ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-ಸ್ವತ್ತು ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ: ಲಂಚದ ಆರೋಪ

ಹೊಂದಾಣಿಕೆಯಾಗದ ಹಕ್ಕುಪತ್ರಗಳು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಸಭೆಗೆ ಹಾಜರಾಗುವಂತೆ ಒತ್ತಾಯ
Last Updated 3 ನವೆಂಬರ್ 2019, 15:55 IST
ಅಕ್ಷರ ಗಾತ್ರ

ಸೂಲಿಬೆಲೆ: ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಏರ್ಪಡಿಸಿದ್ದ ಕುಂದು ಕೊರತೆ ಸಭೆಯಲ್ಲಿ ಇ-ಸ್ವತ್ತು ಪ್ರಕ್ರಿಯೆಯಲ್ಲಿ ತಡ ಆಗುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಸಭೆಗೆ ಹಾಜರಾಗಬೇಕೆಂದು ಪಟ್ಟು ಹಿಡಿದರು.

ಈ ಕುರಿತು ಮಾತನಾಡಿದ ಅರ್ಜಿದಾರಸೈಯದ್ ಶಬ್ಬೀರ್, ‘ಇ-ಸ್ವತ್ತು ಮಾಡಿಕೂಡಲು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ 2-3 ವರ್ಷಗಳಾಗಿದ್ದರೂ ಇಲ್ಲಿಯವರೆಗೂ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಪಂಚಾಯಿತಿಗೆ ಸಲ್ಲಿಕೆಯಾಗಬೇಕಾದ ತೆರಿಗೆಯನ್ನು ಕಾಲ ಕಾಲಕ್ಕೆ ಸಲ್ಲಿಸಲಾಗುತ್ತಿದೆ. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲು ಪಂಚಾಯಿತಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಇ-ಸ್ವತ್ತುಗಳ ಪ್ರಕ್ರಿಯೆಗೆ ಲಂಚದ ಆರೋಪ: ಸರ್ವೇ ನಂಬರ್ 10, 379 ಹಾಗೂ 7ರಲ್ಲಿ ಈ ಹಿಂದೆ ಅನೇಕರಿಗೆ ಇ ಸ್ವತ್ತು ಮಾಡಿಕೊಟ್ಟಿರುವ ದಾಖಲೆಗಳಿವೆ. ಮಧ್ಯವರ್ತಿಗಳ ಮೂಲಕ ಬಂದಂತಹ ಇ-ಸ್ವತ್ತು ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇದಕ್ಕೆ ಧನಿಗೊಡಿಸಿದ ಸದಸ್ಯ ಜನಾರ್ಧನ್ ರೆಡ್ಡಿ, ‘ಇ-ಸ್ವತ್ತು ಮಾಡಿಕೊಡಲು ಪಂಚಾಯಿತಿಯಲ್ಲಿ ₹ 10 ಸಾವಿರ ಪಡೆಯಲಾಗುತ್ತಿದೆ. ಹೆಬ್ಬೆಟ್ಟು ನೀಡಲು ₹ 1,500 ಅನ್ನು ಇಒ ಪಡೆಯುತ್ತಿದ್ದಾರೆಂದು ಸಾರ್ವಜನಿಕರು ದೂರುತ್ತಿದ್ದಾರೆ’ ಎಂದು ಪಂಚಾಯಿತಿಯಲ್ಲಿ ನಡೆಯುತ್ತಿರುವ ಲಂಚದ ವಿರುದ್ಧ ಸಭೆಯಲ್ಲಿ ಕಿಡಿಕಾರಿದರು.

ಪಂಚಾಯಿತಿ ದಾಖಲೆ ಸೃಷ್ಟಿಸುವ ಜಾಲ: ಸರ್ವೇ ನಂಬರ್ 10 (ಗುಟ್ಟಾ) ರಲ್ಲಿ ಇದ್ದಂತಹ ಕಾಲುವೆಗಳು, ರಾಜ ಕಾಲುವೆಗಳು, ಹಳ್ಳಗಳನ್ನು ಮಣ್ಣುಹಾಕಿ ಮುಚ್ಚಿ ಪಂಚಾಯಿತಿ ಡಿಮ್ಯಾಂಡ್ ರಿಜಿಸ್ಟರ್‌ನಲ್ಲಿ ನಿವೇಶನ ಸಂಖ್ಯೆ ದಾಖಲು ಮಾಡಿ, ಫಾರಂ ನಂಬರ್ 9 ಮತ್ತು 10 ವಿತರಣೆ ಮಾಡಿ, ಖಾತೆ ಮಾಡಿಕೊಡುವ ದೊಡ್ಡ ಜಾಲ ಗ್ರಾಮದಲ್ಲಿದೆ. ಇದರಲ್ಲಿ ಪಂಚಾಯಿತಿ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ಸಾರ್ವಜನಿರಿಂದ ಮಾಹಿತಿ ಸಿಕ್ಕಿದ್ದು ಇದರ ಬಗ್ಗೆ ಉನ್ನತ ಅಧಿಕಾರಿಗಳಿಂದ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹೊಂದಾಣಿಕೆಯಾಗದ ಹಕ್ಕು ಪತ್ರಗಳು: ಸೂಲಿಬೆಲೆ ಗ್ರಾಮದ ಸರ್ವೇ ನಂಬರ್ 379 ಹಾಗೂ 7ರಲ್ಲಿ ಸರ್ಕಾರದಿಂದ 1964 ಮತ್ತು 1971 ರಲ್ಲಿ ಮಂಜೂರಾದ ನಿವೇಶನಗಳ ಹಕ್ಕು ಪತ್ರಗಳು ತಾಲ್ಲೂಕು ಪಂಚಾಯಿತಿಯಲ್ಲಿರುವ ದಾಖಲೆಗಳಿಗೆ ಹಾಗೂ ಸರ್ವೇ ನಂಬರ್ 10ರಲ್ಲಿ, ಹಕ್ಕುಪತ್ರಗಳು, ಚಕ್ಕುಬಂದಿಗಳು ಹೊಂದಾಣಿಕೆಯಾಗದ ಕಾರಣ ಇ-ಸ್ವತ್ತು ಮಾಡಿಸಲು ಬಂದಂತಹ ಅರ್ಜಿಗಳು ತಾಲ್ಲೂಕು ಪಂಚಾಯಿತಿಯಿಂದ ತಿರಸ್ಕೃತಗೊಂಡು ಕಡತಗಳು ವಾಪಸ್ಸು ಬಂದಿವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಂದರ್ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅರ್ಜಿದಾರರು, ಸರ್ಕಾರಿ ದಾಖಲೆಗೆ ಹೊಂದಾಣಿಕೆಯಾಗದ ಮೇಲೆ ಪಂಚಾಯಿತಿ ತೆರಿಗೆ ತೆಗೆದುಕೊಳ್ಳುವುದು, ಕಟ್ಟಡಕ್ಕೆ ಲೈಸನ್ಸ್ ಮತ್ತು ಎನ್ಒಸಿ ಏಕೆ ನೀಡುತ್ತದೆ ಎಂದು ಪ್ರಶ್ನಿಸಿದರು.

ಗ್ರಾ.ಪಂ.ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಮುನಿಕದರಪ್ಪ ಹಾಗೂ ಸದಸ್ಯರು ಇದ್ದರು.

ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಲು ಆಗ್ರಹ: ಬೆಂ.ಗ್ರಾ ಜಿಲ್ಲಾಧಿಕಾರಿಗಳು ಕೇವಲ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರಕ್ಕೆ ಸೀಮೀತರಾಗುತ್ತಿದ್ದಾರೆ. ಸೂಲಿಬೆಲೆ ಗ್ರಾಮದಲ್ಲಿ ಅನೇಕ ಕುಂದು ಕೊರತೆಗಳಿದ್ದು ಒಮ್ಮೆ ಗ್ರಾಮಕ್ಕೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು ಎಂದು ಸಭೆಯಲ್ಲಿ ಸೇರಿದ್ದ ಸಾರ್ವಜನಿಕರ ಪರವಾಗಿ ಅಬ್ದುಲ್ ವಾಜಿದ್ ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT