ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿ ನೀಡಿದ ಸ್ವಚ್ಛತೆಯ ಕಾಯಕ

ಶ್ರಮದಾನದ ಮೂಲಕ ಮಾಕಳಿ ಬೆಟ್ಟದಲ್ಲಿನ ಕಲ್ಯಾಣಿ ಅಭಿವೃದ್ಧಿ
Last Updated 31 ಡಿಸೆಂಬರ್ 2019, 12:00 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ನಾಲ್ಕು ಸಾವಿರ ಅಡಿಗಳಷ್ಟು ಎತ್ತರದ ಮಾಕಳಿ ಬೆಟ್ಟದ ಮೇಲಿನ ಕಲ್ಯಾಣಿಗಳಲ್ಲಿ ಹೂಳು ಮೇಲೆತ್ತಿ ಸ್ವಚ್ಛಗೊಳಿಸುವ ಕೆಲಸ ಆರಂಭಿಸಿದಾಗ ಹಲವರು ಅಣಕವಾಡಿದ್ದರು. ಆದರೆ ಇಂದು ಖುಷಿ ಪಟ್ಟು ನಮ್ಮ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಇದು ಸಂತಸದ ಸಂಗತಿ’ ಎಂದು ಮಾಕಳಿ ಮಲ್ಲೇಶ್ವರ ಸೇವಾಭಿವೃದ್ಧಿ ಹಾಗೂ ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ಅನುಭವ ಹಂಚಿಕೊಂಡರು.

ಮಾಕಳಿ ಬೆಟ್ಟದ ತಪ್ಪಲಿನ ಸೊಣ್ಣೇನಹಳ್ಳಿ ಗ್ರಾಮದ ಮಂಜುನಾಥರೆಡ್ಡಿ ಅವರು ಹಲವು ವರ್ಷಗಳಿಂದ ಮಾಕಳಿ ಬೆಟ್ಟಕ್ಕೆ ಹೋಗಿ ಬರುತ್ತಿದ್ದರು. ಶತಮಾನಗಳಷ್ಟು ಹಿಂದೆ ಬೆಟ್ಟದಲ್ಲಿನ ಪ್ರಾಣಿ, ಪಕ್ಷಿಗಳ ಹಾಗೂ ಬೆಟ್ಟದಲ್ಲಿನ ಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳ ಅನುಕೂಲಕ್ಕಾಗಿ ಕಲ್ಯಾಣಿಗಳನ್ನು ನಿರ್ಮಿಸಲಾಗಿತ್ತು. ಕಾಲಾನಂತರದಲ್ಲಿ ಇವುಗಳಲ್ಲಿ ಹೂಳು ತುಂಬಿ, ಕಲ್ಲಿನ ಕಟ್ಟಡಗಳು ಶಿಥಿಲಗೊಂಡು ಬಿದ್ದು ಹೋಗಿದ್ದವು. ಸ್ನೇಹಿತರ ಶ್ರಮದಾನದ ಮೂಲಕ, 30 ಭಾನುವಾರಗಳ ಕಾಲ ಇವುಗಳನ್ನು ಸರಿಪಡಿಸುವ ಕೆಲಸ ಮಾಡಿದ್ದಾರೆ.

ಮಾತ್ರವಲ್ಲ ದೊಡ್ಡಬಳ್ಳಾಪುರದ ಎಂ.ಎ.ಪ್ರಕಾಶ್‌ ಲೇಔಟ್‌ನಲ್ಲಿ ದಶಕಗಳ ಹಿಂದಿನಿಂದ ಪಾಳು ಬಿದ್ದಿದ್ದ ಉದ್ಯಾನವನ್ನು ಸ್ಥಳೀಯರ ಸಹಕಾರದಿಂದ ಸುಂದರವಾಗಿ ಅಭಿವೃದ್ಧಿಗೊಳಿಸಲಾಗಿದೆ. ಇಲ್ಲಿ ಪ್ರತಿದಿನ ಸುತ್ತಲಿನ ನೂರಾರು ಜನ ಬೆಳಿಗ್ಗೆ, ಸಂಜೆ ವಾಯುವಿಹಾರ ಮಾಡುತ್ತಾರೆ. ಹಿರಿಯರು ಕುಳಿತು ವಿಶ್ರಾಂತಿ ಪಡೆಯಲು ಕಲ್ಲುಬೆಂಚುಗಳನ್ನು ದಾನಿಗಳ ಸಹಕಾರದಿಂದ ಹಾಕಿಸಲಾಗಿದೆ. ಮಕ್ಕಳು ಆಟವಾಡಲು ವಿವಿಧ ವಸ್ತುಗಳನ್ನು ನಗರಸಭೆ ವತಿಯಿಂದ ಹಾಕಿಸಲಾಗಿದೆ. ವಿವಿಧ ರೀತಿಯ ಸಸಿಗಳನ್ನು ನೆಟ್ಟು, ಬೆಳೆಸಲಾಗಿದೆ.

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಸಿ.ಎಸ್‌.ಕರೀಗೌಡ ಅವರನ್ನು ಭೇಟಿ ಮಾಡಿ ಕೆರೆ ಪುನಶ್ಚೇತನ ಕಾರ್ಯವನ್ನು ಮುತ್ತೂರು ಕೆರೆಯ ಮೂಲಕ ಆರಂಭಿಸಲಾಯಿತು. ಇಲ್ಲಿಂದ ಆರಂಭವಾದ ಕೆರೆ, ಕಲ್ಯಾಣಿಗಳ ಪುನಶ್ಚೇತನ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಾಮರ್ಥ್ಯಕ್ಕೆ ತಕ್ಕಷ್ಟು ಆರ್ಥಿಕ ನೆರವು, ಸಹಕಾರ ನೀಡಿದ್ದೇನೆ. ಇದು ಬದುಕಿನುದ್ದಕ್ಕೂ ನೆನಪಿನಲ್ಲಿ ಉಳಿಯುವ ಸಂಗತಿ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT