ವಿಜೃಂಭಣೆಯ ಪೂಜಾಂಬಿಕಾ ದೇವಿ ಹೂವಿನ ಕರಗ

ಬುಧವಾರ, ಜೂನ್ 19, 2019
25 °C

ವಿಜೃಂಭಣೆಯ ಪೂಜಾಂಬಿಕಾ ದೇವಿ ಹೂವಿನ ಕರಗ

Published:
Updated:
Prajavani

ವಿಜಯಪುರ : ಹೋಬಳಿಯ ಚಂದೇನಹಳ್ಳಿಯ ಪೂಜಾಂಬಿಕಾದೇವಿ ಹೂವಿನ ಕರಗ ಮಹೋತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.

ಕರಗ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ವಿದ್ಯುತ್ ದೀಪಾಂಲಕಾರ ಮಾಡಲಾಗಿತ್ತು. ಗುರುವಾರ ದ್ವಜಾರೋಹಣ ನೆರವೇರಿಸಿ, ಹಸಿಕರಗ ಮಹೋತ್ಸವ ಮಾಡಿದ್ದರು. ಶುಕ್ರವಾರ ರಾತ್ರಿ ವಿಶೇಷ ಪೂಜೆ, ಅಭಿಷೇಕ, ಗ್ರಾಮದ ವೀರಾಂಜನೇಯಸ್ವಾಮಿ, ಬಾಯಿಕೊಂಡ ಗಂಗಮ್ಮದೇವಿ ಅವರ ಜಾತ್ರಾ ಮಹೋತ್ಸವ ಹಾಗೂ ದೀಪಾರತಿಗಳನ್ನು ಮಾಡಲಾಯಿತು. ಶನಿವಾರ ರಾತ್ರಿ ಹೂವಿನ ಕರಗ ನಡೆಯಿತು.

ಕರಗ ಹೊತ್ತಿದ್ದ ಕರಗದ ಪೂಜಾರಿ ಮಂಗಳವಾದ್ಯಗಳು, ತಮಟೆ ವಾದನಗಳಿಗೆ ತಕ್ಕಂತೆ ನೃತ್ಯ ಮಾಡಿದರು. ಸುತ್ತಲಿನ ಗ್ರಾಮಗಳಿಂದ ಸಾವಿರಾರು ಮಂದಿ ಜನರು ಕರಗಕ್ಕೆ ಸೇರಿದ್ದರು. ಮನೆಗಳ ಬಳಿಗೆ ತೆರಳಿದ ಕರಗಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು.

ಮುಖಂಡ ಚಂದೇನಹಳ್ಳಿ ಮುನಿಯಪ್ಪ ಮಾತನಾಡಿ, ‘ನಮ್ಮ ಸನಾತನ ಧರ್ಮ ಉಳಿಯಬೇಕು. ಆಚರಣೆಗಳಲ್ಲಿನ ಮಹತ್ವವನ್ನು ನಾವು ಅರ್ಥ ಮಾಡಿಕೊಂಡು ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಮಾರುಹೋಗುತ್ತಿರುವ ಯುವಪೀಳಿಗೆಯನ್ನು ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪರಿಚಯಿಸಿ ಅವರನ್ನು ಸೆಳೆಯುವಂತಹ ಪ್ರಯತ್ನ ಮಾಡದಿದ್ದರೆ ಭವಿಷ್ಯದಲ್ಲಿ ಧರ್ಮಕ್ಕೆ ಅಪಚಾರವಾಗುತ್ತದೆ. ಆದ್ದರಿಂದ ಇಂತಹ ಮಹೋತ್ಸವಗಳು ನಡೆಯಬೇಕು. ಪರಸ್ಪರ ಸಹಕಾರದಿಂದ ಮಾತ್ರವೇ ಇವು ನಡೆಯಲಿಕ್ಕೆ ಸಾಧ್ಯವಾಗುತ್ತದೆ’ ಎಂದರು.

ಪೊಲೀಸ್ ಬಂದೋಬಸ್ತ್ : ಚಂದೇನಹಳ್ಳಿ ಗ್ರಾಮದಲ್ಲಿ ಕರಗ ಮಹೋತ್ಸವ ಮಾಡಬಾರದು, ನಮ್ಮ ಹಿರಿಯರು ತಲ ತಲಾಂತರಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದ ಪದ್ಧತಿ ಹಾಗೂ ಸಂಪ್ರದಾಯಕ್ಕೆ ವಿರುದ್ಧವಾಗುತ್ತದೆ. ನಮ್ಮ ಸಮುದಾಯದವರಲ್ಲಿ ಕೆಲವರು ಮಾತ್ರವೇ ಕರಗ ಮಹೋತ್ಸವ ಕಾರ್ಯಕ್ರಮಗಳನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಉಳಿದವರು, ಈ ಮಹೋತ್ಸವದಲ್ಲಿನ ಗೌಪ್ಯತೆ, ಸಂಪ್ರದಾಯ, ಷರತ್ತುಗಳಿಗೆ ಅನುಗುಣವಾಗಿ ನಾವು ನಡೆಯಲಿಕ್ಕೆ ಸಾಧ್ಯವಿಲ್ಲ ಎನ್ನುವ ಕಾರಣ ಆಚರಣೆ ಮಾಡಲ್ಲ, ನಾವೂ ಅವರಲ್ಲಿ ಮನವಿ ಮಾಡಿಕೊಂಡು ಕರಗಕ್ಕೆ ಇರುವ ಗೌಪ್ಯತೆ ಕಾಪಾಡಲು ಸಹಕರಿಸಿ ಎಂದಿದ್ದೇವೆ ಎಂದು ತಿಗಳ ಸಮುದಾಯದ ಮುಖಂಡರು ತಹಶೀಲ್ದಾರರಿಗೆ ಮನವಿ ನೀಡಿದ್ದರು. ಶಾಂತಿ ಸಭೆಯನ್ನೂ ನಡೆಸಲಾಗಿತ್ತಾದರೂ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ ನೀಡದಿರುವುದಕ್ಕೆ ಇದು ಸಕಾರಣವಲ್ಲ ಎಂದು ಕರಗ ಮಹೋತ್ಸವ ಮಾಡಲಿಕ್ಕೆ ತಹಶೀಲ್ದಾರ್ ಅನುಮತಿ ಕೊಟ್ಟಿದ್ದರಿಂದ ಹಸಿಕರಗ ಮಹೋತ್ಸವ ನಡೆದಿತ್ತು.

ಶನಿವಾರ ತಿಗಳ ಸಮುದಾಯದ ಮುಖಂಡರು, ಜಿಲ್ಲಾಧಿಕಾರಿ ಕಚೇರಿಯ ಬಳಿಯಲ್ಲಿ ಪ್ರತಿಭಟನೆ ಮಾಡಿ, ಆಚರಣೆ ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕರಗ ಮಹೋತ್ಸವಕ್ಕೆ ಯಾವುದೇ ಅಡ್ಡಿಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜನೆಗೊಳಿಸಲಾಗಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !