ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಕೇಂದ್ರದ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳಿ: ಶಿಕ್ಷಣಾಧಿಕಾರಿ

ಆನೇಕಲ್: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವಸಿದ್ಧತೆ ಸಭೆಯಲ್ಲಿ ಡಿಡಿಪಿಐ
Last Updated 7 ಜೂನ್ 2020, 9:56 IST
ಅಕ್ಷರ ಗಾತ್ರ

ಆನೇಕಲ್: ‘ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಸುಗಮವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಎಲ್ಲ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ರಾಜೇಂದ್ರ ತಿಳಿಸಿದರು.

ಅವರು ತಾಲ್ಲೂಕಿನ ಚಂದಾಪುರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವಸಿದ್ದತೆ ಸಭೆಯಲ್ಲಿ ಅವರು ಮಾತನಾಡಿದರು.

‘ಕೊರೊನಾ ಹಿನ್ನೆಲೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕವಿದೆ. ಹಾಗಾಗಿ ಪರೀಕ್ಷಾ ಕೇಂದ್ರಗಳಲ್ಲಿ ಪ್ರಮಾಣಿತ ಕಾರ್ಯಾಚರಣಾ ವಿಧಾನ ಅಳವಡಿಸಿಕೊಂಡು ಸುಗಮವಾಗಿ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಸಿದ್ಧತೆ ಮಾಡಿಕೊಳ್ಳಬೇಕು. ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು. ಪ್ರತಿ ವಿದ್ಯಾರ್ಥಿಯನ್ನು ಥರ್ಮಲ್‌ ಸ್ಕ್ಯಾನರ್‌ ಮೂಲಕ ತಪಾಸಣೆ ನಡೆಸಲಾಗುವುದು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಒಂದು ತಾಸು ಮುಂಚಿತವಾಗಿ ಬರುವಂತೆ ಪೋಷಕರಿಗೆ ಸೂಚನೆಗಳನ್ನು ನೀಡಬೇಕು’ ಎಂದರು.

ಹಾಗಾಗಿ ಪರೀಕ್ಷಾ ಕೇಂದ್ರಗಳಿಗೆ ಬ್ಯಾಗ್‌ಗಳನ್ನು ತರದಂತೆ ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ. ಪರೀಕ್ಷೆಗಳಿಗೆ ಮುಂಚಿತವಾಗಿ ಒಂದು ಮೀಟರ್‌ ಅಂತರದಲ್ಲಿ ವಿದ್ಯಾರ್ಥಿಗಳು ಸಾಲಿನಲ್ಲಿ ನಿಲ್ಲಲು ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್‌‌ ಮಾಡಬೇಕು. ವಿದ್ಯಾರ್ಥಿಗಳಿಗೆ ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿದೆ ಎಂಬುದನ್ನು ಮೂರು ದಿನ ಮೊದಲು ಮುಂಚಿತವಾಗಿ ತಿಳಿಸುವ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.

ಹಳ್ಳಿಗಳಿಂದ ಬರುವವರಿಗೆ ಅಗತ್ಯವಿದ್ದಲ್ಲಿ ಬಸ್‌ ವ್ಯವಸ್ಥೆ ಮಾಡಬೇಕು. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ. ಖಾಸಗಿ ಶಾಲೆಗಳ ಬಸ್‌ಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್‌.ರಾಮಮೂರ್ತಿ ಮಾತನಾಡಿ, ಆನೇಕಲ್‌ ತಾಲ್ಲೂಕಿನಲ್ಲಿ 19 ಪರೀಕ್ಷಾ ಕೇಂದ್ರಗಳಿವೆ. 6,388 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 29 ಮಂದಿ ಬೇರೆ ತಾಲ್ಲೂಕುಗಳ ವಿದ್ಯಾರ್ಥಿಗಳು ಆನೇಕಲ್‌ನಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ತಾಲ್ಲೂಕಿನಲ್ಲಿ ವ್ಯಾಸಂಗ ಮಾಡುತ್ತಿದ್ದ 65 ವಿದ್ಯಾರ್ಥಿಗಳು ಬೇರೆ ತಾಲ್ಲೂಕುಗಳಲ್ಲಿ ಪರೀಕ್ಷೆ ಬರೆಯಲು ಅನುಮತಿ ಪಡೆದಿದ್ದಾರೆ ಎಂದರು.

ಶಿಕ್ಷಣಾಧಿಕಾರಿ ಗಿರಿಜಾ, ಕ್ಷೇತ್ರ ಸಮನ್ವಯಾಧಿಕಾರಿ ಎನ್‌.ಶಂಕರ ಮೂರ್ತಿ, ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಡಿ.ಮುನಿರಾಜು, ಸಹಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಾಜಪ್ಪ, ಆರ್‌.ಮುನಿಯಲ್ಲಪ್ಪ, ಎಸ್‌ಎಸ್‌ಎಲ್‌ಸಿ ನೋಡಲ್‌ ಅಧಿಕಾರಿ ದತ್ತಗುರು ಹೆಗಡೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT