ಗುರುವಾರ , ಡಿಸೆಂಬರ್ 5, 2019
21 °C

ಉಪಕಸುಬುಗಳ ಕಡೆಗೆ ಗಮನಹರಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ತೀವ್ರ ಮಳೆಯ ಕೊರತೆಯಿಂದ ಕಂಗೆಟ್ಟಿರುವ ರೈತರು, ಕೃಷಿ ಚಟುವಟಿಕೆಗಳ ಜೊತೆಗೆ ಉಪಕಸುಬುಗಳತ್ತಲೂ ಗಮನಹರಿಸಬೇಕು ಎಂದು ರೈತ ಮುಖಂಡ ಗಡ್ಡದನಾಯಕನಹಳ್ಳಿ ನಾಗರಾಜಪ್ಪ ಹೇಳಿದರು.

‘ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಸೇರಿದಂತೆ ಲಾಭದಾಯಕ ಕಸುಬುಗಳನ್ನು ರೂಢಿಸಿಕೊಂಡರೆ ಜೀವನ ನಿರ್ವಹಣೆ ಸುಲಭವಾಗುತ್ತದೆ. ತೀವ್ರ ನೀರಿನ ಅಭಾವದಿಂದ ರೈತರು ಕಂಗೆಟ್ಟಿದ್ದಾರೆ. ಕೃಷಿ ಚಟುವಟಿಕೆಗಳು ಕೈ ಕೊಡುತ್ತಿವೆ. ಟ್ಯಾಂಕರ್‌ಗಳಲ್ಲಿ ನೀರು ಹಾಯಿಸಿ ಬೆಳೆ ಬೆಳೆಯಬೇಕಾದಂತಹ ಪರಿಸ್ಥಿತಿಗೆ ಬಂದಿದ್ದೇವೆ. ಟ್ಯಾಂಕರ್‌ಗಳಲ್ಲಿ ತೋಟಗಳಿಗೆ ಅವಶ್ಯವಿರುವಷ್ಟು ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಉತ್ತಮ ಇಳುವರಿ, ಬೆಲೆಯೂ ಸಿಗುತ್ತಿಲ್ಲ. ಹೀಗಾಗಿ ಕಾರಣ ರೈತರು ಉಪಕಸುಬುಗಳ ಕಡೆಗೆ ಹೋಗುವುದು ಉತ್ತಮ’ ಎಂದರು.

ರೈತ ಮುನಿಯಪ್ಪ ಮಾತನಾಡಿ, ‘ಕುರಿಗಳು, ಮೇಕೆಗಳ ಸಾಕಾಣಿಕೆಯೆಂಬುದು ಮನೆಯಲ್ಲಿ ಹಣವಿದ್ದಷ್ಟೆ ಧೈರ್ಯ. ಅವು ಮೃತಪಟ್ಟದರೆ ಸರ್ಕಾರದಿಂದ ಪರಿಹಾರ ಕೊಡುತ್ತಾರೆ. ಬಯಲಿನಲ್ಲಿ ಮೇಯಿಸಿಕೊಂಡು ಬರಲು ಸಾಧ್ಯ. ಸಂಕಷ್ಟ ಎದುರಾದರೆ ತಕ್ಷಣ ಒಂದೆರಡು ಕುರಿಗಳನ್ನು ಮಾರಾಟ ಮಾಡಿಕೊಂಡರೆ ನಮ್ಮ ಹಣಕಾಸಿನ ಸಮಸ್ಯೆ ಬಗೆಹರಿಸಿಕೊಳ್ಳಬಹುದು’ ಎಂದರು.‌

ರೈತ ಆಂಜಿನಪ್ಪ ಮಾತನಾಡಿ, ‘ನಮ್ಮ ಮನೆಯಲ್ಲಿ 60 ಕುರಿಗಳನ್ನು ಸಾಕಿದ್ದೆವು. ಮೂರು ತಿಂಗಳ ಹಿಂದೆ 35 ಕುರಿಗಳನ್ನು ಮಾರಾಟ ಮಾಡಿ, ಮಗಳಿಗೆ ಚಿನ್ನಾಭರಣ ಮಾಡಿಸಿದೆ. 20 ಕುರಿಗಳನ್ನು ಮಾರಾಟ ಮಾಡಿ ಮನೆ ಕಟ್ಟಿಕೊಂಡೆ. ಈಗ 5 ಕುರಿಗಳು ಇಟ್ಟುಕೊಂಡಿದ್ದೇನೆ. ಅವುಗಳನ್ನು ಪುನಃ ಮೇಯಿಸುತ್ತಿದ್ದೇನೆ. ಈಗ ಯಾರ ಬಳಿಯಲ್ಲಿ ಹೋಗಿ ₹ 10 ಸಾವಿರ ಕೇಳಿದರೂ ಕೊಡುವುದು ಕಷ್ಟ. ಅದಕ್ಕೆ ಕಷ್ಟಕಾಲದಲ್ಲಿ ಕುರಿಗಳು ನೆರವಿಗೆ ಬರುತ್ತವೆ. 50 ಕುರಿಗಳಿದ್ದರೆ ಇಬ್ಬರಿಗೆ ಕೆಲಸ ಸಿಗುತ್ತದೆ’ ಎಂದರು.

ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾರಾಯಣಸ್ವಾಮಿ ಮಾತನಾಡಿ, ‘ರೈತರು, ಹೈನುಗಾರಿಕೆಯ ಜೊತೆಗೆ ಉಪಕಸುಬು ರೂಢಿಸಿಕೊಳ್ಳುವುದು ಉತ್ತಮ ಬೆಳವಣಿಗೆ. ರಾಸುಗಳು ಮೃತಪಟ್ಟರೆ 10 ಸಾವಿರ ಪರಿಹಾರ ಸಿಗುತ್ತದೆ. 6 ತಿಂಗಳ ಮೇಲ್ಪಟ್ಟ ಕುರಿಗಳು ಮೃತಪಟ್ಟರೆ ₹ 5 ಸಾವಿರ, 6 ತಿಂಗಳ ಒಳಗಿನ ಮರಿಗಳು ಮೃತಪಟ್ಟರೆ ₹ 2,500 ಪರಿಹಾರ ರೈತರಿಗೆ ಸಿಗುತ್ತದೆ. ಸತ್ತ ಪ್ರಾಣಿಗಳನ್ನು ಅಂತ್ಯಸಂಸ್ಕಾರ ಮಾಡುವ ಮುನ್ನಾ ಪಶುವೈದ್ಯರಿಗೆ ತಿಳಿಸಬೇಕು. ಸತ್ತ ಪ್ರಾಣಿಯ ಮರಣೋತ್ತರ ಪರೀಕ್ಷೆ ನಡೆಸಬೇಕು. ಫಲಾನುಭವಿಯ ಆಧಾರ್‌ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಕೊಡಬೇಕು’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು