ಸೋಮವಾರ, ಅಕ್ಟೋಬರ್ 21, 2019
22 °C

ಕಳಪೆ ಸುರಂಗ: ಅಪಾಯದಲ್ಲಿ ಹೆದ್ದಾರಿ, ರೈಲು ಮಾರ್ಗ

Published:
Updated:
Prajavani

ದೇವನಹಳ್ಳಿ: ಇಲ್ಲಿನ ಬಂಡೆ ಅಮಾನಿಕೆರೆ ಕಡೆಗೆ ಸಾಗುವ ರಸ್ತೆಗೆ ರೈಲು ಮಾರ್ಗ ಅಡ್ಡವಾಗಿದ್ದು ಪೂರಕವಾಗಿ ಅಂಡರ್‌ಪಾಸ್ ರಸ್ತೆ ನಿರ್ಮಾಣ ಮಾಡಲಾಗಿದೆ. ಮಳೆ ನೀರು ಹೊರಹೋಗಲು ನಿರ್ಮಿಸಿರುವ ಸುರಂಗಮಾರ್ಗ ಕಳಪೆ ಕಾಮಗಾರಿಯಿಂದ ಕೂಡಿದ್ದು ರಾಷ್ಟ್ರೀಯ ಹೆದ್ದಾರಿ ರಸ್ತೆ ಮತ್ತು ರೈಲು ಮಾರ್ಗಕ್ಕೆ ಅಪಾಯ ತಂದೊಡ್ಡಿದೆ ಎಂಬುದು ಸ್ಥಳೀಯರ ಆರೋಪ.

ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ಮಾರ್ಗದ ಮದ್ಯೆ 40ರಿಂದ 50 ಅಡಿ ಅಂತರವಿದೆ. ಸೇತುವೆ ಕೆಳಭಾಗದಲ್ಲಿ ಸಂಗ್ರಹವಾಗುವ ಮಳೆ ನೀರು ಸರಾಗವಾಗಿ ಹರಿಯಲು ಸೇತುವೆಯಿಂದ ದೇವನಹಳ್ಳಿ – ಬೆಂಗಳೂರು ಕಡೆಗೆ 100ಕ್ಕೂ ಹೆಚ್ಚು ಅಡಿ ಸುರಂಗ ತೋಡಿ ಪೈಪ್ ಅಳವಡಿಸಿ ಸಿಮೆಂಟ್, ಮರಳು, ಜಲ್ಲಿ ಹಾಕಿ ಪೈಪ್‌ನ ಸುತ್ತ ಹಾಗೂ ಮೇಲ್ಭಾಗ ಭದ್ರಪಡಿಸಬೇಕಾಗಿತ್ತು. ಆದರೆ ಇದ್ಯಾವುದನ್ನೂ ಕಾಮಗಾರಿ ಸಂದರ್ಭದಲ್ಲಿ ಮಾಡಿಲ್ಲ ಎಂದು ಅವರು ದೂರಿದ್ದಾರೆ.

‘ಸುರಂಗದಿಂದ ನೀರು ಹೊರಹೋಗಲು 15ರಿಂದ 20 ಅಡಿ ಪೈಪ್ ಹೊರತುಪಡಿಸಿದರೆ, ಮುಂದೆ ಕೇವಲ ಮಣ್ಣಿನ ಸುರಂಗ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಮಣ್ಣಿನ ಇಕ್ಕೆಲಗಳ ಗೋಡೆ ಕುಸಿಯುತ್ತಿದ್ದು ಕೋಟ್ಯಂತರ ರೂಪಾಯಿ ಕಾಮಗಾರಿ ಕಳಪೆ ಇಂದ ಕೂಡಿದೆ. ಇದಕ್ಕೆ ಇಲಾಖೆ ಅಧಿಕಾರಿಗಳೇ ಪರೋಕ್ಷ ಬೆಂಬಲ ನೀಡಿದ್ದಾರೆ. ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಿರುವುದೇ ಅನುಮಾನ’ ಎನ್ನುತ್ತಾರೆ ಬಂಡೆ ಅಮಾನಿಕೆರೆ ಬಡಾವಣೆ ನಿವಾಸಿ ಮುನಿಕೃಷ್ಣಪ್ಪ.

‘ಇಲ್ಲಿನ ಅಂಡರ್‌ಪಾಸ್ ಕಾಮಗಾರಿ ಮುಗಿದು ಒಂದೂವರೆ ವರ್ಷ ಆಗಿದೆ ಅಷ್ಟೆ. ಬುಳ್ಳಹಳ್ಳಿ ಗೇಟ್, ಅತ್ತಿಬೆಲೆ ಗೇಟ್, ಯರ್ತಿಗಾನಹಳ್ಳಿ ಗೇಟ್, ಮೇಲಿನ ತೋಟದ ಗೇಟ್ ಬಳಿ ನಿರ್ಮಾಣ ಮಾಡಿರುವ ರೈಲ್ವೆ ಅಂಡರ್‌ಪಾಸ್ ಸೇತುವೆ ಬಳಿ ಸಂಗ್ರಹವಾಗುವ ಮಳೆ ನೀರು ತಿಂಗಳಾದರು ಹೊರಹೋಗುವುದಿಲ್ಲ. ಎಲ್ಲೆಡೆ ಕಳಪೆ ಕಾಮಗಾರಿ ನಡೆದಿದೆ. ಕಾಮಗಾರಿ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಅತ್ತಿಬೆಲೆ ಗ್ರಾಮದ ಪಿ.ನರಸಪ್ಪ ಒತ್ತಾಯಿಸಿದ್ದಾರೆ.

Post Comments (+)