ವಿಶ್ವೇಶ್ವರಯ್ಯ ಸಾಧನೆ ಅಗಾಧ: ಚೀ.ಮಾ.ಸುಧಾಕರ್

7
ವಿವೇಕಾನಂದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ‘ಎಂಜಿನಿಯರ್‌ಗಳ ದಿನ’

ವಿಶ್ವೇಶ್ವರಯ್ಯ ಸಾಧನೆ ಅಗಾಧ: ಚೀ.ಮಾ.ಸುಧಾಕರ್

Published:
Updated:
Deccan Herald

ವಿಜಯಪುರ: ಭಾರತ ರತ್ನ ಎಂ.ವಿಶ್ವೇಶ್ವರಯ್ಯನವರು ಮೈಸೂರು ಅರಸರ ಆಡಳಿತ ಸಂದರ್ಭದಲ್ಲಿ ಮಾಡಿರುವ ಸಾಧನೆ ಅಗಾಧ ಮತ್ತು ಅವಿಸ್ಮರಣೀಯವಾಗಿವೆ. ಸ್ವತಂತ್ರ ಭಾರತದಲ್ಲಿ ಮತ್ತೆ ಅಂಥ ಉತ್ತೇಜಕ ಬೆಳವಣಿಗೆ ಕಾಣಿಸುತ್ತಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚೀ.ಮಾ.ಸುಧಾಕರ್ ಹೇಳಿದರು.

ಇಲ್ಲಿನ ಯಲುವಹಳ್ಳಿ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶನಿವಾರ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಎಂಜಿನಿಯರ್‌ಗಳ ದಿನಾಚರಣೆ’ ಅಂಗವಾಗಿ ಅವರು ಮಾತನಾಡಿದರು.

ವಿಶ್ವೇಶ್ವರಯ್ಯನವರು ದೇಶ ಕಂಡ ಅಪರೂಪದ ಎಂಜಿನಿಯರ್. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಮಹಾನ್ ಚೇತನ. ವಿಶ್ವೇಶ್ವರಯ್ಯ ಅವರ ಕಾಲದಲ್ಲಿ ನಡೆದ ಎಲ್ಲಾ ಸೇತುವೆ, ಆಣೆಕಟ್ಟುಗಳು, ದೊಡ್ಡ ಕಟ್ಟಡಗಳು ಇಂದಿಗೂ ಸುಭದ್ರವಾಗಿವೆ ಎಂದು ತಿಳಿಸಿದರು.

ಇಂದಿನ ಎಂಜಿನಿಯರುಗಳು ವಿಶ್ವೇಶ್ವರಯ್ಯ ಅವರಲ್ಲಿನ ದೂರದೃಷ್ಟಿಯನ್ನು ಮೈಗೂಡಿಸಿಕೊಳ್ಳಬೇಕು. ಸುಭದ್ರವಾದ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಎಂಜಿನಿಯರ್‌ಗಳ ಪಾತ್ರವು ಮಹತ್ತರವಾದ್ದಾಗಿದೆ ಎಂದರು.

ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ ಮಾತನಾಡಿ, ವಿಶ್ವೇಶ್ವರಯ್ಯನವರ ನೀರಾವರಿ ಯೋಜನೆಗಳು ಇಂದಿಗೂ ಮಾದರಿಯಾಗಿವೆ. ಸೂಕ್ತ ಜಾಗಗಳಲ್ಲಿ ಗುಣಮಟ್ಟದ ಜಲಾಶಯಗಳನ್ನು ಕಟ್ಟುವುದರ ಮೂಲಕ ನೀರಿನ ಸದ್ಬಳಕೆ ಹೇಗೆ ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ಮಾಡಿ ತೋರಿಸಿದ್ದಾರೆ ಎಂದರು.

ತಮ್ಮ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳನ್ನು, ಸವಾಲುಗಳನ್ನು ಬದ್ಧತೆ ಮತ್ತು ಕುಶಲತೆಯಿಂದ ಪರಿಹರಿಸಬೇಕು. ಎಂಜಿನಿಯರ್‌ಗಳು, ವಿಜ್ಞಾನಿಗಳು ಹಾಗೂ ಚಿಂತಕರಾಗಿದ್ದು ಸಾವಿರಾರು ವರ್ಷಗಳ ಹಿಂದೆಯೇ ಪಿರಮಿಡ್, ತಾಜ್ ಮಹಲ್ ನಂತಹ ವಿಶೇಷ ವಿನ್ಯಾಸದ ಕಟ್ಟಡಗಳ ಕಲ್ಪನೆ ಮಾಡಿ ವಿನ್ಯಾಸ ರೂಪಿಸಿದ್ದರು. ಅನೇಕ ವೈಶಿಷ್ಟಪೂರ್ಣ ಸ್ಮಾರಕಗಳು, ದೇವಸ್ಥಾನಗಳು, ಚರ್ಚ್‌ಗಳು, ಮಸೀದಿಗಳು ಹಾಗೂ ಮಂದಿರಗಳನ್ನು ನಿರ್ಮಿಸಿದ್ದಾರೆ ಎಂದು ಸ್ಮರಿಸಿದರು.

ಸಮಾಜದಲ್ಲಿ ಎಂಜಿನಿಯರ್‌ಗಳಿಗೆ ವಿಶೇಷ ಗೌರವವಿದೆ. ತಾವು ಮಾಡುವ ಕೆಲಸ ಶಾಶ್ವತವಾಗಿ ಜನರ ಸ್ಮರಣೆಯಲ್ಲಿರುವಂತೆ ಹಾಗೂ ಬದುಕಿನ ಎಲ್ಲಾ ರಂಗಗಳಲ್ಲಿ ಎಂಜಿನಿಯರ್‌ಗಳ ಅವಶ್ಯಕತೆ ಇದ್ದು ಅವರು ಆತ್ಮಸಾಕ್ಷಿಗೆ ಸರಿಯಾಗಿ ಶಿಸ್ತು ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು.

ಪ್ರಾಂಶುಪಾಲ ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮುನಿರಾಜು, ನಗರ ಕಾರ್ಯದರ್ಶಿ ಮುನಿವೆಂಕಟರವಣಪ್ಪ, ನಾರಾಯಣಸ್ವಾಮಿ, ಅಶೋಕ್, ಅಲ್ಲಾಭಕಾಷ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !