ಶುಕ್ರವಾರ, ಫೆಬ್ರವರಿ 26, 2021
30 °C
ಮುಜರಾಯಿ ಇಲಾಖೆಗೆ ಹಸ್ತಾಂತರಿಸಲು ಕಂದಾಯ ಇಲಾಖೆ ಅಧಿಕಾರಿಗಳ ಮೀನಮೇಷ

ಭೂ ಒತ್ತುವರಿ ಆತಂಕದಲ್ಲಿ ಪಾರಿವಾಳ ಗುಡ್ಡ

ವಡ್ಡನಹಳ್ಳಿ ಭೋಜ್ಯಾನಾಯ್ಕ Updated:

ಅಕ್ಷರ ಗಾತ್ರ : | |

Deccan Herald

ದೇವನಹಳ್ಳಿ: ಅಲ್ಲಿ ಹಸಿರು ತೋರಣದ ಛಾಪು. ಅದು ಭಕ್ತಿ–ಭಾವದ ನೆಲಗಟ್ಟು. ಪ್ರಕೃತಿ ನಿರ್ಮಿತ ವಿಸ್ಮಯಕಾರಿ ಕಲ್ಲು ಬಂಡಗಳು. ಇದು ದೇವನಹಳ್ಳಿ ನಗರದಿಂದ 1.5 ಕಿ.ಮೀ ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್ ರಸ್ತೆಯಲ್ಲಿರುವ ಏಕೈಕ ರಮ್ಯತಾಣ, ಅದುವೇ ಪಾರಿವಾಳ ಗುಡ್ಡ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವು ಸಾವಿರಾರು ಎಕರೆ ಭೂಮಿ, ಅರಣ್ಯ ಪ್ರದೇಶ, ಸಣ್ಣಪುಟ್ಟ ಬೆಟ್ಟಗುಡ್ಡಗಳನ್ನು ಅಪೋಷಣೆ ತೆಗೆದುಕೊಂಡಿದೆ. ಇದರ ನಡುವೆ ದೇವನಹಳ್ಳಿ ಸಮೀಪವಿರುವ ವಾಯು ವಿಹಾರಿಗಳಿಗೆ ಪ್ರಿಯವಾಗಿರುವ ಹಾಗೂ ತನ್ನ ಒಡಲಲ್ಲಿ ಹಲವು ಸಸ್ಯ ಸಂಕುಲಗಳನ್ನು ಇಟ್ಟುಕೊಂಡಿವ ಈ ಪ್ರದೇಶದ ಮೇಲೆ ಒತ್ತುವರಿದಾರ ಕಣ್ಣು ಬಿದ್ದಿದೆ ಎಂಬ ಆರೋಪಗಳು ಕೇಳಿ ಬಂದಿದೆ.

ಈ ಗುಡ್ಡವು ಕಸಬಾ ಹೋಬಳಿ ವ್ಯಾಪ್ತಿಯಲ್ಲಿದೆ. ಇದರ ಒಟ್ಟು 44ಎಕರೆ ವಿಸ್ತೀರ್ಣದಲ್ಲಿ 30 ಎಕರೆ ಜಾಗವನ್ನು ಜೈನ ಮಂದಿರಕ್ಕೆ 99 ವರ್ಷಗಳಿಗೆ ಸರ್ಕಾರ ಗುತ್ತಿಗೆ ನೀಡಿದೆ. ಉಳಿದ 14 ಎಕರೆ ಜಾಗದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಾಲಯ, ಕನಕ ದೇವಾಲಯ, ಗವಿಬೀರಲಿಂಗೇಶ್ವರ ದೇವಾಲಯ, ವೀರಭದ್ರಸ್ವಾಮಿ, ಗಣಪತಿ ದೇವಾಲಯ, ಭಜನೆ ಮಂದಿರ, ನಾಗರಕಟ್ಟೆ, ಸಾಧು ಸಂತರ ಸಮಾಧಿಗಳು ಇವೆ. ಇಂತಹ ಪವಿತ್ರ ಧಾರ್ಮಿಕ ಕೇಂದ್ರ ಮೂಲ ಸೌಲಭ್ಯದಿಂದ ವಂಚಿತವಾಗಿರುವುದು ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಎಂಬುದು ಸಾರ್ವಜನಿಕ ಆರೋಪ.

ಮೂಲ ಸೌಕರ್ಯದ ತೊಂದರೆ ಒಂದೆಡೆಯಾದರೆ, ಉಳಿದ 14ಎಕರೆ ವ್ಯಾಪ್ತಿಯಲ್ಲಿ ಕಳೆದ 12 ವರ್ಷಗಳಿಂದ ಭಾರತ ಸೇವಾದಳ, ಲಯನ್ಸ್ ಸಂಸ್ಥೆ ಮತ್ತು ಇತರೆ ಸಂಘ ಸಂಸ್ಥೆಗಳು, ಅರಣ್ಯ ಇಲಾಖೆ ಸಹಯೋಗದಲ್ಲಿ 2,500 ಸಾವಿಕ್ಕೂ ಹೆಚ್ಚು ವಿವಿಧ ಜಾತಿ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ.

‘ಅನೇಕ ಬಾರಿ ಗುಡ್ಡಕ್ಕೆ ಬೆಂಕಿ ಬಿದ್ದಿದೆ. ಅರೆ ಬರೆ ಬೆಂದ ಮರಗಳೇ ಚಿಗುರಿ ಹಸಿರು ನಳನಳಿಸುವಂತಾಗಿದೆ. ಸರ್ಕಾರಿ ಜಾಗವನ್ನು ಕಾಪಾಡಬೇಕಾಗಿರುವ ಕಂದಾಯ ಇಲಾಖೆ ಈ ಕುರಿತು ಮೀನಮೇಷ ಎಣಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು’ ಎನ್ನುತ್ತಾರೆ ಭಾರತ ಸೇವಾದಳ ನಿಕಟ ಪೂರ್ವ ತಾಲ್ಲೂಕು ಘಟಕ ಅಧ್ಯಕ್ಷ ಲಕ್ಷ್ಮೀನಾರಾಯಣ.

ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಈ ಗುಡ್ಡದ ಪಕ್ಕದಿಂದಲೇ ಹಾದು ಹೋಗುತ್ತಾರೆ. ಗುಡ್ಡದ ಮುಂಭಾಗದ ರಸ್ತೆ ಪಕ್ಕದಲ್ಲಿ ಹಲವು ಹೊಟೇಲ್‌ಗಳು ತಲೆ ಎತ್ತಿವೆ. ಮೂಲ ಸೌಕರ್ಯ ಕಲ್ಪಿಸಿದರೆ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ನೆಚ್ಚಿನ ಸ್ಥಳವಾಗಲಿದೆ ಎನ್ನುತ್ತಾರೆ ಸೇವಾದಳ ಸದಸ್ಯ ಬಿ.ಕೆ.ಶಿವಪ್ಪ.

ಒತ್ತುವರಿ ಆರೋಪ: ‘ಪಾರಿವಾಳ ಗುಡ್ಡದ 14 ಎಕರೆ ಜಾಗದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಸಂಭವ ಇದೆ. ಹೀಗಾಗುವ ಮೊದಲು ಎಚ್ಚೆತ್ತುಕೊಂಡು ಮುಜರಾಯಿ ಇಲಾಖೆಗೆ ದೇವಾಲಯ ಮತ್ತು ಜಾಗ ಹಸ್ತಾಂತರಿಸಬೇಕು. ಇದರ ಜತೆಗೆ, ಕುಡಿಯುವ ನೀರು, ತಂಗುದಾಣ, ಶೌಚಾಲಯ, ಸಿಮೆಂಟ್ ಆಸನಗಳ ವ್ಯವಸ್ಥೆ ಮಾಡಬೇಕು’ ಎಂಬುದು ಮುಖಂಡ ನಾರಾಯಣಸ್ವಾಮಿ ಒತ್ತಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು