ಬೀದಿನಾಯಿಗಳ ಹಾವಳಿ; ಜನತೆ ತತ್ತರ

ಮಂಗಳವಾರ, ಜೂಲೈ 23, 2019
27 °C
ಪುರಸಭೆ ಅಧಿಕಾರಿಗಳಿಗೆ ವಿಜಯಪುರ ನಿವಾಸಿಗಳ ಮನವಿ

ಬೀದಿನಾಯಿಗಳ ಹಾವಳಿ; ಜನತೆ ತತ್ತರ

Published:
Updated:
Prajavani

ವಿಜಯಪುರ: ನಗರದಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಿ ಜನರು ನೆಮ್ಮದಿಯಿಂದ ಜೀವನ ಮಾಡಲಿಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿಗಳು ಪುರಸಭಾ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.

ಬೀದಿ ಬೀದಿಗಳಲ್ಲೂ ನಾಯಿಗಳು ಹಿಂಡು ಹಿಂಡಾಗಿ ತಿರುಗಾಡುತ್ತಿರುತ್ತವೆ. ರಸ್ತೆಗಳಲ್ಲಿ ಒಂಟಿಯಾಗಿ ಓಡಾಡಲಿಕ್ಕೆ ಜನರು ಭಯಭೀತರಾಗುತ್ತಿದ್ದಾರೆ. ನಗರದ ಕೆಲ ವಾರ್ಡುಗಳಲ್ಲಿ ವಾಸದ ಮನೆಗಳ ಪಕ್ಕದಲ್ಲೆ ಮಾಂಸ ಮಾರಾಟದ ಅಂಗಡಿಗಳನ್ನು ಮಾಡಿಕೊಂಡಿರುವುದರಿಂದ ಮಾಂಸದ ತುಂಡುಗಳನ್ನು ತಿಂದು ರುಚಿ ಕಂಡುಕೊಂಡಿರುವ ಬೀದಿ ನಾಯಿಗಳು, ಅಲ್ಲಲ್ಲಿ ಹಿಂಡಾಗಿ ಮಲಗಿರುತ್ತವೆ ಎಂದು ಸುಬ್ರಮಣಿ ಹೇಳುತ್ತಾರೆ.

ಗುಂಪಾಗಿ ಮಲಗಿರುವ ಬೀದಿನಾಯಿಗಳು ಮಕ್ಕಳು ಓಡಾಡುವಾಗ ಏಕಾಏಕಿ ದಾಳಿ ಮಾಡುತ್ತವೆ. ನಾಯಿಗಳಿಂದ ಗಾಯಗೊಳ್ಳುತ್ತಿರುವ ಮಕ್ಕಳು ಆಸ್ಪತ್ರೆಗಳಿಗೆ ದಾಖಲಾಗುವಂತಾಗಿದೆ.

ಪುರಸಭೆಯ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿಕೊಂಡರೂ ಕೂಡಾ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ದ್ವಿಚಕ್ರ ವಾಹನ ಸವಾರರು ವಾರ್ಡುಗಳಲ್ಲಿ ಸಂಚರಿಸುವಾಗ ಹಿಂದೆ ಬೀಳುವ ನಾಯಿಗಳು, ಅಟ್ಟಿಸಿಕೊಂಡು ಬಂದು ಕಚ್ಚುತ್ತಿವೆ. ಈ ಸಮಸ್ಯೆಯಿಂದ ಜನರನ್ನು ಮುಕ್ತಗೊಳಿಸಲು ಪುರಸಭಾ ಅಧಿಕಾರಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಶ್ರೀರಾಮ್ ಮಾತನಾಡಿ, ನಗರದಲ್ಲಿ ನಾಯಿಕೊಡೆಗಳಂತೆ ತಲೆಎತ್ತಿರುವ ಮಾಂಸದ ಅಂಗಡಿಗಳಿಂದ ಮೂಟೆಗಳಲ್ಲಿ ತಂದು ಹಾಕುವಂತಹ ತ್ಯಾಜ್ಯಗಳು ಹಾಗೂ ಸತ್ತ ಕೋಳಿಗಳನ್ನು ತಿನ್ನಲಿಕ್ಕೆ ಬರುವ ಬೀದಿನಾಯಿಗಳು ಕೆಲ ವಾರ್ಡ್‌ಗಳನ್ನು ಬಿಟ್ಟು ಹೊರಗೆ ಹೋಗುತ್ತಿಲ್ಲ ಎಂದರು.

‘ರಾತ್ರಿಯಾದರೆ ಜೋರಾಗಿ ಊಳಿಡುತ್ತಿರುತ್ತವೆ. ನೆಮ್ಮದಿಯಿಂದ ನಿದ್ದೆ ಮಾಡಲಿಕ್ಕೂ ಸಾಧ್ಯವಾಗುತ್ತಿಲ್ಲ. ಅವುಗಳನ್ನು ಓಡಿಸಲು ಹೋಗಲಿಕ್ಕೂ ಸಾಧ್ಯವಾಗದಂತಹ ಸ್ಥಿತಿ ಉಂಟಾಗಿದೆ. ಇನ್ನು ಎಷ್ಟು ದಿನಗಳ ಕಾಲ ಇಂತಹ ಸಮಸ್ಯೆಯನ್ನು ನಾವು ಅನುಭವಿಸಬೇಕು’ ಎಂದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿಕಾರಿದರು.

ಅಸ್ಪತ್ರೆಗೆ ದಿನನಿತ್ಯ ಬೀದಿನಾಯಿ ಕಡಿತಕ್ಕೆ ಒಳಗಾಗಿ ಬರುವಂತಹ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ದೊಡ್ಡಮಟ್ಟದಲ್ಲಿ ಅಪಾಯವಾಗುವ ಮೊದಲೇ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದು ಉತ್ತಮ ಎಂದರು.

ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಮಾತನಾಡಿ, ಈ ಹಿಂದೆ ಬೀದಿನಾಯಿಗಳನ್ನು ಹಿಡಿದು ಬೇರೆ ಕಡೆಗೆ ಬಿಟ್ಟು ಬಂದಿದ್ದಾರೆ. ಆದರೂ ನಾಯಿಗಳು ಪುನಃ ನಗರಕ್ಕೆ ಬಂದು ಬಿಟ್ಟಿವೆ ಎಂದರು.

ನಾಯಿಗಳನ್ನು ಹಿಡಿದು ಕೊಲ್ಲುವಂತಿಲ್ಲ. ಅವುಗಳನ್ನು ಹಿಡಿದು ಅವುಗಳಿಗೆ ಶಸ್ತ್ರಚಿಕಿತ್ಸೆ ಮಾಡಿ, ಒಂದು ವಾರದ ಕಾಲ ನಿಗಾ ವಹಿಸಿಕೊಂಡು ನಂತರ ವಾಪಸ್‌ ಬಿಡಬೇಕು. ನಂತರ ಅವು ಯಾರನ್ನೂ ಕಚ್ಚುವುದಿಲ್ಲ. ಅವುಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !