ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕಡಿತ: ಕಾರ್ಮಿಕರ ಪರದಾಟ

Last Updated 25 ಮೇ 2019, 13:19 IST
ಅಕ್ಷರ ಗಾತ್ರ

ವಿಜಯಪುರ: ವಿದ್ಯುತ್ ಕಡಿತದಿಂದಾಗಿ ಕೆಲಸಕ್ಕೆ ತೊಂದರೆಯಾಗುತ್ತಿದ್ದು ಆದಾಯ ಕುಂಠಿತವಾಗುತ್ತಿದೆ ಎಂದು ವಿದ್ಯುತ್ ಮಗ್ಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ನೋವು ತೋಡಿಕೊಂಡಿದ್ದಾರೆ.

‘ಬೇಸಿಗೆ ಆರಂಭದ ದಿನದಿಂದಲೂ ದಿನಕ್ಕೆ ಕನಿಷ್ಠ 10 ಬಾರಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ನಾವು ಮಾಡುವ ಉದ್ಯೋಗ ಪೀಸ್ ಲೆಕ್ಕ. ಈ ರೀತಿ ವಿದ್ಯುತ್ ವ್ಯತ್ಯಯವಾಗುತ್ತಿದ್ದರೆ, ಉತ್ಪಾದನೆ ಕಡಿಮೆಯಾಗುವುದರ ಜೊತೆಗೆ ಬೇಡಿಕೆಗೆ ಅನುಗುಣವಾದ ಸಮಯಕ್ಕೆ ಬಟ್ಟೆ ಕೊಡದಿದ್ದರೆ ಮಾರುಕಟ್ಟೆ ಸೌಲಭ್ಯವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ಉದ್ಯೋಗ ಇಲ್ಲದಂತಾಗುತ್ತದೆ’ ಎಂದು ಕಾರ್ಮಿಕ ಸೋಮಶೇಖರ್ ಹೇಳಿದರು.

‘ನಗರ ಪ್ರದೇಶ ಮಾತ್ರವಲ್ಲದೆ ಹಳ್ಳಿಗಳಲ್ಲೂ ವಿದ್ಯುತ್ ಸರಬರಾಜು ಪದೇ ಪದೇ ಕಡಿತಗೊಳ್ಳುತ್ತಿರುವುದರಿಂದ ರೈತರಿಗೂ ಸಮಸ್ಯೆಯಾಗುತ್ತಿದೆ. ಬೆಸ್ಕಾಂ ಇಲಾಖೆಯ ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸುವುದರಿಂದ ಪಂಪು ಮೋಟಾರುಗಳು ಸುಟ್ಟುಹೋಗುತ್ತಿವೆ. ಒಮ್ಮೆ ವಿದ್ಯುತ್ ಕಡಿತಗೊಳಿಸಿದ ನಂತರ ಕನಿಷ್ಠ 10 ನಿಮಿಷಗಳ ನಂತರ ವಿದ್ಯುತ್ ಪೂರೈಕೆಯಾದರೆ ಪಂಪು, ಮೋಟಾರುಗಳು ಸುಟ್ಟುಹೋಗುವುದನ್ನು ತಡೆಗಟ್ಟಬಹುದಾಗಿದೆ’ ಎಂದು ಅವರು ತಿಳಿಸಿದರು.

ಅನಿಯಮಿತ ವಿದ್ಯುತ್ ಕಡಿತದಿಂದ ನಗರದ ಹಾಲಿನ ಅಂಗಡಿಗಳು ಹಾಗೂ ಬೇಕರಿಗಳಲ್ಲಿ ಮಾರಾಟಕ್ಕೆ ಇಟ್ಟಿರುವ ಉತ್ಪನ್ನಗಳು ಹಾಳಾಗುತ್ತಿದ್ದು, ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಮಾತ್ರವಲ್ಲ ಸಾವಿರಾರು ರೂಪಾಯಿ ನಷ್ಟ ಅನುಭವಿಸುವಂತಾಗಿದೆ ಎಂದು ಪ್ರಭಾಕರ್ ಹೇಳಿದರು.

ಎಂಜಿನಿಯರ್ ಮಾನಸ ಮಾತನಾಡಿ ‘ಇಂತಹ ಸಮಸ್ಯೆಗಳು ಉದ್ಭವವಾಗದಂತೆ ಸೂಕ್ತ ಕ್ರಮವಹಿಸಲು ಈಗಾಗಲೇ ನಗರದಲ್ಲಿ ಲೇನ್‌ಗಳನ್ನು ಬದಲಿಸುವ ಕೆಲಸ ಮಾಡುತ್ತಿದ್ದೇವೆ. ಇನ್ನೂ ಅಳವಡಿಸಬೇಕಾಗಿದೆ. ತಂತಿಗಳಲ್ಲಿ ಲೋಪ ಕಂಡು ಬಂದಾಗ ಮಾತ್ರವೇ ಕಡಿತಗೊಳಿಸುತ್ತಿದ್ದೇವೆ’ ಎಂದರು.

ಬೆಸ್ಕಾಂ ಇಲಾಖೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಮಾತನಾಡಿ ‘ವಿಜಯಪುರ ಕಚೇರಿಯಲ್ಲಿ ಪರಿಶೀಲನೆ ಮಾಡಿದ್ದೇನೆ. ದಿನಕ್ಕೆ 22 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಸರಬರಾಜಾಗುತ್ತಿದೆ ಎಂಬ ಮಾಹಿತಿ ಇದೆ. ಮಳೆ ಬಂದಾಗ ಅಥವಾ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದಾಗ, ತಾಂತ್ರಿಕ ದೊಷಗಳು ಕಂಡು ಬಂದಾಗ ಕಡಿತಗೊಂಡಿರಬಹುದು. ಕೂಡಲೇ ಸಂಬಂಧಪಟ್ಟ ಎಂಜಿನಿಯರ್ ಹಾಗೂ ಸಿಬ್ಬಂದಿಯೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT