ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆಗೆ ಮೆಟ್ರೊ ವಿಸ್ತರಣೆ -ಸಚಿವ ಆರ್‌. ಅಶೋಕ ಭರವಸೆ

ಕಾವೇರಿ ಕುಡಿಯುವ ನೀರು ಪೂರೈಕೆಗೆ ಕ್ರಮ– ಸಚಿವ ಆರ್‌. ಅಶೋಕ ಭರವಸೆ
Last Updated 22 ಜನವರಿ 2023, 12:25 IST
ಅಕ್ಷರ ಗಾತ್ರ

ಹೊಸಕೋಟೆ: ಬೆಂಗಳೂರಿಗೆ ಹೊಂದಿಕೊಂಡಿರುವ ಹೊಸ ಕೋಟೆವರೆಗೆ ಮೆಟ್ರೊ ರೈಲು ಸಂಚಾರ ಮತ್ತು ಕಾವೇರಿ ನೀರು ಪೂರೈಕೆ ವಿಸ್ತರಿಸಲು ಶೀಘ್ರ ಸಂಪುಟದಲ್ಲಿ ತೀರ್ಮಾನಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಭರವಸೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಶನಿವಾರ ಹೊಸ ಕೋಟೆ ತಾಲ್ಲೂಕಿನ ಜಡಿಗೇನಹಳ್ಳಿಯಲ್ಲಿ ಆಯೋಜಿಸಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಂದಿನ ತಿಂಗಳಿಂದ ಪ್ರತಿ ಪಡಿತರ ಚೀಟಿದಾರರಿಗೆ 10 ಕೆ.ಜಿ ಆಹಾರ ಪದಾರ್ಥ ವಿತರಿಸಲಾಗುವುದು ಎಂದು ತಿಳಿಸಿದರು.

‘ಅರಣ್ಯದ ಅಂಚಿನಲ್ಲಿ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ಬಡವರನ್ನು ಒಕ್ಕಲೆಬ್ಬಿಸುವುದಿಲ್ಲ. ಅರಣ್ಯದ ಅಂಚಿನಲ್ಲಿ ಸೂರು ನಿರ್ಮಿಸಿಕೊಂಡವರು 94ಸಿ ಮತ್ತು 94ಸಿಸಿ ಅರ್ಜಿ ಸಲ್ಲಿಸಿದರೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸಾಗುವಳಿ ಚೀಟಿ ಹೊಂದಿರುವ ಬಡವರಿಗೆ ಭೂಮಿ ಮಂಜೂರು ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

ತಾಲ್ಲೂಕಿನ ಬಡವರಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಗೋಮಾಳ ಗುರುತಿಸಿ 10 ಸಾವಿರ ನಿವೇಶನ ಹಂಚಿಕೆ ಮಾಡಲಾಗುವುದು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಲಿದೆ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್‌ ಭರವಸೆ ನೀಡಿದರು.

ಸಾಗುವಳಿ ಚೀಟಿ ಹೊಂದಿರುವ ರೈತರಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಬೇಕು. ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಬಡ ರೈತರನ್ನು ಒಕ್ಕಲೆಬ್ಬಿಸಬಾರದು. ಕೇಂದ್ರದಲ್ಲಿ ಸುಸಜ್ಜಿತ ಉಪ ನೋಂದಣಾಧಿಕಾರಿ ಕಚೇರಿ ಹಾಗೂ ತಾಲ್ಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಶಾಸಕ ಶರತ್ ಬಚ್ಚೇಗೌಡ ಒತ್ತಾಯಿಸಿದರು.

ಜಿಲ್ಲೆಯಲ್ಲಿ 42 ಬಾರಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ನಡೆಸಲಾಗಿದೆ. ಈ ವೇಳೆ 1.35 ಲಕ್ಷಕ್ಕೂ ಹೆಚ್ಚು ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಪೌರ ಕಾರ್ಮಿಕರ ವಸತಿ ಸೌಕರ್ಯಕ್ಕೆ 20 ಗುಂಟೆ ನಿವೇಶನ ಒದಗಿಸಲಾಗಿದೆ. ಜಲಜೀವನ ಮಿಷನ್‌ ಯೋಜನೆಯಡಿ ₹40 ಕೋಟಿ ವೆಚ್ಚದಲ್ಲಿ ಮನೆಗಳಿಗೆ ನಲ್ಲಿಗಳ ಸಂಪರ್ಕ ಸೇರಿದಂತೆ ಒಟ್ಟಾರೆ ₹48 ಕೋಟಿ ಮೌಲ್ಯದ ಸೌಕರ್ಯ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಹೇಳಿದರು.

ಹೊಸಕೋಟೆ ನಗರಸಭೆ ಅಧ್ಯಕ್ಷ ಬಿ‌.ಕೆ. ನಾಗರಾಜ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಂಕರೇಗೌಡ, ಉಪಾಧ್ಯಕ್ಷೆ ಸುಗುಣಾ, ಜಡಿಗೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಪಲ್ಲವಿ ಅರುಣಕುಮಾರ್, ಉಪಾಧ್ಯಕ್ಷ ಎಚ್.ಎನ್. ರವಿಕುಮಾರ್, ಜಿ.ಪಂ ಸಿಇಒ ಕೆ‌. ರೇವಣಪ್ಪ, ಉಪ ವಿಭಾಗಾಧಿಕಾರಿ ತೇಜಸ್ ಕುಮಾರ, ತಹಶೀಲ್ದಾರ್‌ ಮಹೇಶ್‌ ಕುಮಾರ್‌
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT