ಭಾನುವಾರ, ಸೆಪ್ಟೆಂಬರ್ 26, 2021
21 °C
ವಿಜಯಪುರ: ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಲಹೆ

ಮಕ್ಕಳ ಶಿಕ್ಷಣದತ್ತ ಗಮನಹರಿಸಿ: ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪೌರಕಾರ್ಮಿಕರು ತಮ್ಮ ಆರೋಗ್ಯ ರಕ್ಷಣೆಯ ಜೊತೆಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಮಾ ಹೇಳಿದರು.

ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪೌರಕಾರ್ಮಿಕರು ಲಾಕ್ ಡೌನ್ ಸಮಯದಲ್ಲಿ ತಮ್ಮ ಪ್ರಾಣಗಳನ್ನು ಲೆಕ್ಕಿಸದೇ ಮಾಡಿರುವ ಸೇವೆಯನ್ನು ಯಾರೂ ಮರೆಯುವಂತಿಲ್ಲ. ದಿನನಿತ್ಯ ಕಷ್ಟಪಟ್ಟು ದುಡಿಯುವುದಷ್ಟೆ ಅಲ್ಲದೇ ತಮ್ಮ ಕುಟುಂಬಗಳು, ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಬೇಕು. ಕಡ್ಡಾಯವಾಗಿ ಅಂತರ ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು. ಸುರಕ್ಷತಾ ಕ್ರಮ ಅನುಸರಿಸುತ್ತಾ ಕೆಲಸ ಮಾಡಬೇಕು. ಇಲಾಖೆಯಿಂದ ಸಿಗುವಂತಹ ಎಲ್ಲಾ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಮಾತನಾಡಿ, ‘ಪೌರ ಕಾರ್ಮಿಕರು ಕಾಯಕ ಯೋಗಿಗಳಾಗಿದ್ದು, ಊರನ್ನು ಸ್ವಚ್ಛವಾಗಿಡುವ ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಪ್ರತಿ ದಿನವೂ ಪಟ್ಟಣದ ಸ್ವಚ್ಛತೆ ಮಾಡಿ, ಕಸ ಕಡ್ಡಿಯನ್ನು ವಿಲೇವಾರಿ ಮಾಡುತ್ತಾರೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಅತಿಯಾದ ಪ್ಲಾಸ್ಟಿಕ್ ಬಳಕೆ ನಗರ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರಲ್ಲಿ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ಇರಬೇಕು. ನಮ್ಮ ಮನೆಯ ಸುತ್ತ ಮುತ್ತ ಸ್ವಚ್ಛತೆ ಬಯಸುವಂತೆ ನಮ್ಮ ಊರು ಸ್ವಚ್ಛವಾಗಿಡಲು ಪ್ರತಿಯೊಬ್ಬರು ಶ್ರಮಿಸಬೇಕು’ ಎಂದರು.

ಪೌರಕಾರ್ಮಿಕ ನಾಗರಾಜ್ ಮಾತನಾಡಿ, ‘ಕಾರ್ಮಿಕರು ಪಟ್ಟಣದಲ್ಲಿ ಸ್ವಚ್ಛತೆ ಮಾಡುವ ಮುನ್ನ ತಮ್ಮ ಆರೋಗ್ಯದತ್ತ ಹೆಚ್ಚು ಗಮನ ಹರಿಸಬೇಕು. ಸ್ವಚ್ಛತೆ. ಮುಂಜಾಗ್ರತಾ ಕ್ರಮ ಅನುಸರಿಸದಿದ್ದರೆ ರೋಗರುಜಿನಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಕೆಲಸಕ್ಕೆ ತೆರಳುವಾಗ ಕೈ ಕವಚ, ಬೂಟ್, ಮೈ ಮುಚ್ಚುವ ಕವಚವನ್ನು ಧರಿಸಬೇಕು. ಕೆಲಸ ಮಾಡುವಾಗ ತಿಂಡಿ, ತಿನಿಸು ತಿನ್ನಬಾರದು. ಕರ್ತವ್ಯ ಮುಗಿದ ಮೇಲೆ ಕೈಕಾಲನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು. ನಮ್ಮನ್ನೂ ಕೂಡಾ ಸರ್ಕಾರಿ ನೌಕರರಂತೆ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಕಂದಾಯ ನಿರೀಕ್ಷಕ ಜಯಕಿರಣ್ ಮಾತನಾಡಿ, ‘ವೈದ್ಯರು ರೋಗ ಬಂದ ನಂತರ ಚಿಕಿತ್ಸೆ ಕೊಡುತ್ತಾರೆ, ಪೌರಕಾರ್ಮಿಕರು ರೋಗ ಬರುವ ಮುಂಚೆ ಜಾಗ್ರತೆ ವಹಿಸಿ ಜನರ ಪ್ರಾಣ ರಕ್ಷಣೆ ಮಾಡುತ್ತಿದ್ದಾರೆ. ಇಂತಹ ಕಾರ್ಮಿಕರ ಸೇವೆ ಶ್ಲಾಘನೀಯವಾದದ್ದು. ಅವರಿಗೆ ಜೀವನ ಸುರಕ್ಷತೆಗಾಗಿ ವಿಮೆ ಯೋಜನೆ, ಮಕ್ಕಳು ಉನ್ನತ ಶಿಕ್ಷಣಕ್ಕೆ ನೆರವು ನೀಡುವುದು ಸೇರಿದಂತೆ ಸರ್ಕಾರದ ನಾನಾ ಸೌಲಭ್ಯಗಳನ್ನು ನೀಡಬೇಕು’ ಎಂದರು.

ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದ ಪೌರಕಾರ್ಮಿಕ ಶ್ರೀನಿವಾಸ್ ಅವರ ಕುಟುಂಬಕ್ಕೆ ಯೋಜನಾ ನಿರ್ದೇಶಕಿ ಸುಮಾ ಅವರು ಆಹಾರದ ಕಿಟ್ ವಿತರಣೆ ಮಾಡಿದರು. ಕಾರ್ಮಿಕರು ನೀರು ಕಾಯಿಸಿಕೊಳ್ಳಲು ಎಲೆಕ್ಟ್ರಿಕ್‌
ಸ್ಟವ್ ನೀಡಿದರು. ಯೋಜನಾ ನಿರ್ದೇಶಕರ ಕಚೇರಿಯ ವ್ಯವಸ್ಥಾಪಕಿ ರಾಜೇಶ್ವರಿ, ಪರಿಸರ ಅಭಿಯಂತರ ಮಹೇಶ್ ಕುಮಾರ್, ಆರೋಗ್ಯ ನಿರೀಕ್ಷಕ ಉದಯ್ ಕುಮಾರ್ ರಾವ್, ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು