನ್‌ಬಾಬು ಅವರನ್ನು ಸನ್ಮಾನಿಸಲಾಯಿತು. ಎಂ.ವಿ. ನಾಯ್ಡು, ಮತ್ತು ಗಾಯಕ ನರಸಿಂಹಪ್ಪ ಅವರ ತಂಡದಿಂದ ರಂಗಗೀತೆಗಳ ಗಾಯನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಮುಖಂಡರಾದ ಚಂದ್ರಶೇಖರ ಹಡಪದ್, ಜೆ.ಎನ್. ಶ್ರೀನಿವಾಸ್, ಕನಕರಾಜು, ಮಹೇಶ್, ಜೆ.ಆರ್. ಮುನಿವೀರಣ್ಣ, ಸಿ. ಮುನಿಯಪ್ಪ, ಟಿ. ಗೋವಿಂದರಾಜು, ಸುಬ್ರಮಣಿ, ವೆಲ್ಡರ್ ಮುನಿಮಾರಪ್ಪ, ವೇಮಣ್ಣ, ಜನಾರ್ಧನ್, ಗೋವಿಂದರಾಜು, ಶಂಕರ್, ಅಪ್ಪಿರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT