ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲು ಜಾಗೃತಿ

Last Updated 20 ಸೆಪ್ಟೆಂಬರ್ 2020, 14:52 IST
ಅಕ್ಷರ ಗಾತ್ರ

ವಿಜಯಪುರ: ‘ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ನಿಷೇಧವಿರುವ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಜನರು ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಸಿಂಧೂರ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ವೆಂಕಟಗಿರಿಕೋಟೆಯ ಕಲಾವಿದರು ಬೀದಿನಾಟಕದ ಮೂಲಕ ಜನರಿಗೆ ತಿಳಿವಳಿಕೆ ಮೂಡಿಸಿದರು.

ಇಲ್ಲಿನ 23ನೇ ವಾರ್ಡಿನ ರಹಮತ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಿಂಧೂರ ಜಾನಪದ ಕಲಾತಂಡದ ಸಹಯೋಗದಲ್ಲಿ ಪ್ಲಾಸ್ಟಿಕ್ ನಿಷೇಧ, ಸ್ವಚ್ಛತೆ, ಮತ್ತು ಕೊರೊನಾ ನಿಯಂತ್ರಣದ ಕುರಿತು ಆಯೋಜಿಸಿದ್ದ ಬೀದಿನಾಟಕದಲ್ಲಿ ಕಲಾವಿದರ ಜಾಗೃತಿ ಹಾಡುಗಳು ಹಾಗೂ ಬೀದಿನಾಟಕದ ಮೂಲಕ ಜನರಿಗೆ ಅರಿವು ಮೂಡಿಸಿದರು.

ಪ್ಲಾಸ್ಟಿಕ್‌ ಕೊಳೆಯಲಾರದ ವಸ್ತುವಾಗಿದ್ದು. ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮಗಳು ಬೀರುತ್ತವೆ. ಇದರಿಂದ ಗಾಳಿ, ನೀರು, ಮಣ್ಣು ಮತ್ತು ವಾತಾವರಣ ಕಲುಷಿತಗೊಂಡು ರೋಗಗಳು ಹರಡುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಜಾಗೃತರಾಗಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಪರಿಸರ ಸಂರಕ್ಷಣೆ ಮತ್ತು ಪರಿಸರದ ಸ್ವಚ್ಛತೆ ಆಗಬೇಕಾಗದರೆ ಪ್ಲಾಸ್ಟಿಕ್‌ ಸಂಪೂರ್ಣವಾಗಿ ನಿಷೇಧಿಸಲು ಸಾರ್ವಜನಿಕರು ಪಣ ತೊಡಬೇಕು. ನಮ್ಮ ಸುತ್ತಮುತ್ತಲಿನ ಜೀವ ಸಂಕುಲ ಮತ್ತು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತದೆ. ಪ್ಲಾಸ್ಟಿಕ್‌ನಲ್ಲಿರುವ ಹಾನಿಕಾರಕ ಅಂಶಗಳು ಮನುಷ್ಯನ ದೇಹಕ್ಕೆ ನಾನಾ ಹಂತಗಳಲ್ಲಿ ಸೇರಿಕೊಂಡು ಮಾರಕ ರೋಗಗಳಿಗೆ ಕಾರಣವಾಗುತ್ತವೆ.

‘ಥೈರಾಯ್ಡ್‌, ಆಸ್ತಮಾ, ಹೃದಯ ಕಾಯಿಲೆಗಳು, ಕೂದಲು ಮತ್ತು ಚರ್ಮದ ಸಮಸ್ಯೆ, ನರಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಯಾರೂ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಕೆ ಮಾಡಬಾರದು’ ಎಂದು ತಿಳಿಸಿದರು.

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಜ್ಞಾನವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಶರ್ಮಿಳಾ ಮಾತನಾಡಿ, ‘ಸ್ವಚ್ಛತೆ ಇದ್ದಲ್ಲಿ ದೇವರ ಸಾನ್ನಿಧ್ಯ ಇರುತ್ತದೆ. ಪವಿತ್ರ ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ನಾವು ವಾಸ ಮಾಡುತ್ತಿರುವ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಜನರು ಇಚ್ಛಾಶಕ್ತಿ ತೋರಬೇಕು. ಇತ್ತೀಚೆಗೆ ಅನೇಕ ಕಾಯಿಲೆ ಉಲ್ಬಣಿಸುತ್ತಿರುವುದರಿಂದ ಮನೆ ಹಾಗೂ ಗ್ರಾಮದ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಸರ್ಕಾರ ಮಾಡದ ಕೆಲವು ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಜನರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

ಸಿಂಧೂರ ಜಾನಪದ ಕಲಾ ಸಂಸ್ಥೆಯ ಅಧ್ಯಕ್ಷ ಎಂ.ಮುನಿರಾಜು ಮಾತನಾಡಿ, ‘ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು. ಕೈಗಳಿಗೆ ಸ್ಯಾನಿಟೈಸರ್ ಬಳಕೆ ಮಾಡಬೇಕು. ಅಥವಾ ಆಗಾಗ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು. ಬಿಸಿನೀರು ಕುಡಿಯುವುದು, ಬಿಸಿಯಾದ ಊಟ ಮಾಡುವುದನ್ನು ರೂಢಿಸಿಕೊಳ್ಳಬೇಕು. ಜನರ ಮಧ್ಯೆ ಇದ್ದಾಗ ಅಂತರ ಕಾಪಾಡಿಕೊಳ್ಳಬೇಕು’ ಎಂದರು.

ಸೇವಾ ಪ್ರತಿನಿಧಿಗಳಾದ ರತ್ನಮ್ಮ, ಅಕ್ಕಯಮ್ಮ, ಜಾನಪದ ಕಲಾತಂಡದ ಸದಸ್ಯರಾದ ಕಗ್ಗಲಹಳ್ಳಿ ನರಸಿಂಹಮೂರ್ತಿ, ಮಾರಪ್ಪ, ಎಚ್.ಆರ್.ರಮೇಶ್, ಕಾಕಪ್ಪ, ಗೋವಿಂದರಾಜು, ಮುರಳೀಧರ, ವಿಜಯಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT