ಭಾನುವಾರ, ಮೇ 16, 2021
22 °C
ಬನ್ನೇರುಘಟ್ಟ ರಸ್ತೆಯಲ್ಲಿ ಮೂಗು ಮುಚ್ಚಿ ಓಡಾಡಬೇಕಾದ ಪರಿಸ್ಥಿತಿ

ಆನೇಕಲ್: ರಸ್ತೆ ಬದಿಯಲ್ಲಿ ಕೋಳಿ ಕಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ರಾಜ್ಯದ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾಗಿರುವ ಬನ್ನೇರುಘಟ್ಟದ ಪ್ರಮುಖ ರಸ್ತೆಯಲ್ಲಿಯೇ ಕಸ ತುಂಬಿದ್ದು ಗಬ್ಬುನಾರುತ್ತಿದೆ. ಕಸ ವಿಲೇವಾರಿ ಸಮರ್ಪಕವಾಗಿ ಇಲ್ಲದಿರುವುದರಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಸ ನಿರ್ವಹಣೆ ಮಾಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಗ್ರಾಮ ಪಂಚಾಯಿತಿಯು ಕಸದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮದ ಬಿ.ಎನ್‌.ನಾಗರಾಜು ಆರೋಪಿಸಿದರು.

ಬನ್ನೇರುಘಟ್ಟ-ಕಗ್ಗಲಿಪುರ ರಸ್ತೆಯಲ್ಲಿರುವ ವೈದ್ಯನಾಥೇಶ್ವರ ಸ್ವಾಮಿ ದೇವಾಲಯದ ಪಕ್ಕದಲ್ಲಿ ಕೋಳಿ ಕಸವನ್ನು ಸುರಿಯಲಾಗುತ್ತಿದೆ. ಬನ್ನೇರುಘಟ್ಟ ಮತ್ತು ಸುತ್ತಮುತ್ತ ಪ್ರದೇಶದ ಕೋಳಿ ಅಂಗಡಿಗಳ ಮಾಲೀಕರು ಕಸ ವಿಲೇವಾರಿಗಾಗಿ ಕಗ್ಗಲಿಪುರ ರಸ್ತೆಯ ನೇರಳಿ ಮರ ಮತ್ತು ವೈದ್ಯನಾಥೇಶ್ವರ ಸ್ವಾಮಿ ದೇವಾಲಯದ ಸಮೀಪ ಎಸೆಯುತ್ತಿದ್ದಾರೆ. ಕಗ್ಗಲಿಪುರ ರಸ್ತೆಯ ಮೂಲಕ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ತೆರಳುವ ಮಾರ್ಗ ಇದಾಗಿದೆ. ಪ್ರತಿದಿನ ಬನ್ನೇರುಘಟ್ಟದ ನಿವಾಸಿಗಳು ಈ ಮಾರ್ಗದಲ್ಲಿ ವಾಯು ವಿಹಾರಕ್ಕೆ ಹೋಗುತ್ತಾರೆ. ಜನರೆಲ್ಲರೂ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಶುದ್ಧ ಗಾಳಿಗಾಗಿ ರಸ್ತೆಯಲ್ಲಿ ಬಂದರೆ ಬೆಳ್ಳಂ ಬೆಳಗ್ಗೆ ಗಬ್ಬುನಾರುತ್ತದೆ ಎಂದು ನಾಗರಾಜು ತಿಳಿಸಿದರು.

ಕೋಳಿ ಕಸವನ್ನು ರಸ್ತೆಯಲ್ಲಿಯೇ ಎಸೆದಿರುವುದರಿಂದ ನಾಯಿಗಳು ತ್ಯಾಜ್ಯ ತಿನ್ನಲು ಮುತ್ತಿಕೊಳ್ಳುತ್ತವೆ. ಗುಂಪು ಗುಂಪಾಗಿ ನಾಯಿಗಳು ಸೇರುವದರಿಂದ ರಸ್ತೆಯಲ್ಲಿ ಓಡಾಡಲು ಭಯವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್‌ ಮಾಹಿತಿ ನೀಡಿ, ಬೆಳಗಿನ ಜಾವ ಕೋಳಿ ಅಂಗಡಿಗಳವರು ರಸ್ತೆಯ ಪಕ್ಕದಲ್ಲಿಯೇ ತ್ಯಾಜ್ಯವನ್ನು ಎಸೆದು ಹೋಗುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಸೂಚನೆ ನೀಡಿದರೂ ಗಮನಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ (ಏ.17)ರಂದು ಕೋಳಿ ಅಂಗಡಿ ಮಾಲೀಕರ ಸಭೆಯನ್ನು ಗ್ರಾಮ ಪಂಚಾಯಿತಿಯಲ್ಲಿ ಕರೆಯಲಾಗಿದೆ. ಇಲ್ಲಿ ಕಸ ವಿಲೇವಾರಿ ಸಂಬಂಧ ತೀರ್ಮಾನ ಕೈಗೊಂಡು ರಸ್ತೆಯಲ್ಲಿ ಹಾಕದಿರುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.