ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಲ್ಲೇ ಪ್ರಾರ್ಥನೆ: ಉಪವಾಸ ಅಂತ್ಯ

ರಂಜಾನ್‌ ಸಡಗರ l ಕೊರೊನಾ ತೊಲಗಲು ವಿಶೇಷ ಅರಿಕೆ l ಶುಭಾಶಯ ವಿನಿಮಯ
Last Updated 26 ಮೇ 2020, 2:24 IST
ಅಕ್ಷರ ಗಾತ್ರ

ವಿಜಯಪುರ (ಬೆಂಗಳೂರು ಗ್ರಾಮಾಂತರ): ರಂಜಾನ್ ತಿಂಗಳ ಉಪವಾಸ ವ್ರತಾಚರಣೆಯನ್ನು ಮುಸ್ಲಿಮರು ಸೋಮವಾರ ಸರಳವಾಗಿ ಮನೆಗಳಲ್ಲೇಪ್ರಾರ್ಥನೆ ಸಲ್ಲಿಸುವ ಮೂಲಕ ಅಂತ್ಯಗೊಳಿಸಿದರು. ಪ್ರತಿವರ್ಷ ಇಲ್ಲಿನ ಶಿಡ್ಲಘಟ್ಟ ಕ್ರಾಸ್‌ನಲ್ಲಿ ಜಮಾವಣೆಗೊಂಡು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಮರು, ಈ ಬಾರಿ ಲಾಕ್ ಡೌನ್ ಘೋಷಣೆಯಾಗಿರುವ ಕಾರಣ, ಮನೆಗಳಲ್ಲೆ ಕುಟುಂಬದ ಸದಸ್ಯರೊಡನೆ ಸೇರಿಕೊಂಡು ಪ್ರಾರ್ಥನೆ ಸಲ್ಲಿಸಿದರು.

ಸಾಮೂಹಿಕ ಪ್ರಾರ್ಥನೆಗೆ ಸರ್ಕಾರ ಅವಕಾಶ ನೀಡಿರಲಿಲ್ಲ. ಕುಟುಂಬದ ಹಿರಿಯರೇ ಅಲ್ಲಾಹನಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ರಂಜಾನ್ ಹಬ್ಬದ ಮಹತ್ವದ ಕುರಿತು ಉಪದೇಶ ಮಾಡಿದರು.

ಈ ಬಾರಿ ಹಬ್ಬದ ವಾತಾವರಣ ಕಳೆಗುಂದಿತ್ತು. ಪ್ರತಿವರ್ಷ ಮನೆ ಮಂದಿ ಎಲ್ಲರೂ ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತಿದ್ದರು. ಈ ಬಾರಿ ಉಳ್ಳವರು ಮಾತ್ರ ಹೊಸಬಟ್ಟೆ ಧರಿಸಿದ್ದರು. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರಾದಿಯಾಗಿ ಪರಸ್ಪರ ಆಲಿಂಗನದ ಮೂಲಕ ಹಬ್ಬದ ಸಂತಸ ಹಂಚಿಕೊಳ್ಳುತ್ತಿದ್ದರು. ಈ ಬಾರಿ ಆಲಿಂಗನ ಮಾಡಿಕೊಳ್ಳಲೂ ಅವಕಾಶವಿರಲಿಲ್ಲ. ಕೈ ಮುಗಿದು ಶುಭಾಶಯ ವಿನಿಮಯ ಮಾಡಿಕೊಂಡರು.

ಸಂಬಂಧಿಗಳು, ಆತ್ಮೀಯರ ಮನೆಗೆ ತೆರಳಿ ಹಬ್ಬದ ಶುಭಾಶಯ ಹೇಳುತ್ತಿದ್ದವರು, ಮೊಬೈಲ್‌ನಲ್ಲೇ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಅಂಗವಾಗಿ ತರಹೇವಾರಿ ತಿಂಡಿ– ತಿನಿಸುಗಳ ಭೋಜನದ ಘಮಲು ಮನೆಯ ಅಂಗಳವನ್ನು ತುಂಬಿತ್ತು. ಹಬ್ಬದ ಆಚರಣೆಗೆ ಅಡ್ಡಿಯಾಗದಂತೆ ಪಟ್ಟಣದಲ್ಲಿ ಧಾರ್ಮಿಕ ಕೇಂದ್ರಗಳ ಬಳಿ ಪೊಲೀಸ್ ಪಹರೆ ಹಾಕಲಾಗಿತ್ತು. ಮಸೀದಿಗಳು ಖಾಲಿಯಾಗಿದ್ದವು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗೌಸ್ ಖಾನ್ ಮಾತನಾಡಿ, ಸಂಕಷ್ಟದ ಸಮಯದಲ್ಲಿ ಹಬ್ಬ ಆಚರಣೆ ಮಾಡಿದ್ದೇವೆ. ಇಡೀ ಪ್ರಪಂಚ ಕೊರೊನಾ ಸೋಂಕಿನಿಂದ ತತ್ತರಿಸುತ್ತಿದ್ದು, ಎಲ್ಲಾ ದೇಶಗಳಲ್ಲಿ ಶಾಂತಿ ನೆಲೆಸಬೇಕು. ಈ ಸಾಂಕ್ರಾಮಿಕ ರೋಗ ತೊಲಗಬೇಕು ಎಂದು ವಿಶೇಷವಾಗಿ ಪ್ರಾರ್ಥಿಸಿದ್ದೇವೆ. ಕೊರೊನಾ ವಾರಿಯರ್ಸ್, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಮಾಧ್ಯಮಗಳು, ವಿವಿಧ ಸಂಘಸಂಸ್ಥೆಗಳಿಗೆಒಳ್ಳೆಯದು ಮಾಡಲಿ ಎಂದು ಬೇಡಿಕೊಂಡಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT