ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣದಲ್ಲಿ ಅಭ್ಯಾಸ ಶುಲ್ಕ: ಪ್ರತಿಭಟನೆ

ದೊಡ್ಡಬಳ್ಳಾಪುರ: ಶುಲ್ಕ ಖರ್ಚಿನ ಕುರಿತು ಸಮಗ್ರ ಮಾಹಿತಿ ನೀಡಲು ಪ್ರತಿಭಟನಾಕಾರರ ಒತ್ತಾಯ
Last Updated 20 ಜೂನ್ 2018, 5:55 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಕ್ರೀಡಾಭ್ಯಾಸ ಮಾಡಲು ಕ್ರೀಡಾಪಟುಗಳಿಂದ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.


ಕರವೇ ಕನ್ನಡಿಗರ ಬಣದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಚಂದ್ರಶೇಖರ್‌ ಮಾತನಾಡಿ, ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೂ ಯಾರೂ ಯಾವುದೇ ಶುಲ್ಕ ವಸೂಲಿ ಮಾಡುತ್ತಿರಲಿಲ್ಲ. ಆದರೆ ಕೆಲವು ತಿಂಗಳಿನಿಂದ ಯುವಜನ ಮತ್ತು ಕ್ರೀಡಾ ಇಲಾಖೆ ಅವರು ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದರು.

ಇಲಾಖೆಯೂ ವಸೂಲಿ ಮಾಡುತ್ತಿರುವ ಶುಲ್ಕದ ಖರ್ಚು ಮತ್ತು ವೆಚ್ಚದ ವಿವರಗಳನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು. ಇದುವರೆಗೂ ಯಾವ ಇಲಾಖೆಯೂ ಕ್ರೀಡಾಂಗಣವನ್ನು ನಿರ್ವಹಣೆ ಮಾಡಿಲ್ಲ. ಸ್ವಚ್ಛತೆ ಕಾರ್ಯಗಳನ್ನೂ ಕೈಗೊಂಡಿಲ್ಲ. ಇಡೀ ಕ್ರೀಡಾಂಗಣದ ತುಂಬ ಹುಲ್ಲು ಬೆಳೆದು ನಿಂತಿದೆ ಎಂದರು.

ಕ್ರೀಡಾಂಗಣ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಯುವಜನ ಮತ್ತು ಕ್ರೀಡಾ ಇಲಾಖೆಯೂ ಕ್ರೀಡಾಂಗಣವನ್ನು ನಗರಸಭೆಗೆ ಬಿಟ್ಟುಕೊಡಬೇಕು. ಶುಲ್ಕ ವಸೂಲಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕರವೇ ಕನ್ನಡಿಗರ ಬಣ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎನ್.ಪ್ರದೀಪ್ ಮಾತನಾಡಿ, ನಗರದ ಭಗತ್‌ಸಿಂಗ್ ಕ್ರೀಡಾಂಗಣ ಈ ಹಿಂದೆ ಹೇಗಿತ್ತು, ಈಗ ಹೇಗಿದೆ ಎನ್ನುವುದನ್ನು ಸಾರ್ವಜನಿಕರು ಗಮನಿಸಬೇಕು ಎಂದು ತಿಳಿಸಿದರು.

ಕ್ರೀಡಾಂಗಣದಲ್ಲಿ ಮೂಲ ಸೌಕರ್ಯವನ್ನು ಒದಗಿಸುವ ಕುರಿತು ಗಮನ ಹರಿಸದ ಇಲಾಖೆಯೂ ಸಾರ್ವಜನಿಕ ಅಥವಾ ಇತರೆ ಕಾರ್ಯಕ್ರಮಗಳನ್ನು ನಡೆಸಲು ಶುಲ್ಕ ವಿಧಿಸುತ್ತಿದೆ ಎಂದರು. ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ಅಭ್ಯಾಸ ಮಾಡುವುದಕ್ಕೂ ₹2,500 ಶುಲ್ಕ ವಿಧಿಸುತ್ತಿದೆ. ಹಣ ಸ್ವೀಕೃತಿಯ ಬಗ್ಗೆ ರಸೀದಿಯೂ ನೀಡುತ್ತಿಲ್ಲ ಎಂದು ಆರೋಪಿಸಿದರು.

ಕಾರ್ಯಕ್ರಮಗಳಿಂದ ಸಂಗ್ರಹವಾಗಿರುವ ಹಣ ಹಾಗೂ ಕ್ರೀಡಾಂಗಣದ ಖರ್ಚು ವೆಚ್ಚಗಳ ವಿವರಗಳನ್ನು ಇಲಾಖೆ ಬಹಿರಂಗ ಪಡಿಸಬೇಕು ಎಂದರು.

ಪ್ರತಿಭಟನೆಯ ನಂತರ ಉಪವಿಭಾಗಾಕಾರಿ ಎನ್.ಮಹೇಶ್‌ಬಾಬು ಸಮ್ಮುಖದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ದೇವಿಕಾ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಅಪ್ಪಯ್ಯ, ಕ್ರೀಡಾಂಗಣದ ಉಸ್ತುವಾರಿ ಡಾ.ಅಶ್ವಿನಿ ಅವರೊಡನೆ ಕರವೇ ಕಾರ್ಯಕರ್ತರು ಚರ್ಚೆ ನಡೆಸಿದರು.

ಕ್ರೀಡಾಭ್ಯಾಸಕ್ಕೆ ಹಣ ವಸೂಲಿ ಮಾಡುವ ಕುರಿತು ಬಂದಿರುವ ದೂರನ್ನು ಗಂಭೀರವಾಗಿ ಪರಿಗಣಿಸಿ, ಸ್ಥಳೀಯರಿಗೆ ಕ್ರೀಡಾಭ್ಯಾಸ ಮಾಡಲು ಅನುವು ಮಾಡಿಕೊಡಬಹುದಾಗಿದೆ. ಇಲಾಖೆ ಆದಾಯ ಹಾಗೂ ವೆಚ್ಚಗಳನ್ನು ಪಾರದರ್ಶಕವಾಗಿಡುವಂತೆ ಎನ್.ಮಹೇಶ್‌ಬಾಬು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯ ಮಾತನಾಡಿ, ಸಹಾಯಕ ನಿರ್ದೇಶಕರೊಂದಿಗೆ ಜೂನ್ 27ಕ್ಕೆ ಈ ಕುರಿತು ಸಭೆ ನಡೆಸಿ, ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಕರವೇ ರಾಜ್ಯ ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ಆರಾಧ್ಯ,ಖಜಾಂಚಿ ಚೇತನ್, ಕಾನೂನು ಸಲಹೆಗಾರ ಎಂ.ವಿ.ವಿಜಯಕುಮಾರ್,ರಾಜ್ಯ ಸಹ ಕಾರ್ಯದರ್ಶಿ ರಮೇಶ್ ಮುಖಂಡರಾದ ಹರ್ಷ, ರಾಘವೇಂದ್ರ, ಪುನೀತ್, ಹೇಮಂತ್, ರಾಮು, ಅರ್ಜುನ್, ಸುಬ್ರಹ್ಮಣ್ಯ, ಶಿವಶಂಕರಪ್ಪ, ಪ್ರದೀಪ ಆನಂದ ಕಲ್ಲುಕೋಟೆ,ರಮೇಶ್, ಮಂಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT