ಸೋಮವಾರ, ಆಗಸ್ಟ್ 15, 2022
24 °C

ರಾಗಿಗೆ ಬಂತು ಕೀಟ ಬಾಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಹೋಬಳಿಯಲ್ಲಿ ರಾಗಿ ಬೆಳೆಗೆ ಹಸಿರು ಹುಳುಗಳ ಕಾಟ ಶುರುವಾಗಿದೆ. ರಾಗಿ ಬೆಳೆಯನ್ನೇ ನಂಬಿರುವ ರೈತರಿಗೆ ಸಂಕಷ್ಟ ಎದುರಾಗಿದೆ. ರಾಗಿ ಬೆಳೆಯನ್ನು ಹೊರತು ಪಡಿಸಿ ಎಲ್ಲ ಬೆಳೆಗಳಿಗೂ ಔಷಧ ಸಿಂಪಡಣೆ ಮಾಡುತ್ತಿದ್ದ ರೈತರು ಈಗ ರಾಗಿ ಬೆಳೆಗೂ ಔಷಧ ಸಿಂಪಡಿಸುವ ಕಾಲ ಬಂದಂತಾಗಿದೆ ಎಂದು ರೈತ ಪ್ರದೀಪ್ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಹುಳುಗಳ ಕಾಟ ತಾಳಲಾರದ ರೈತರು ಇನ್ನು ನಮಗೆ ರಾಗಿ ಬೆಳೆ ಕೈಗೆ ಸಿಗಲಾರದು ಎಂಬ ನಿರಾಶೆಯಲ್ಲಿದ್ದಾರೆ. ಹಲವಾರು ಗ್ರಾಮಗಳಲ್ಲಿ ಬಿತ್ತನೆ ಮಾಡಿ ರಾಗಿ ಬೆಳೆಯ ಕನಸು ಕಾಣುತ್ತಿರುವ ರೈತರ ಜಮೀನುಗಳಲ್ಲಿ ಹುಳುಗಳು ದಾಳಿ ಮಾಡಿರುವ ಪರಿಣಾಮ ರಾಗಿ ಬೆಳೆಯ ಗರಿಗಳು ತೆನೆಗಳು ಬರುವ ಮುನ್ನವೇ ಒಣಗುತ್ತಿವೆ.

ಈ ಹುಳುಗಳನ್ನು ನಾಶ ಮಾಡದೇ ಬಿಟ್ಟರೆ, ರಾಗಿ ಪೈರಿನ ಗರಿ, ಕಾಂಡದ ಸಮೇತ ತಿನ್ನುತ್ತವೆ. ಇದರಿಂದ ರಾಗಿ ಗಿಡದ ಸುಳಿ ಮೇಲೆ ಬಾರಲಾರದೆ ಕುಂಠಿತವಾಗುತ್ತದೆ. ಒಂದು ರಾಗಿ ಹೊಲಕ್ಕೆ ಈ ಹುಳುಗಳು ದಾಳಿ ಇಟ್ಟರೆ ಮುಗಿಯಿತು. ಒಂದು ಹೊಲವನ್ನೇ ನಾಶ ಮಾಡುತ್ತವೆ. ಅಷ್ಟೇ ಅಲ್ಲದೇ ಪಕ್ಕದ ಹೊಲದ ಬೆಳೆಗಳಿಗೂ ದಾಳಿ ಇಡುತ್ತವೆ.

ಹುಳುಗಳ ಹುಟ್ಟು ಹೇಗೆ: ಮಳೆಯ ಪ್ರಮಾಣ ಹಾಗೂ ವಾತಾವರಣದಲ್ಲಿ ಉಂಟಾಗಿರುವ ವ್ಯತ್ಯಾಸವೇ ಹುಳುಗಳ ಹುಟ್ಟಿಗೆ ಕಾರಣ ಎಂಬ ಅಂಶವನ್ನು ಅಧಿಕಾರಿಗಳು ಮತ್ತು ಪ್ರಗತಿ ಪರ ರೈತರು ಹೇಳುತ್ತಾರೆ. ವಾಡಿಕೆಯಂತೆ ರಾಗಿ ಬಿತ್ತನೆ ಸಮಯದಲ್ಲಿ ಮಳೆಯಾಗಿಲ್ಲ. ತಡವಾಗಿ ಮಳೆ ಆಯ್ತು. ಬಿತ್ತನೆ ಕೂಡ ತಡವಾಯ್ತು. ಮೇಲೆದ್ದ ರಾಗಿ ಪೈರಿಗೆ ಇತ್ತಿಚೆಗೆ ಬಿದ್ದ ಮಳೆಯಿಂದ ವಾತಾವರಣದಲ್ಲಿ ತೇವಾಂಶ ವೃದ್ಧಿಗೊಂಡು ಮೊಟ್ಟೆಗಳು ಒಡೆದು ಹುಳುಗಳು ಹೊರ ಬಂದು ರಾಗಿ ಬೆಳೆಗೆ ದಾಳಿ ಇಡುತ್ತವೆ.

ಪರಿಹಾರ ನೀಡಲು ಆಗ್ರಹ: ‘ಗ್ರಾಮೀಣ ಭಾಗದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ರಾಗಿ ಬೆಳೆಗಳನ್ನೇ ನಂಬಿ ಜೀವನ ಮಾಡುವಂತ ಪರಿಸ್ಥಿತಿ ಇದೆ. ಹಲವು ವರ್ಷಗಳಿಂದ ಮಳೆ ಕೈ ಕೊಟ್ಟ ಕಾರಣ ಬೇರೆ ಬೆಳೆಗಳನ್ನು ಬೆಳೆಯಲಿಕ್ಕೂ ಆಗಿರಲಿಲ್ಲ. ಈ ವರ್ಷ ಉತ್ತಮವಾಗಿ ಮಳೆಯಾಗಿದ್ದು, ಬೆಳೆಗಳು ಈಗ ಹುಳುಗಳ ದಾಳಿಯಿಂದ ಕೈ ಸುಟ್ಟುಕೊಳ್ಳುವಂತಾಗಿದ್ದು ವಿಧಿಯಿಲ್ಲದೇ ರಾಸಾಯನಿಕ ಔಷಧಿಗಳನ್ನು ಸಿಂಪಡಣೆ ಮಾಡಿ ಹುಳುಗಳನ್ನು ನಾಶಪಡಿಸುವುದರ ಜೊತೆಗೆ ಹೊಲಗಳಲ್ಲಿನ ಕಳೆಯನ್ನೂ ನಾಶ ಪಡಿಸುತ್ತಿದ್ದೇವೆ’ ಎಂದರು.

‘ಕೃಷಿ ಇಲಾಖೆ ಅಧಿಕಾರಿಗಳು ರಾಗಿ ಬೆಳೆಯನ್ನು ರೈತರಿಗೆ ಅಗತ್ಯವಾಗಿ ಬೇಕಾಗಿರುವ ಸಲಹೆಗಳನ್ನು ನೀಡುವ ಮೂಲಕ ರಾಗಿ, ತೊಗರಿ, ಅವರೆ, ಅಲಸಂಧಿ, ಸೇರಿದಂತೆ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಸಹಕಾರ ನೀಡಬೇಕು’ ಎಂದರು.

ಹುಳುಗಳಿಂದ ಏನಾಗುತ್ತದೆ: ರಾಗಿ ಬೆಳೆಯಲ್ಲಿ ಕಾಣಿಸಿಕೊಳ್ಳುವ ಹುಳುಗಳು ಆರಂಭದಲ್ಲಿ ಕಾಂಡದಿಂದ ಗರಿಗಳನ್ನು ತಿನ್ನುತ್ತಾ ಬರುತ್ತವೆ. ಇದರಿಂದ ಗರಿಗಳು ತುಂಡಾಗಿ ಬಿದ್ದು, ರಾಗಿ ಪೈರಿನಲ್ಲಿ ಶಕ್ತಿ ಕುಂಠಿತವಾಗಿ ತೆನೆ ನಿರೀಕ್ಷಿತ ಪ್ರಮಾಣದಲ್ಲಿ ಕಾಳು ಕಟ್ಟದೆ ಇಳುವರಿ ಕಡಿಮೆಯಾಗುತ್ತದೆ. ಆಗ ಹುಲ್ಲಿನ ಪ್ರಮಾಣ ಕಡಿಮೆಯಾಗಿ ಒಟ್ಟಾಗಿ ಬೆಳೆಯೂ ಹಾಳಾಗುತ್ತದೆ.

‘ರೈತರು ಆತಂಕಪಡದೆ ಹುಳುಗಳು ಕಂಡ ಬಂದ ತಕ್ಷಣ ನೂವಾನ್ ಔಷಧವನ್ನು ಒಂದು ಲೀಟರ್ ನೀರಿಗೆ ಎರಡುವರೆ ಎಂಎಲ್ ನಷ್ಟು ಹಾಕಿ ಹೊಲಕ್ಕೆ ಸಿಂಪಡಣೆ ಮಾಡಬಹುದು. ಇದಲ್ಲದೆ ಕ್ಲೋರೊಪೈರಿಪಾಸ್ ಔಷಧವನ್ನು ಒಂದು ಲೀಟರಿಗೆ 3-4 ಎಂಎಲ್‌ನಷ್ಟು ಹಾಕಿ ಸಿಂಪಡಣೆ ಮಾಡಬೇಕು’ ಎಂದು ಕೃಷಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಮ್ಮ ತಾತನವರ ಕಾಲದಿಂದಲೂ ರಾಗಿ ಬೆಳೆಗೆ ಔಷಧ ಸಿಂಪಡಣೆ ಮಾಡಿದ್ದನ್ನು ನಾನು ಕಂಡಿಲ್ಲ. ಈ ಬಾರಿ ರಾಗಿ ಹೊಲಗಳು ಹುಳುಗಳ ದಾಳಿಗೆ ಒಳಗಾಗಿವೆ. ಔಷಧ ಸಿಂಪಡಣೆ ಮಾಡುತ್ತಿದ್ದೇವೆ. ಸಣ್ಣ ರೈತರಿಗೆ ಹೆಚ್ಚು ನಷ್ಟವಾಗುತ್ತಿದೆ ಎಂದು ರೈತ ಮುನಿಶಾಮಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು