ಶುಕ್ರವಾರ, ಡಿಸೆಂಬರ್ 6, 2019
17 °C

ದೇವನಹಳ್ಳಿ: ಹಿಪ್ಪುನೇರಳೆಗೆ ಕೀಟ ಹಾವಳಿ

ವಡ್ಡನಹಳ್ಳಿ ಭೊಜ್ಯಾನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ರೇಷ್ಮೆ ತೋಟದ ಹಿಪ್ಪುನೇರಳೆ ಸೊಪ್ಪಿಗೆ ಕೀಟಗಳು ಲಗ್ಗೆ ಇಟ್ಟಿದ್ದು ರೇಷ್ಮೆ ಬೆಳೆಗಾರರಿಗೆ ಆತಂಕವನ್ನು ಸೃಷ್ಟಿಸಿದೆ.

ಜಿಲ್ಲೆಯಲ್ಲಿ ರೇಷ್ಮೆ, ಹೈನುಗಾರಿಕೆ ಮತ್ತು ತೋಟಗಾರಿಕೆ ಬೆಳೆ ದ್ರಾಕ್ಷಿ ಅತ್ಯಂತ ಪ್ರಮುಖವಾಗಿವೆ. ಕಳೆದ ಆರೇಳು ದಿನಗಳಿಂದ ಜಡಿಮಳೆ ನಡುವೆ ಶೀತ ವಾತಾವರಣ ಹೆಚ್ಚಿದೆ. ಗೂಡಿನ ಉತ್ಪಾದನೆಯು ಶೇಕಡವಾರು ಕಡಿಮೆಯಾಗುತ್ತಿರುವ ಬೆನ್ನಲ್ಲೆ ಕೀಟಗಳ ಬಾಧೆ ಹತೋಟಿಗೆ ಬಾರದಿರುವುದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಕುಂದಾಣ, ವಿಜಯಪುರ ಕಸಬಾ, ಚನ್ನರಾಯಪಟ್ಟಣ ಹೋಬಳಿ, ಹೊಸಕೋಟೆ ತಾಲ್ಲೂಕು ಸೂಲಿಬೆಲೆ, ನಂದಗುಡಿ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, ತೂಬುಗೆರೆ ಹೋಬಳಿ ವ್ಯಾಪ್ತಿಯ ರೈತರ ರೇಷ್ಮೆ ತೋಟದಲ್ಲಿ ಕೀಟಗಳ ಬಾಧೆ ಉಲ್ಬಣಿಸುತ್ತಿರುವುದು ರೈತರ ನಿದ್ದೆಗೆಡಿಸಿದೆ.

ಬಿಟ್ಟು ಬರುತ್ತಿರುವ ತುಂತುರು ಮಳೆಯಿಂದ ಈಗಾಗಲೇ ರಾಗಿ ಫಸಲು ನಷ್ಟವಾಗುತ್ತಿರುವ ಬೆನ್ನಲ್ಲೇ ಕೀಟಗಳ ಹಾವಳಿ ಕೆಲವೊಂದುಕಡೆ ಮಿತಿಮೀರಿದೆ, ತಂಪು ವಾತಾವರಣಕ್ಕೆ ಒಗ್ಗಿಕೊಂಡಿರುವ ಕೀಟಗಳು ಹಿಪ್ಪುನೇರಳೆ ಸುರುಳಿ ಎಲೆಗಳ ಭಾಗದಿಂದಲೇ ಕಾರ್ಯಾಚರಣೆ ಮಾಡಿ ಇಡಿ ಹಿಪ್ಪು ನೇರಳೆ ಗಿಡದ ಎಲೆಗಳನ್ನು ಅಪೋಶನ ಮಾಡುತ್ತಿವೆ. ಕೀಟಬಾಧೆಯಿಂದ ಹಿಪ್ಪುನೇರಳೆ ಸೊಪ್ಪಿನ ಇಳುವರಿ ಸಾಕಷ್ಟು ಪ್ರಮಾಣದಲ್ಲಿ ಕುಸಿತವಾಗುತ್ತಿದೆ ಎಂಬುದಾಗಿ ರೈತರು ಅವಲತ್ತುಕೊಂಡಿದ್ದಾರೆ.

ದೀಪಾವಳಿ ಹಬ್ಬದ ಹಿಂದು ಮುಂದು ವಿಶಾಖ ಮಳೆ ಸುರಿದ್ದರೆ ಕೀಟಬಾಧೆ ಅಷ್ಟೊಂದು ಬಾಧಿಸುತ್ತಿರಲಿಲ್ಲ. ಪ್ರಸ್ತುತ ಬಹುತೇಕ ಮಳೆಗಾಲ ಮುಗಿದಿದ್ದು ಅಕಾಲಿಕವಾಗಿ ಬೀಳುತ್ತಿರುವ ತುಂತುರು ಮಳೆ ಹನಿ ಕೀಟಗಳ ಉತ್ಪತಿ ಮತ್ತು ಎಲೆಗಳನ್ನು ಅಪೋಶನ ಮಾಡಲು ಸಹಕಾರಿಯಾಗಿದೆ. ರಾಸಾಯನಿಕಯುಕ್ತ ಔಷಧಿ ಸಿಂಪಡಿಸಿದರೆ ರೇಷ್ಮೆ ಸಾಕಾಣೆಯಲ್ಲಿರುವ ಹುಳುಗಳಿಗೆ ಔಷಧಿ ಸಿಂಪಡಿಸಿದ ಸೊಪ್ಪು ತಿನ್ನುವ ಹುಳು ಸಾವನ್ನಪ್ಪುತ್ತವೆ. ಬಿಟ್ಟರೆ ಇಡಿ ತೋಟ ಕೀಟಬಾಧೆಗೆ ಒಳಗಾಗುತ್ತದೆ. ಏನುಮಾಡಬೇಕು ಎಂಬುದು ತೋಚುತ್ತಿಲ್ಲ. ಬೇರೆಡೆ ಇರುವ ತೋಟಕ್ಕೆ ಔಷಧೋಪಚಾರ ಮಾಡಿದರೂ ಕೀಟಬಾಧೆ ಹತೋಟಿಗೆ ಬರುತ್ತಿಲ್ಲ ಎಂಬುದಾಗಿ ರೈತರು ಹೇಳುತ್ತಾರೆ.

ಕೀಟಬಾಧೆಯಿಂದ ರೇಷ್ಮೆ ಗೂಡು ಉತ್ಪಾದನೆಯೂ ಪ್ರತಿಶತ ಕುಸಿತವಾಗಿದೆ. ಕನಿಷ್ಟ 100 ಮೊಟ್ಟೆ ರೇಷ್ಮೆ ಹುಳು ಚಾಕಿಯಲ್ಲಿ ಸಾಕಾಣಿಕೆ ಮಾಡಿದರೆ ಶೇಕಡ 25ರಷ್ಟು ಗುಣಮಟ್ಟದ ರೇಷ್ಮೆ ಗೂಡು ಉತ್ಪಾದನೆ ನಿರೀಕ್ಷಿಸುವುದು ಕಷ್ಟವಾಗುತ್ತಿದೆ. ಸೊಪ್ಪಿನ ಕೊರತೆ ಒಂದೆಡೆಯಾದರೆ ಚಾಕಿ ಸಾಕಾಣಿಕೆಗೆ ಶೀತವಾತಾವರಣದಲ್ಲಿ ಕಷ್ಟವಾಗುತ್ತಿದೆ. ಬೆಳಗಿನ ವೇಳೆ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಷಿಯಸ್ ಇರುತ್ತದೆ. ರಾತ್ರಿ ವೇಳೆ ಪದೇಪದೇ ವಿದ್ಯುತ್ ಕಡಿತವಾಗುತ್ತಿದೆ. ಇದ್ದಲಿನ ಶಾಖ ನೀಡಲಾಗುತ್ತಿದ್ದರೂ ಸಾಕಾಣಿಕೆ ಹುಳುಗಳು ಸಪ್ಪೆಯಾಗುವ ಪ್ರಮಾಣ ಹೆಚ್ಚುತ್ತಿದೆ. ಚಳಿಗಾಲದಲ್ಲಿ ರೇಷ್ಮೆ ಸಾಕಾಣಿಕೆ ಬೇಡ ಅನಿಸಿಬಿಟ್ಟಿದೆ ಎನ್ನುತ್ತಾರೆ ರೇಷ್ಮೆ ಬೆಳೆಗಾರ ಚಿಕ್ಕೇಗೌಡ.

ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ 2,658, ದೇವನಹಳ್ಳಿ 3,391, ದೊಡ್ಡಬಳ್ಳಾಪುರ 508, ನೆಲಮಂಗಲ 67, ಒಟ್ಟು 6624 ರೈತರು ಜಿಲ್ಲೆಯಲ್ಲಿ ಒಟ್ಟು 6,970 ಹೆಕ್ಟರ್‌ನಲ್ಲಿ ಮಿಶ್ರ ತಳಿ ಮತ್ತು ಬೈವೋಲ್ಟನ್‌ ರೇಷ್ಮೆ ಬೆಳೆಗಾರರಿದ್ದಾರೆ. ಪ್ರಸ್ತುತ ಕೀಟಬಾಧೆ ಇದೆ ಎಂಬುದು ಗಮನಕ್ಕೆ ಬಂದಿಲ್ಲ. ಅಕಸ್ಮಿಕ ಬಂದಿದ್ದರೆ ರೇಷ್ಮೆ ಬೆಳೆಗಾರರು ಚಾಕಿ ಸಾಕಾಣಿಕೆಗೆ 20 ದಿನ ಮೊದಲು ಕೀಟಬಾಧೆಗೆ ಕಡಿವಾಣ ಹಾಕಲು ನೋವಾನ್ ಔಷಧಿ ಸಿಂಪಡಣೆ ಮಾಡಬೇಕು. ಈಗಾಗಲೇ ಚಾಕಿ ಸಾಕಾಣಿಕೆ ಮಾಡುತ್ತಿದ್ದರೆ ಔಷಧಿ ಸಿಂಪರಣೆ ಮಾಡಿ ಅದೇ ಸೊಪ್ಪನ್ನು ಚಾಕಿಗೆ ಹಾಕುವುದರಿಂದ ರೇಷ್ಮೆ ಹುಳುಗಳು ಸತ್ತುಹೋಗುತ್ತವೆ ಎಂದು ಹೇಳಿದರು.

ಔಷಧಿ ಸಿಂಪಡಣೆ ರೇಷ್ಮೆ ಗಿಡ ಮತ್ತು ಸಾಲು ಕಡ್ಡಿಯ ಬುಡದಿಂದ ಆರಂಭಿಸಬೇಕು. ಈಗಾಗಲೇ ಔಷಧಿ ಇಲಾಖೆಯಲ್ಲಿ ದಾಸ್ತಾನು ಮಾಡಲಾಗಿದ್ದು ರೈತರು ಅಧಿಕಾರಿಗಳನ್ನು ಸಂಪರ್ಕಿಸಿ ಉಚಿತವಾಗಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕು ಎಂದು ರೇಷ್ಮೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಕುಮಾರ ಸ್ವಾಮಿ ತಿಳಿಸಿದರು.

ವಾರ್ಷಿಕ ಚಳಿಗಾಲದಲ್ಲಿ ರೇಷ್ಮೆಗೂಡು ಉತ್ಪಾದನೆ ಕಡಿಮೆಯಾಗುವುದು ಸಹಜವಾದರೂ ಈ ಬಾರಿ ಶೀತವಾತಾವರಣ ಹೆಚ್ಚಾಗಿದೆ. ಮಿಶ್ರತಳಿ ರೇಷ್ಮೆಗೂಡು ಪ್ರತಿ ಕೆ.ಜಿಗೆ ಪ್ರಸ್ತುತ ಕನಿಷ್ಠ ₹ 250ರಿಂದ ಗರಿಷ್ಠ ₹ 460 ಮಾರುಕಟ್ಟೆಯಲ್ಲಿ ರೈತರಿಗೆ ಸಿಗುತ್ತಿದೆ. ಬೈವೋಲ್ಟನ್‌ ಪ್ರತಿ ಕೆ.ಜಿಗೆ ₹ 470ಕ್ಕಿಂತ ಕಡಿಮೆ ಇಲ್ಲ. ಉತ್ಪಾದನೆ ಕಡಿಮೆ, ಬೇಡಿಕೆ ಹೆಚ್ಚು ಇದ್ದಾಗ ಸಹಜ ಪ್ರಕ್ರಿಯೆ ಮಾಸಿಕ 30 ಟನ್ ಸರಾಸರಿ ಉತ್ಪಾದನೆಯಿಂದ 25 ಟನ್ ಗೆ ಇಳಿದಿದೆ ಎನ್ನುತ್ತಾರೆ ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕ ಸುಭಾಷ್ ಬಿ. ಸಾತೀನಹಳ್ಳಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು