ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಪ್ರಣಾಳಿಕೆ ಜನರ ಧ್ವನಿ’;ರಾಹುಲ್‌ ಗಾಂಧಿ ಪ್ರತಿಪಾದನೆ

Last Updated 27 ಏಪ್ರಿಲ್ 2018, 20:21 IST
ಅಕ್ಷರ ಗಾತ್ರ

ಮಂಗಳೂರು: ‘ನಾವು ಜನರ ನಿರೀಕ್ಷೆ ಮತ್ತು ಆಶಯಗಳನ್ನು ಗೌರವಿಸುವವರು. ಹೀಗಾಗಿ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಜನರ ಧ್ವನಿಯಾಗಿಯೇ ರೂಪು
ಗೊಂಡಿದೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ಸಿದ್ಧಪಡಿಸಿರುವ ರಾಜ್ಯ, ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಾಂಗ್ರೆಸ್‌ ಪಕ್ಷಕ್ಕೆ ಜನರ ಜೊತೆಗಿನ ಸಂವಾದ, ಚರ್ಚೆಯಲ್ಲಿ ನಂಬಿಕೆ ಇದೆ. ಈ ಕಾರಣಕ್ಕಾಗಿಯೇ ಕರ್ನಾಟಕದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು, ತಜ್ಞರು ಮತ್ತು ವಿವಿಧ ಸಮುದಾಯಗಳ ಜನರ ಜೊತೆ ಸಂವಾದ ನಡೆಸಿದ ಬಳಿಕ ಪ್ರಣಾಳಿಕೆ ರೂಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ‘ಮನ್‌ ಕಿ ಬಾತ್‌’ ಮೂಲಕ ದೇಶದ ಜನರಿಗೆ ಆಜ್ಞೆ ನೀಡುತ್ತಾರೆ. ಆದರೆ, ಕಾಂಗ್ರೆಸ್‌ ಜನರ ಜೊತೆಗಿನ ಮಾತುಕತೆ ಮೂಲಕ ಆದೇಶ ಪಡೆದು, ಕೆಲಸ ಮಾಡಲಿದೆ ಎಂದರು.

‘ನಾವು ಬಸವಣ್ಣನವರ ತತ್ವಗಳಲ್ಲಿ ನಂಬಿಕೆ ಇಟ್ಟವರು. ನುಡಿದಂತೆ ನಡೆ ಎಂಬ ಬಸವಣ್ಣನ ವಚನವೇ ನಮಗೆ ಆಧಾರ. 2013ರ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ ಶೇಕಡ 99ರಷ್ಟನ್ನು ಐದು ವರ್ಷಗಳಲ್ಲಿ ಈಡೇರಿಸಿದ್ದೇವೆ. ಈಗ ಪ್ರಣಾಳಿಕೆಯಲ್ಲಿ ಹೇಳಿದಂತೆ ಮುಂದಿನ ಐದು ವರ್ಷಗಳ ಕಾಲ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ಆರ್‌ಎಸ್‌ಎಸ್‌, ರೆಡ್ಡಿ ಕಾರ್ಯಸೂಚಿ: ‘ಕಾಂಗ್ರೆಸ್ ಪಕ್ಷವು ಜನರು ನೀಡಿದ ಕಾರ್ಯಸೂಚಿಯ ಆಧಾರದ ಮೇಲೆ ಕೆಲಸ ಮಾಡುತ್ತದೆ. ಆದರೆ, ಬಿಜೆಪಿ ಈ ರೀತಿ ಎಂದೂ ವರ್ತಿಸಿಲ್ಲ. ಮೂರು ಜನ ಕೋಣೆಯೊಳಗೆ ಕುಳಿತು ಬಿಜೆಪಿ ಪ್ರಣಾಳಿಕೆ ಸಿದ್ಧಪಡಿಸುತ್ತಾರೆ. ಆರ್‌ಎಸ್‌ಎಸ್‌ ನಾಯಕರು ಮತ್ತು ಗಣಿ ಅಕ್ರಮ ಎಸಗಿದ ಬಳ್ಳಾರಿ ರೆಡ್ಡಿ ಸಹೋದರರ ವಿಚಾರಗಳೇ ಅಲ್ಲಿ ತುಂಬಿರುತ್ತವೆ. ಬಿಜೆಪಿಯ ಪ್ರಣಾಳಿಕೆ ಯಾವತ್ತೂ ಜನರ ಪ್ರಣಾಳಿಕೆ ಆಗಿರಲು ಸಾಧ್ಯವೇ ಇಲ್ಲ’ ಎಂದು ಟೀಕಿಸಿದರು.

ಬಿಜೆಪಿಯವರು ಯಾವತ್ತೂ ನುಡಿದಂತೆ ನಡೆಯುವುದಿಲ್ಲ. ವಿದೇಶದಿಂದ ಕಪ್ಪು ಹಣ ತಂದು ಪ್ರತಿ ಭಾರತೀಯನಿಗೆ ₹ 15 ಲಕ್ಷ ನೀಡುವುದಾಗಿ ಪ್ರಧಾನಿ ಹೇಳಿದ್ದರು. ಯಾರಿಗೂ ಕೊಡಲಿಲ್ಲ. ಚುನಾವಣೆಯ ಸಮಯದಲ್ಲಿ ಸುಳ್ಳು ಹೇಳುವುದು ಅವರ ರೂಢಿ. ಕಾಂಗ್ರೆಸ್‌ ನಿಜವಾಗಿಯೂ ಮಾಡಲು ಸಾಧ್ಯವಿ
ರುವ ಕೆಲಸದ ಬಗ್ಗೆ ಮಾತ್ರ ಭರವಸೆ ಕೊಡುತ್ತದೆ ಎಂದರು.

ಫಲಿತಾಂಶವೇ ದಿಕ್ಸೂಚಿ: ವಿಷಮ ಸ್ಥಿತಿಯಲ್ಲಿರುವ ದೇಶದ ರಾಜಕೀಯ ಪರಿಸ್ಥಿತಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ದಿಕ್ಸೂಚಿ ಆಗಲಿದೆ. ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ, ದೇಶದ ರಾಜಕೀಯಕ್ಕೆ ದಿಕ್ಕು ತೋರಿಸುವ ಶಕ್ತಿ ಹೊಂದಿದೆ. ಅಂತಹ ಫಲಿತಾಂಶವನ್ನೇ ಜನರು ಈ ಬಾರಿ ನೀಡುತ್ತಾರೆ ಎಂದು ಹೇಳಿದರು. 

ಕಾಂಗ್ರೆಸ್ ಪ್ರಮುಖ ಭರವಸೆಗಳು

l ರೇಷ್ಮೆ ಕೃಷಿಕರಿಗೆ ಬೆಂಬಲ ನೀಡಲು ರೇಷ್ಮೆ ಬೆಲೆ ಸ್ಥಿರತೆ ನಿಧಿ ಸ್ಥಾಪನೆ

l ಕಾಫಿ ತೋಟದ ಕಾರ್ಮಿಕರು ಮತ್ತು ಸಣ್ಣ ಕಾಫಿ ಬೆಳೆಗಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ಯೋಜನೆ

l ರಾಜ್ಯದ ಕಾಫಿಗೆ ಬ್ರ್ಯಾಂಡ್‌ ಮೌಲ್ಯ ತರುವುದು

l ಕಾಳು ಮೆಣಸಿನ ಮೇಲಿನ ಎಪಿಎಂಸಿ ಸೆಸ್‌ ತೆಗೆದು ಹಾಕುವುದು

l ಹೊಸದಾಗಿ ಸಾವಯವ ಕೃಷಿ ಇಲಾಖೆ ಸ್ಥಾ‍ಪನೆ

l ಕೌಶಲ ಅಭಿವೃದ್ಧಿಗೆ ವೃತ್ತಿ ತರಬೇತಿ ವಿಶ್ವವಿದ್ಯಾಲಯ ಸ್ಥಾಪನೆ

l ಸಂಶೋಧನೆಗಳನ್ನು ಉತ್ತೇಜಿಸಲು ಕರ್ನಾಟಕ ವಿಜ್ಞಾನ, ತಂತ್ರಜ್ಞಾನ, ಮಾನವಶಾಸ್ತ್ರ ಮತ್ತು ಸಮಾಜ ವಿಜ್ಞಾನ ಫೌಂಡೇಷನ್‌ ಸ್ಥಾಪನೆ

l ರಾಜ್ಯದ ಐದು ವಿಶ್ವವಿದ್ಯಾಲಯಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸುವುದು

l ಒಲಿಂಪಿಕ್ಸ್ ಪದಕ ವಿಜೇತರಿಗೆ ₹ 1 ಕೋಟಿ ನಗದು ಬಹುಮಾನ

l ತೃತೀಯ ಲಿಂಗಿಗಳಿಗೆ ವೃತ್ತಿಪರ ತರಬೇತಿ, ಉದ್ಯೋಗಿನಿ ಯೋಜನೆಯ ವಿಸ್ತರಣೆ

l ಸಫಾಯಿ ಕರ್ಮಚಾರಿಗಳು, ಸ್ಮಶಾನ ಅಗೆಯುವವರಿಗೆ ಶೇ 10ರಷ್ಟು ಮನೆಗಳ ಮೀಸಲು

l ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪಿಯುಸಿ ಹಂತಕ್ಕೆ ಮೇಲ್ದರ್ಜೆಗೇರಿಸುವುದು

l 1,000 ಮೌಲಾನಾ ಆಝಾದ್ ಶಾಲೆಗಳ ಸ್ಥಾಪನೆ

l ಕೇರಳದ ಕುಟುಂಬಶ್ರೀ ಮಾದರಿಯಲ್ಲಿ ಸ್ತ್ರೀ ಶಕ್ತಿ ಒಕ್ಕೂಟ ರಚನೆ

l ಸ್ಯಾನಿಟರಿ ಪ್ಯಾಡ್‌ಗಳ ಮೇಲಿನ ತೆರಿಗೆ ರದ್ದು ಮಾಡುವುದು

l ಎಸ್ಸೆಸ್ಸೆಲ್ಸಿಗಿಂತ ಕಡಿಮೆ ಓದಿದ ಮಹಿಳೆಯರಿಗೆ ಉಚಿತ ಚಾಲನಾ ಪರವಾನಗಿ, ರಿಯಾಯಿತಿ ದರದಲ್ಲಿ ವಾಹನ ಒದಗಿಸುವುದು

l ರಾ‌ತ್ರಿ 7ರಿಂದ ಬೆಳಿಗ್ಗೆ 7ರವರೆಗೆ ಮಹಿಳೆಯರಿಗೆ ಸೀಮಿತವಾದ ಪಿಂಕ್‌ ಬಸ್ ಸೌಲಭ್ಯ

l ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಉತ್ಪಾದನೆಯನ್ನು 6 ಸಾವಿರ ಕೋಟಿ ಡಾಲರುಗಳಿಂದ 30 ಸಾವಿರ ಕೋಟಿ ಡಾಲರುಗಳಿಗೆ ಹೆಚ್ಚಿಸುವುದು

l ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ, ಏರ್‌ ಸ್ಟ್ರಿಪ್‌ ಅಭಿವೃದ್ಧಿ

l ಬೆಂಗಳೂರಿನಲ್ಲಿ 10 ಅಂತರರಾಷ್ಟ್ರೀಯ ಕ್ರೀಡಾಂಗಣಗಳ ನಿರ್ಮಾಣ

l ಮೈಸೂರಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ

l ಸಾಹಿತ್ಯ ಭಾಷಾ ಪ್ರಾಧಿಕಾರ ಮತ್ತು ಪಠ್ಯ ಪುಸ್ತಕ ಪ್ರಾಧಿಕಾರಗಳ ರಚನೆ

l ಸಿದ್ಧ ಉಡುಪು ಮತ್ತು ನಿರ್ಮಾಣ ಕಾರ್ಮಿಕರಿಗಾಗಿ ಇಂದಿರಾ ಸಾರಿಗೆ

l ಆರು ಸಾರಿಗೆ ಪ್ರದೇಶಗಳಲ್ಲಿ ಇಂದಿರಾ ಸಂಚಾರಿ ಕ್ಲಿನಿಕ್‌ ಆರಂಭ

l ಹೂಡಿಕೆಗೆ ಉತ್ತೇಜನ ನೀಡಲು ಏಕಗವಾಕ್ಷಿ ವ್ಯವಸ್ಥೆ ಮೂಲಕ ವಿವಿಧ ಮಂಜೂರಾತಿಗಳ ವಿತರಣೆ

l ನವೋದ್ಯಮಗಳಿಗೆ ₹ 1 ಕೋಟಿವರೆಗೆ ಸಹಾಯಧನ

l ತಾಲ್ಲೂಕಿಗೆ ಒಂದು ರುಡ್ ಸೆಟ್ ಮಾದರಿ ತರಬೇತಿ ಕೇಂದ್ರ

l ಅಂಗವಿಕಲರು, ಹಿರಿಯ ನಾಗರಿಕರು ಹಾಗೂ ವಿಧವೆಯವರ ಮಾಸಾಶನ ದುಪ್ಪಟ್ಟು

l ಪ್ರತಿಮನೆಗೂ ನಲ್ಲಿ ನೀರು ಸಂಪರ್ಕ

l ಕೆರೆಗಳನ್ನು ಭರ್ತಿ ಮಾಡಲು ಸರ್.ಎಂ. ವಿಶ್ವೇಶ್ವರಯ್ಯ ಅಭಿಯಾನ

l ಬಿಪಿಎಲ್‌ ಕುಟುಂಬದ ಮಹಿಳೆಯರಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್ ಪೂರೈಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT