ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭಾ ಚುನಾವಣೆಗೆ ಪೂರ್ವ ಸಿದ್ಧತೆಗೆ ರಾಜಕೀಯ ಪಕ್ಷಗಳಲ್ಲಿ ಮೀನಾಮೇಷ

Last Updated 12 ಜೂನ್ 2019, 13:42 IST
ಅಕ್ಷರ ಗಾತ್ರ

ವಿಜಯಪುರ: ಸ್ಪಷ್ಟ ಬಹುಮತವಿದ್ದರೂ ಮೂರು ವರ್ಷಗಳಿಂದ ಅಧ್ಯಕ್ಷರಿಲ್ಲದ ಪುರಸಭೆಯಲ್ಲಿ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದು ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆ ಆಗಬಹುದೆಂಬ ನಿರೀಕ್ಷೆಯಲ್ಲಿ ಆಕಾಂಕ್ಷಿಗಳು ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ ಎಂದು ಮುಖಂಡ ನಾರಾಯಣಸ್ವಾಮಿ ಹೇಳುತ್ತಾರೆ.

ನ್ಯಾಯಾಲಯ ನೀಡಿರುವ ಆದೇಶ ವಿಜಯಪುರ ಪುರಸಭೆಗೂ ಅನ್ವಯಿಸುತ್ತದೆಯೇ ಅಥವಾ ಇಲ್ಲವೇ ಎನ್ನುವ ಗೊಂದಲದಲ್ಲೆ ಆಕಾಂಕ್ಷಿಗಳು ತಯಾರಿ ನಡೆಸಿಕೊಳ್ಳುತ್ತಿದ್ದಾರೆ.

ಪೂರ್ವಭಾವಿಯಾಗಿ ಕೆಲ ವಾರ್ಡುಗಳಲ್ಲಿ ಟ್ಯಾಂಕರ್‌ಗಳ ಮೂಲಕ ಉಚಿತವಾಗಿ ನೀರು ಕೊಡುವುದು, ಆಗಾಗ ವಾರ್ಡ್‌ಗಳಿಗೆ ಭೇಟಿ ನೀಡುವುದು ಅಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಸೆಳೆಯುವುದು, ಅಲ್ಲಿ ಕೆಲಸಗಳಾಗುವಂತೆ ನೋಡಿಕೊಳ್ಳುವಂತಹ ಪ್ರಯತ್ನಗಳನ್ನು ಆಕಾಂಕ್ಷಿಗಳು ಮಾಡುತ್ತಿದ್ದಾರೆ’ ಎಂದರು.

ಹಿಂದೆ ನಡೆದಿದ್ದ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ 16 ಮಂದಿ, ಜೆಡಿಎಸ್‌ನ ಇಬ್ಬರು, ಪಕ್ಷೇತರ 5 ಮಂದಿ ಸದಸ್ಯರು ಆಯ್ಕೆಯಾಗಿದ್ದರೂ ಪೂರ್ಣ ಅವಧಿಯಲ್ಲಿ ಅಧಿಕಾರ ಕೈ ಹಿಡಿಯಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಸರ್ಕಾರವೂ ರಾಜ್ಯದಲ್ಲಿತ್ತು. ಇಂತಹ ಸಮಯವನ್ನು ಉಪಯೋಗ ಮಾಡಿಕೊಂಡು ಹೆಚ್ಚಿನ ಅನುದಾನಗಳನ್ನು ತಂದು ನಗರದ ಅಭಿವೃದ್ಧಿಗೆ ಶ್ರಮಿಸಬೇಕಾದ ಸದಸ್ಯರು, ಅಧ್ಯಕ್ಷ ಸ್ಥಾನದ ಮೀಸಲಾತಿಗಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರಿಂದ ಮೂರು ವರ್ಷಗಳ ಕಾಲ ನಗರ ಅಭಿವೃದ್ಧಿಯಿಂದ ವಂಚಿತವಾಗಿದೆ.

ಚುರುಕುಗೊಳ್ಳದ ರಾಜಕೀಯ ಪಕ್ಷಗಳು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ವಿಜಯಪುರ ನಗರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಿಗೆ 1 ಸಾವಿರ ಮತಗಳ ಲೀಡ್ ಸಿಕ್ಕಿದ್ದರೂ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಲೋಪದೋಷಗಳನ್ನು ಹುಡುಕಿ ಸರಿಪಡಿಸಿಕೊಳ್ಳಲು ಎಚ್ಚೆತ್ತುಕೊಂಡಿಲ್ಲ. ಲೋಕಸಭಾ ಚುನಾವಣೆಯ ವೇಳೆ ಹಲವು ಮತಗಟ್ಟೆಗಳಲ್ಲಿ ಏಜೆಂಟರೇ ಇಲ್ಲದಂತಹ ಸ್ಥಿತಿಯೂ ನಿರ್ಮಾಣವಾಗಿತ್ತು. ಚುನಾವಣೆಯ ಹೊಸ್ತಿಲಲ್ಲೂ ಎಚ್ಚೆತ್ತುಕೊಂಡು ಕಾರ್ಯಕರ್ತರನ್ನು ಒಟ್ಟುಗೂಡಿಸಿಕೊಳ್ಳುವಲ್ಲಿ ಎಡವುತ್ತಿದ್ದಾರೆ ಎಂದು ಮುಖಂಡ ಹರೀಶ್ ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆ, ಲೋಕಸಭಾ ಚುನಾವಣೆಗಳಲ್ಲಿ 1 ಸಾವಿರ ಮತಗಳ ಮುನ್ನಡೆ ಪಡೆದುಕೊಂಡಿರುವ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರಲ್ಲಿ ಹೊಸ ಹುರುಪು ಕಾಣಿಸಿಕೊಂಡಿದೆ. ಈ ಬಾರಿ ಪುರಸಭೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲೇಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ನೇತೃತ್ವದಲ್ಲಿ ಅಭ್ಯರ್ಥಿಗಳ ಆಯ್ಕೆ, ಪ್ರಚಾರ, ಸಂಘಟನೆ ನಡೆಯುತ್ತಿದೆ ಎಂದು ತಮ್ಮ ಪಕ್ಷಗಳ ಕಾರ್ಯಕರ್ತರನ್ನು ಚುರುಕುಗೊಳಿಸುತ್ತಿದ್ದಾರೆ ಪಕ್ಷದ ಆಪ್ತವಲಯದ ಮುಖಂಡರೊಬ್ಬರು ತಿಳಿಸಿದರು.

ಕುತೂಹಲ ಮೂಡಿಸಿದ ಸದಸ್ಯರ ನಡೆ: ಕಾಂಗ್ರೆಸ್ ಪಕ್ಷದ ಸದಸ್ಯರು ಕೆಲ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದೆ ತಟಸ್ಥರಾಗಿದ್ದಂತೆ ಇದ್ದರು. ಇತ್ತಿಚೆಗೆ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಪಕ್ಷಾಂತರ ಪರ್ವ ಶುರುವಾಗಲಿದೆಯಾ ಎನ್ನುವ ಕುತೂಹಲ ಕಾಂಗ್ರೆಸ್ ಮುಖಂಡರನ್ನು ಕಾಡತೊಡಗಿದೆ. ನಗರದಲ್ಲಿ ಪ್ರಭಾವಿತರಾಗಿರುವ ನಾಯಕರು ಪಕ್ಷ ತೊರೆದರೆ ಪಕ್ಷಕ್ಕೆ ಬೆಳವಣಿಗೆಗೂ ತೊಡಕುಂಟಾಗಬಹುದು ಎಂಬುದು ಕಾರ್ಯಕರ್ತರ ಅಭಿಪ್ರಾಯವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT