ಅಂಗಾಂಶ ಬಾಳೆ ಕೃಷಿ: ಸಾಲ ಮಾಡಿ ಪ್ರಯೋಗಾಲಯ ಕಟ್ಟಿದ ಕಥೆ

7
ಜಾಲಿಗೆ ಗ್ರಾಮದಲ್ಲಿ ಪ್ರಯೋಗಾಲಯ ಸ್ಥಾಪಿಸಿದ ವನಿತೆ

ಅಂಗಾಂಶ ಬಾಳೆ ಕೃಷಿ: ಸಾಲ ಮಾಡಿ ಪ್ರಯೋಗಾಲಯ ಕಟ್ಟಿದ ಕಥೆ

Published:
Updated:
Deccan Herald

ದೇವನಹಳ್ಳಿ: ಅದು ಒಟ್ಟು 10ಗುಂಟೆ ಪ್ರದೇಶದ ಕೃಷಿ ಭೂಮಿ. ಅದರಲ್ಲಿ 4 ಗುಂಟೆಯಲ್ಲಿ ಪಾಲಿಹೌಸ್, 6 ಸಾವಿರ ಚದರಡಿಯಲ್ಲಿ ಪ್ರಯೋಗಾಲಯ ಇದೆ. ಇದರ ಹಿಂಭಾಗ ನಾಲ್ಕಾರು ಹೆಜ್ಜೆ ಹಾಕಿದರೆ ಪಾಲಿಹೌಸ್ ಸಿಗುತ್ತದೆ. ಅಲ್ಲೇ ಒಳ ಭಾಗದಲ್ಲಿ ಸಾಲಾಗಿ ಜೋಡಿಸಿರುವ ಕೃಷಿ ಮಾಡಿದ ಪುಟ್ಟ ಬಾಳೆ ಸಸಿಗಳು ಕಾಣಸಿಗುತ್ತವೆ.

ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಜಾಲಿಗೆ ಗ್ರಾಮದ ಜೆ.ಎಸ್ ಭವ್ಯ ಅವರ ಬಾಳೆ ಕೃಷಿ ಪ್ರಯೋಗಾಲಯ. ಅಧುನಿಕ ತಂತ್ರಜ್ಞಾನದಲ್ಲಿ ಬಾಳೆ ಕಂದು ಸಂಸ್ಕರಿಸಿ ರೋಗ ರಹಿತ ಬಾಳೆ ಸಸಿ ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುವ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.

ಸರ್ಕಾರಿ ಶಾಲೆಯ ಅಪ್ಪಟ ಗ್ರಾಮೀಣ ಪ್ರತಿಭೆ ಭವ್ಯ. ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಉದ್ಯೋಗದಲ್ಲಿ ಇರುವಾಗಲೇ ವಿವಾಹ ಜೀವನಕ್ಕೆ ಕಾಲಿಟ್ಟರು. ನಂತರ ಉಪನ್ಯಾಸಕಿ ಹುದ್ದೆಗೆ ವಿದಾಯ ಹೇಳಿದ ಅವರು, ಸಂಪೂರ್ಣ ಕೃಷಿಯಲ್ಲಿ ಮಗ್ನರಾದರು. ಪತಿ ನರೇಂದ್ರ ರಾಮ್, ತಂದೆ ಶ್ಯಾಮಣ್ಣರ ಬೆಂಬಲಿದೊಂದಿಗೆ ಬಾಳೆ ಕೃಷಿ ಪ್ರಯೋಗಾಲಯ ಸ್ಥಾಪಿಸಿದ್ದಾರೆ. ಪ್ರಸ್ತುತ 19 ಮಹಿಳೆಯರಿಗೆ ಒಬ್ಬ ಪುರುಷನಿಗೆ ಉದ್ಯೋಗ ನೀಡಿದ್ದಾರೆ.

ಬಾಳೆ ಕೃಷಿಗೆ ಮುಂದಾಗಿದ್ದು ಹೇಗೆ?: ಬಯೋಟೆಕ್ನಾಲಜಿ ಪದವಿ ಪಡೆದಿರುವ ಪತಿ ನರೇಂದ್ರ ರಾಮ್ ಸಲಹೆ ಮೇರೆಗೆ ಹುಳಿಮಾವು ಜೈವಿಕ ಬಾಳೆ ಕೃಷಿ ಪ್ರಯೋಗಾಲಯ ಕೇಂದ್ರದಲ್ಲಿ 15 ದಿನಗಳ ಕಾಲ ತರಬೇತಿ ಪಡೆದಿದ್ದಾರೆ. ಮುಂಬಯಿಯಿಂದ ₹84 ಲಕ್ಷ ವೆಚ್ಚದ ಪ್ರಾಯೋಗಾಲಯ ಸಾಮಗ್ರಿ ಖರೀದಿಸಿದ್ದಾರೆ. ಒಟ್ಟು ₹2.3 ಕೊಟಿ ಬಂಡವಾಳ ಹೂಡಿರುವ ಅವರ ದುಸ್ಸಾಹಸಕ್ಕೆ ಕೆಲವರು ಗಾಳಿಯೊಂದಿಗೆ ಗುದ್ದಾಟ ಎಂದು ಟೀಕಿಸಿದ್ದುಂಟು.

ಬಾಳೆ ಕೃಷಿ ವಿಧಾನ: ಉತ್ತಮ ಇಳುವರಿ ನೀಡುವ 60ರಿಂದ 70ಕೆ.ಜಿ ಗೊನೆ ನೀಡುವ ರೋಗ ರಹಿತ ಬಾಳೆ ಕಂದುಗಳನ್ನು ಆಯ್ಕೆ ಮಾಡಿಕೊಂಡು ಜಿಕೆವಿಕೆಯಿಂದ ಖಚಿತಪಡಿಸಿಕೊಂಡ ನಂತರ ಅಗತ್ಯ ರಾಸಾಯನಿಕ ಬಳಸಿ ಪ್ರತಿ ಬಾಳೆ ಬುಡದ ಕಂದುಗಳನ್ನು (ಒಂದು ಕಂದು)600 ರಿಂದ 800 ತುಂಡುಗಳನ್ನಾಗಿಸಿ ಪ್ರತಿ ತುಂಡು (15 ಗ್ರಾಂನಿಂದ 20 ಗ್ರಾಂ) ಮತ್ತೆ ರಾಸಾಯಿಕ ದ್ರವ ಸಿಂಪಡಿಸಿ ಸ್ವಚ್ಛಗೊಳಿಸಿದ ಚಿಕ್ಕ ಬಾಟಲ್‌ಗಳಲ್ಲಿರಿಸಿ ಲ್ಯಾಬ್ ಘಟಕದಲ್ಲಿ ಮುಚ್ಚಲಾಗುತ್ತದೆ.

ಲ್ಯಾಬ್‌ನ ಪ್ರತ್ಯೇಕ ಎರಡು ಘಟಕದಲ್ಲಿ ಬೆಳವಣಿಗೆಯಾದ ನಂತರ ಮೂರನೇ ಹಂತಕ್ಕೆ ಬಾಳೆ ಕಂದು ಚಿಗುರಿ ಒಂದೆರಡು ಇಂಚು ಬೆಳೆದ ನಂತರ ಪಾಲಿಹೌಸ್‌ಗೆ ಸ್ಥಳಾಂತರ ಮಾಡಲಾಗುತ್ತದೆ. ಈ ಪ್ರಕ್ರಿಯೆ 8ರಿಂದ 9 ತಿಂಗಳು ತಾಯಿ ಗರ್ಭ ವ್ಯವಸ್ಥೆಯಲ್ಲಿ ಇರುವಂತೆ ಘಟಕದಲ್ಲಿ ಬಾಳೆ ಸಸಿ ಮೊಳಕೆಯೊಡೆದು ಹೊರಬರುತ್ತದೆ ಎಂದು ಭವ್ಯ ವಿವರಿಸಿದರು.

ಪ್ರಯೋಗಾಲಯಕ್ಕೆ ಹೊರಗಡೆಯಿಂದ ಯಾವುದೇ ಬ್ಯಾಕ್ಟಿರಿಯಾ ರೋಗಾಣು ಒಳ ನುಸುಳದಂತೆ ಕಟ್ಟೆಚ್ಚರ ವಹಿಸಲಾಗುತ್ತದೆ. ಸಸಿ ಖರೀದಿಸುವ ರೈತರಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !